ಬಳ್ಳಾರಿ: ಬ್ಯಾನರ್ ಕಟ್ಟುವ ವಿಚಾರಕ್ಕೆ ಹೊತ್ತಿಕೊಂಡ ಕಿಡಿಯೊಂದು ಬಳ್ಳಾರಿ ರಾಜಕೀಯದಲ್ಲಿ ಮತ್ತೆ ಕಂಪನ ಎಬ್ಬಿಸಿದೆ. ಘರ್ಷಣೆ, ಸಾವು-ನೋವಿನ ಬಳಿಕ ಬಳ್ಳಾರಿಯಲ್ಲಿ ಉಂಟಾಗಿರುವ ಪ್ರಕ್ಷುಬ್ಧ ವಾತಾವರಣ ತಿಳಿಗೊಳಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಒಂದು ಸುಮೋಟೋ, ಮೂರು ಖಾಸಗಿ ದೂರು ಸೇರಿ ಒಟ್ಟು ನಾಲ್ಕು ಪ್ರತ್ಯೇಕ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಇದರ ನಡುವೆಯೇ ಘಟನೆ ಸಂಬಂಧ ಹೇಳಿಕೆ ಭರದಲ್ಲಿ ಶಾಸಕರಾದ ಜಿ. ಜನಾರ್ದನ ರೆಡ್ಡಿ, ಭರತ ರೆಡ್ಡಿ ಪರಸ್ಪರ ಹೇಳಿಕೆ, ಪ್ರತಿ ಹೇಳಿಕೆ ಏಕವಚನ, ಅವಾಚ್ಯ ಶಬ್ದಗಳ ನಿಂದನೆ ಮೂಲಕ ದ್ವೇಷ ರಾಜಕಾರಣವನ್ನು ಪುನರುಚ್ಚರಿಸಿದ್ದಾರೆ.
ಮಾಜಿ ಸಚಿವ ಶ್ರೀರಾಮುಲು, ಶಾಸಕ ಜನಾರ್ದನ ರೆಡ್ಡಿ ಮನೆಗಳಿರುವ ಹಾಗೂ ಶುಕ್ರವಾರ ಗಲಾಟೆ ನಡೆದ ಹಾವಂಬಾವಿ ಪ್ರದೇಶದಲ್ಲಿ ಕಲಂ 144 ಅನ್ವಯ ನಿಷೇದಾಜ್ಞೆ ಜಾರಿ ಮಾಡಲಾಗಿದೆ. ಘಟನೆಯಲ್ಲಿ ಏರ್ ಫೈರಿಂಗ್‌ನಲ್ಲಿ ಗುಂಡೇಟಿಗೆ ಬಲಿಯಾದ ರಾಜಶೇಖರ ಮನೆ ಸೇರಿ ಬಳ್ಳಾರಿಯ ಪ್ರಮುಖ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಪಹರೆ ಹಾಕಲಾಗಿದೆ. ಹೆಚ್ಚುವರಿ ಭದ್ರತೆಗಾಗಿ ವಿಜಯನಗರ, ಚಿತ್ರದುರ್ಗ, ಕೊಪ್ಪಳ, ದಾವಣಗೆರೆ ಸೇರಿ ನೆರೆ-ಹೊರೆ ಜಿಲ್ಲೆಗಳ ಎಸ್ಪಿಗಳನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಬಳ್ಳಾರಿಗೆ ಆಗಮಿಸಿ ಘಟನೆ ಮಾಹಿತಿ ಪಡೆದಿದ್ದು, ಕಾಂಗ್ರೆಸ್ ಸರಕಾರ ಮತ್ತು ಕಾಂಗ್ರೆಸ್ ಶಾಸಕ ಭರತರೆಡ್ಡಿ ಅವರ ಪೂರ್ವ ನಿಯೋಜಿತ ಕೃತ್ಯವಿದು. ಇದೊಂದು ದೌರ್ಜನ್ಯ, ದಬ್ಬಾಳಿಕೆ, ದ್ವೇಷ ಸಾಧಿಸುವ ಸರಕಾರ ಎಂದು ಆರೋಪಿಸಿದ್ದಾರೆ. ಇದರ ನಡುವೆ ಬಳ್ಳಾರಿಯಲ್ಲಿನ ಪರಿಸ್ಥಿತಿ ಹತೋಟಿಗೆ ತರಲು ಖುದ್ದು ಗೃಹಮಂತ್ರಿ ಡಾ. ಜಿ. ಪರಮೇಶ್ವರ ಸೂಚನೆ ಮೇರೆಗೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್.ಹಿತೇಂದ್ರ ಬಳ್ಳಾರಿಗೆ ದೌಡಾಯಿಸಿ ಮೊಕ್ಕಾಂ ಹೂಡಿದ್ದಾರೆ.
ಅಂತ್ಯಸಂಸ್ಕಾರ: ಗುಂಡೇಟಿಗೆ ಬಲಿಯಾಗಿರುವ ಕಾಂಗ್ರೆಸ್ ಕಾರ್ಯಕರ್ತರ ರಾಜಶೇಖರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ತಾಯಿ, ಸಹೋದರಿಯರು ಕಣ್ಣೀರು ಹಾಕಿ, ಶೋಕಸಾಗರದಲ್ಲಿ ಮುಳುಗಿದ್ದರು. ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ, ದೇಹದಲ್ಲಿ ಇದ್ದ ಗುಂಡನ್ನು ಹೊರತೆಗೆದು ಅಂತ್ಯಸಂಸ್ಕಾರ ಮಾಡಲಾಯಿತು. ಸ್ವತಃ ಶಾಸಕ ನಾರಾ ಭರತ ರೆಡ್ಡಿ, ಜೆ.ಎನ್. ಗಣೇಶ ಹೆಗಲುಕೊಟ್ಟು ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿ ಮೃತನ ಕುಟುಂಬಕ್ಕೆ ಸಾಂತ್ವಾನ ಹೇಳಿ, ಧೈರ್ಯ ತುಂಬಿದರು.
ವಿವರಣೆ ಕೇಳಿದ ಡಿಸಿಎಂ: ಬಳ್ಳಾರಿಯಲ್ಲಿ ಸಂಭವಿಸಿದ ಘರ್ಷಣೆಯ ಬಗ್ಗೆ ಖುದ್ದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶಾಸಕ ಭರತ ರೆಡ್ಡಿಗೆ ದೂರವಾಣಿ ಕರೆ ಮಾಡಿ ವಿವರಣೆ ಕೇಳಿದ್ದಾರೆ. ಪಕ್ಷದ ಹಿರಿಯ ನಾಯಕರು ಕೂಡ ಈ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಜ. 3ರಂದು ನಡೆಯಬೇಕಾದ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮ ಮುಂದೂಡುವ ಸಲಹೆಯನ್ನು ಕೆಲವು ನೀಡಿದ್ದಾರೆ. ಆದರೆ ಪ್ರತಿಷ್ಠೆಯಾಗಿ ಪಡೆದಿರುವ ಭರತ ರೆಡ್ಡಿ ಈ ಕಾರ್ಯಕ್ರವನ್ನು ನಿಲ್ಲಿಸುವುದಿಲ್ಲ ಎಂದು ಹೇಳಿ ಎಲ್ಲ ತಯಾರಿಯನ್ನು ನಡೆಸಿದ್ದಾರೆ.
ತಡರಾತ್ರಿ ಧರಣಿ ಕುಳಿತ ಶಾಸಕ: ಬ್ಯಾನರ್ ಸಂಬಂಧ ನಡೆದ ಗಲಾಟೆ ಬಳಿಕ ಗುರುವಾರ ತಡರಾತ್ರಿವರೆಗೂ ಜನಾರ್ದನ ರೆಡ್ಡಿ ಮತ್ತು ಭರತ ರೆಡ್ಡಿ ಬೆಂಬಲಿಗರ ನಡುವೆ ತಿಕ್ಕಾಟ ನಡೆದಿತ್ತು. ಭರತ ರೆಡ್ಡಿ ಜನಾರ್ದನ ರೆಡ್ಡಿ ನಿವಾಸದ ಎದುರು ಪ್ರತಿಭಟನೆ ಕುಳಿತು ರೆಡ್ಡಿಯನ್ನು ಬಂಧಿಸುವಂತೆ ಆಗ್ರಹಿಸಿದರು. ವಾಲ್ಮೀಕಿ ಪುತ್ಥಳಿ ಅನಾವರಣ ಮಾಡಲು ವಿರೋಧಿಸಿ ಜನಾರ್ದನ ರೆಡ್ಡಿ ಸಂಚು ಮಾಡಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು. ಪೊಲೀಸರು ಸಮಾಧಾನಪಡಿಸಿ ಭರತ ರೆಡ್ಡಿ ಮನವೊಲಿಸಿದರು.
ಶಾಸಕ ರೆಡ್ಡಿ ಸೇರಿ ಹನ್ನೊಂದು ಜನರ ವಿರುದ್ಧ ದೂರು: ಬ್ಯಾನರ್ ಕಟ್ಟುವ ವಿಷಯಕ್ಕೆ ಸಂಬಂಧಿಸಿದ ಘಟನೆ ಕುರಿತಾಗಿ ಶಾಸಕ ಜಿ. ಜನಾರ್ದನ ರೆಡ್ಡಿ ಸೇರಿ ಒಟ್ಟು ಹನ್ನೊಂದು ಜನರ ವಿರುದ್ಧ ತಡರಾತ್ರಿ ಪ್ರಕರಣ ದಾಖಲಾಗಿದೆ. ಗಂಗಾವತಿ ಶಾಸಕ ಜಿ.ಜನಾರ್ದನರೆಡ್ಡಿ, ಮಾಜಿ ಶಾಸಕ ಜಿ. ಸೋಮಶೇಖರ ರೆಡ್ಡಿ, ಮಾಜಿ ಸಚಿವ ಬಿ. ಶ್ರೀರಾಮುಲು, ಪಾಲಿಕೆ ಸದಸ್ಯ ಮೋತ್ಕರ್ ಶ್ರೀನಿವಾಸ್, ಮುಖಂಡರದ ಪ್ರಕಾಶ್ ರೆಡ್ಡಿ, ರಮಣ, ಪಾಲಣ್ಣ, ದಿವಾಕರ್, ಬುಡಾ ಮಾಜಿ ಅಧ್ಯಕ್ಷ ಮಾರುತಿ ಪ್ರಸಾದ್, ದಮ್ಮೂರು ಶೇಖರ್, ಅಲಿಖಾನ್ ಸೇರಿ ಒಟ್ಟು ಹನ್ನೊಂದು ಜನರ ವಿರುದ್ಧ ಶಾಸಕ ಭರತ ರೆಡ್ಡಿ ಅಪ್ತ ಚಾನಾಳ್ ಶೇಖರ್ ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆದರೆ ಜನಾರ್ದನ ರೆಡ್ಡಿ ಅವರ ಬೆಂಬಲಿಗರು ಈವರೆಗೂ ಯಾವುದೇ ಕೇಸ್ ದಾಖಲಿಸಿಲ್ಲ.
ರೆಡ್ಡಿ ಮನೆಗೆ ಫೈಯರ್: ಜ. 1ರಂದು ಗಲಾಟೆ ನಡೆಯುತ್ತಿದ್ದ ವೇಳೆಯೇ ಶಾಸಕ ಭರತರೆಡ್ಡಿ ಆಪ್ತರ ಖಾಸಗಿ ಗನ್‌ಮ್ಯಾನ್ ಒಬ್ಬರು ರೆಡ್ಡಿಯ ಗಾಜಿನ ಮನೆಯತ್ತ ಫೈಯರ್ ಮಡಿದ ವಿಡಿಯೋಗಳು ಹೊರ ಬಿದ್ದಿವೆ. ಮೊದಲಿಗೆ ವ್ಯಕ್ತಿಯೊಬ್ಬ ಕಲ್ಲು ತೂರಿದ್ದಾನೆ. ಬಳಿಕ ಖಾಸಗಿ ಗನ್‌ಮ್ಯಾನ್ ಬಂದು ಮನೆಯತ್ತ ಗುಂಡು ಹಾರಿಸಿದ್ದಾನೆ. ಗುಂಡು ಗಾಜಿಗೆ ತಾಗಿ ರೆಡ್ಡಿ ಮನೆಯ ಗ್ಲಾಸು ಪುಡಿ-ಪುಡಿಯಾಗಿದೆ.
ವರದಿ ಬಂದ ಮೇಲೆ ಕ್ರಮ: ಬಳ್ಳಾರಿ ನಗರದಲ್ಲಿ ನಡೆದ ಗಲಾಟೆ ಸಂಬಂಧ ಸರ್ಕಾರ ವರದಿ ತರಿಸಿಕೊಂಡು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಂಡು, ಭಯದ ವಾತಾವರಣ ದೂರ ಮಾಡಲಿದ್ದಾರೆ ಎಂದು ಸಂಸದ ಈ. ತುಕಾರಾಂ ಹೇಳಿದರು.




















