ಜನಾರ್ದನ ರೆಡ್ಡಿ ವರ್ಸಸ್ ಭರತ ರೆಡ್ಡಿ ಇದೇ ಮೊದಲಲ್ಲ!

0
4

ಮಲ್ಲಿಕಾರ್ಜುನ ಚಿಲ್ಕರಾಗಿ
ಬಳ್ಳಾರಿ: ಗಣಿಜಿಲ್ಲೆ ಬಳ್ಳಾರಿ ಆಂಧ್ರಪ್ರದೇಶದೊಂದಿಗೆ ಕೇವಲ ಗಡಿ ಮಾತ್ರವನ್ನು ಹಂಚಿಕೊಂಡಿಲ್ಲ. ಬದಲಾಗಿ ಅಲ್ಲಿನ ಹೊಡಿ – ಬಡಿ ರಾಜಕಾರಣವನ್ನೂ ಅನುಕರಿಸಿದೆಯೇ? ಎನ್ನುವ ಅನುಮಾನಗಳು ಮತ್ತೆ ಮುನ್ನೆಲೆಗೆ ಬಂದಿವೆ.

2004ರಿಂದ 2012ರವರೆಗೂ ರಿಪಬ್ಲಿಕ್ ಆಫ್ ಬಳ್ಳಾರಿ ಎನ್ನುವ ಕುಖ್ಯಾತಿ ಪಡೆದಿದ್ದ ಬಳ್ಳಾರಿ ಜಿಲ್ಲೆಯಲ್ಲಿ ಇಂತಹದ್ದೆ ರಾಜಕಾರಣ ಆಗ ನಡೆದಿತ್ತು. ಕಳೆದ ಹತ್ತು ವರ್ಷಳಿಂದ ಇಂತಹ ಘಟನೆಗಳು ಕುಗ್ಗಿದ್ದವು. ಆದರೆ ಈಗ ಶಾಸಕರ ನಡುವೆಯೇ ನಡೆದ ಬೀದಿ ಜಗಳ, ಘರ್ಷಣೆ, ಗುಂಡು ಹಾರಿಸುವ ಪ್ರಕರಣ ಮತ್ತೆ ಬಳ್ಳಾರಿಯಲ್ಲಿ ಆಂಧ್ರದಂತೆ ದ್ವೇಷ ರಾಜಕಾರಣ ನೆನಪಿಸಿದೆ.

ಗಂಗಾವತಿ ಶಾಸಕ ಜಿ. ಜನಾರ್ದನ ರೆಡ್ಡಿ, ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ ನಡುವೆ ಮೊದಲಿನಿಂದ ರಾಜಕೀಯ ವೈರತ್ವವಿದೆ. ಈಗ ಸೂರ್ಯನಾರಾಯನ ರೆಡ್ಡಿ ಅವರ ಪುತ್ರ ನಾರಾ ಭರತರೆಡ್ಡಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದು, ಶಾಸಕನಾದಾಗಿನಿಂದಲೂ ಅವಕಾಶ ಸಿಕ್ಕಾಗೆಲ್ಲ ಜನಾರ್ದನ ರೆಡ್ಡಿ ವಿರುದ್ಧ ಗುಟುರು ಹಾಕುತ್ತಲೇ ಬರುತ್ತಿದ್ದಾರೆ. ಜಿ. ಜನಾರ್ದನ ರೆಡ್ಡಿ ಕೂಡ ಭರತ ರೆಡ್ಡಿ ವಿರುದ್ಧ ವಾಗ್ದಾಳಿಯನ್ನೇ ನಡೆಸಿದ್ದಾರೆ. ಈಗ ಬ್ಯಾನರ್ ಕಟ್ಟುವ ವಿಚಾರದಲ್ಲೂ ಅದೇ ಪುನರಾವರ್ತನೆಯಾಗಿದೆ. ವೈಯಕ್ತಿಕ ದ್ವೇಷ ರಾಜಕಾರಣ ಪುನರ್ ನೆನಪಿಸಿದ್ದಾರೆ.

ಇದನ್ನೂ ಓದಿ: ಬಳ್ಳಾರಿ ಪ್ರಕರಣ: ಹಾಲಿ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಿ

ಸದನಲ್ಲೇ ಅಬ್ಬರ: 2023ರಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ಮೊದಲ ಸದನದಲ್ಲಿಯೇ ಶಾಸಕರಾದ ಜಿ. ಜನಾರ್ದನ ರೆಡ್ಡಿ ಮತ್ತು ನಾರಾ ಭರತ ರೆಡ್ಡಿ ಕದನಕ್ಕೆ ಇಳಿದಿದ್ದರು. ಪರಸ್ಪರ ಏಕವಚನದಲ್ಲಿಯೇ ನಿಂಧಿಸಿಕೊಂಡಿದ್ದರು. ನೀನೊಬ್ಬ ಲೂಟಿಕೋರ, ಮಣ್ಣು ಮಾರಿಕೊಂಡು ಬದುಕಿದವನು ಎಂದು ಜನಾರ್ದನ ರೆಡ್ಡಿ ವಿರುದ್ಧ ಭರತ ರೆಡ್ಡಿ ಘರ್ಜಿಸಿದ್ದರು. ಜನಾರ್ದನ ರೆಡ್ಡಿ ಕೂಡ ನೀನೊಬ್ಬ ಬಚ್ಚಾ, ಗಾಂಜಾ ಗಿರಾಕಿ, ಯಾವಾಗಲೂ ನಶೆಯಲ್ಲಿ ತೇಲಾಡುತ್ತಿಯಾ ಎಂದು ತಿರುಗೇಟು ನೀಡಿದ್ದರು. ಮಾತಿನ ಜಟಾಪಟಿ ತೀವ್ರ ವಿಕೋಪ ಮತ್ತು ವೈಯಕ್ತಿಕ ನಿಂದನೆಗೆ ಹೋಗಿತ್ತು. ಈಗಲೂ ಕೂಡ ಬಳ್ಳಾರಿಯಲ್ಲಿ ಬ್ಯಾನರ್ ಕಟ್ಟುವ ವಿಚಾರಕ್ಕೆ ನಡೆದ ಗಲಾಟೆಯಲ್ಲೂ ವೈಯಕ್ತಿಕ ದ್ವೇಷ ಹೊರ ಬಿದ್ದಿದೆ. ಹಲ್ಲೆ, ಮನೆ ಮೇಲೆ ದಾಳಿವರೆಗೂ ಒಬ್ಬರ ನಡುವೆ ಘರ್ಷಣೆ ಸಾಗಿದೆ.

2007ರಲ್ಲೂ ಗಲಾಟೆ: ಇದಕ್ಕೂ ಪೂರ್ವ 2007ರಲ್ಲೂ ಜನಾರ್ದನ ರೆಡ್ಡಿ ಮತ್ತು ಸೂರ್ಯನಾರಾಯಣ ರೆಡ್ಡಿ ನಡುವೆ ದೊಡ್ಡ ಗಲಾಟೆ ನಡೆದಿತ್ತು. ಈ ಹಿಂದೆ ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ವೇಳೆ ಸೂರ್ಯನಾರಾಯಣ ರೆಡ್ಡಿ ಅವರು ಮುಖ್ಯಮಂತ್ರಿ ಅವರ ಆಪ್ತ ಕಾರ್ಯದರ್ಶಿಯಾಗಿದ್ದರು. ಈ ಅವಧಿಯಲ್ಲೂ ಕ್ಷುಲ್ಲಕ ಕಾರಣಕ್ಕೆ ನಡೆದ ಘಟನೆಯೊಂದು ವಿಕೋಪಕ್ಕೆ ತಿರುಗಿತ್ತು. ಈ ವೇಳೆಯೂ ರೆಡ್ಡಿಗಳ ಖಾಸಗಿ ಅಂಗರಕ್ಷಕರು ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಅದೃಷ್ಟವಶಾತ್ ಯಾರಿಗೂ ಏನೂ ಆಗಿರಲಿಲ್ಲ. ಆದರೆ ಜಿ. ಜನಾರ್ದನ ರೆಡ್ಡಿ ಈ ಬಗ್ಗೆ ನೇರ ಆರೋಪ ಮಾಡಿ ನನ್ನನ್ನು ಕೊಲೆ ಮಾಡುವ ಸಂಚು ನಡೆದಿದೆ ಎಂದಿದ್ದರು. ಸೂರ್ಯನಾರಾಯಣ ರೆಡ್ಡಿ ನನ್ನ ಹತ್ಯಗೆ ಸಂಚು ರೂಪಿಸಿದ್ದಾರೆ. ಅಂದಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೂ ಇದಕ್ಕೆ ಕುಮ್ಮಕ್ಕು ನೀಡಿದ್ದಾರೆ ಎಂದು ಆರೋಪಿಸಿದರು.

ಇನ್ನೂ ಆರದ ಕಿಡಿ: ಆಗಿನಿಂದಲೂ ಹೊತ್ತಿಕೊಂಡು ರಾಜಕೀಯ ದ್ವೇಷದ ಕಿಡಿ ಇನ್ನೂ ಆರಿಲ್ಲ. ಈಗ ಬ್ಯಾನರ್ ಕಟ್ಟುವ ವಿಚಾರಕ್ಕೆ ನಡೆದ ಘಟನೆ ಕೊಲೆಯಲ್ಲಿ ಅಂತ್ಯವಾಗಿದ್ದರೂ, ಮಾತಿನ ಘರ್ಷಣೆ, ಪರಸ್ಪರ ನಿಂದನೆಗಳು ನಿಂತಿಲ್ಲ. ಪೊಲೀಸ್ ಪಹರೆಯೊಂದಿಗೆ ಸದ್ಯಕ್ಕೆ ಸಣ್ಣಗಾಗಿದ್ದು, ಏನಾಗಲಿದೆಯೋ ಎನ್ನುವ ಭೀತಿ ಕೂಡ ಸಾರ್ವಜನಿಕರಲ್ಲಿ ಕಾಡುತ್ತಿದೆ.

ಪುತ್ಥಳಿ ಅನಾವರಣ ಮುಂದಕ್ಕೆ: ಜ. 3ರಂದು ಎಸ್ಪಿ ಸರ್ಕಲ್‌ನಲ್ಲಿ ಅನಾವರಣಗೊಳ್ಳಬೇಕಿದ್ದ ವಾಲ್ಮೀಕಿ ಪುತ್ಥಳಿ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಬ್ಯಾನರ್ ಕಟ್ಟುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ನಡುವೆ ನಡೆದ ಹಲ್ಲೆ, ಹತ್ಯೆ ಘಟನೆಯಿಂದ ಮುಂದಕ್ಕೆ ಹಾಕಲಾಗಿದೆ. ನಿರ್ದಿಷ್ಟ ದಿನಾಂಕವೇನೂ ಘೋಷಣೆಯಾಗಿಲ್ಲ ಆದರೆ, ಮುಂದೂಡಲಾಗಿದೆ ಎಂದು ಕಾಂಗ್ರೆಸ್ ಮುಖಂಡರು ಹೇಳಿಕೆ ನೀಡಿದ್ದಾರೆ. ಎಸ್ಪಿ ಸರ್ಕಲ್‌ನಲ್ಲಿ ನಿರ್ಮಾಣ ಮಾಡಿದ ವೇದಿಕೆ, ಪುತ್ಥಳಿ ಪ್ರತಿಷ್ಠಾಪನೆ ಅರ್ಧಕ್ಕೆ ನಿಂತಿದೆ.

Previous articleಬ್ಯಾನರ್ ಕಿಡಿ, ನಿಷೇಧಾಜ್ಞೆ, ರಾಜಕೀಯದಲ್ಲಿ ಕಂಪನ