ಬೆಂಗಳೂರು / ಬಳ್ಳಾರಿ: ಬಳ್ಳಾರಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿತಗೊಂಡಿದ್ದು, ಓರ್ವನ ಪ್ರಾಣಹಾನಿಗೆ ಕಾರಣವಾದ ಗಂಭೀರ ಘಟನೆಯ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಕಾಂಗ್ರೆಸ್ ಸರ್ಕಾರ ಕೇವಲ ಒಂದು ದಿನದ ಹಿಂದಷ್ಟೇ ಅಧಿಕಾರ ಸ್ವೀಕರಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಅಮಾನತು ಮಾಡಿರುವುದು ಆಡಳಿತದ ಅಪ್ರಬುದ್ಧತೆ ಮತ್ತು ವೈಫಲ್ಯವನ್ನು ಮುಚ್ಚಿಕೊಳ್ಳುವ ಬೇಜವಾಬ್ದಾರಿತನಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಟುವಾಗಿ ಟೀಕಿಸಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಮಾಡಿರುವ ಅವರು, “ಮಾನ್ಯ ಮುಖ್ಯಮಂತ್ರಿಗಳೇ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ನಿಮ್ಮದೇ ಪಕ್ಷದ ಶಾಸಕರ ಪ್ರಚೋದನಕಾರಿ ನಡವಳಿಕೆ ಹಾಗೂ ಆಡಳಿತ ಪಕ್ಷದ ಕಾರ್ಯಕರ್ತರ ಪುಂಡಾಟಿಕೆಯನ್ನು ನಿಯಂತ್ರಿಸುವ ಬದಲು, ಓರ್ವ ಪ್ರಾಮಾಣಿಕ ಅಧಿಕಾರಿಯನ್ನು ಬಲಿಪಶುವಾಗಿಸುವುದು ಎಷ್ಟು ಸರಿ?” ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಬಳ್ಳಾರಿ ಪ್ರಕರಣ: ಕಾಂಗ್ರೆಸ್ ಕಾರ್ಯಕರ್ತ ಸಾವು ಹಿನ್ನೆಲೆ ಸತ್ಯಶೋಧನೆಗೆ ಇಳಿದ ಕಾಂಗ್ರೆಸ್
ಕನಿಷ್ಠ ಮಟ್ಟದ ಪರಿಸ್ಥಿತಿಯನ್ನು ಅವಲೋಕಿಸಲು ಸಮಯಾವಕಾಶ ನೀಡದೇ, ಕೇವಲ ಒಂದು ದಿನದಲ್ಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಅಮಾನತು ಮಾಡಿರುವುದು ನಿಮ್ಮ ಆಡಳಿತದ ದಿವಾಳಿತನವನ್ನು ತೋರಿಸುತ್ತದೆ ಎಂದು ವಿಜಯೇಂದ್ರ ಆರೋಪಿಸಿದ್ದಾರೆ. ಸಾರ್ವಜನಿಕವಾಗಿ ಗುಂಡು ಹಾರಿಸಿ ಭಯೋತ್ಪಾದನೆ ನಡೆಸಿದ ಶಾಸಕರ ಬೆಂಬಲಿಗರ ವಿರುದ್ಧ ಕ್ರಮ ಕೈಗೊಳ್ಳುವ ಧೈರ್ಯ ಸರ್ಕಾರಕ್ಕಿದೆಯೇ ಎಂದು ಪ್ರಶ್ನಿಸಿರುವ ಅವರು, ಕೇವಲ ಅಧಿಕಾರಿಗಳ ತಲೆದಂಡದಿಂದ ಸತ್ಯವನ್ನು ಮುಚ್ಚಿಹಾಕಲು ಸಾಧ್ಯವಿಲ್ಲ ಎಂದಿದ್ದಾರೆ.
ಬಳ್ಳಾರಿಯಲ್ಲಿ ನಡೆದ ಗುಂಡಿನ ದಾಳಿಯ ಹಿಂದೆ ಯಾರು ಇದ್ದಾರೆ? ಯಾರ ಪ್ರಚೋದನೆಯಿಂದ ಈ ದುರ್ಘಟನೆ ನಡೆದಿದೆ? ಎಂಬ ಸತ್ಯ ಸರ್ಕಾರದ ಪ್ರಭಾವದಲ್ಲಿರುವ ತನಿಖೆಯಿಂದ ಹೊರಬರಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಸ್ವಲ್ಪವಾದರೂ ನೈತಿಕತೆ ಉಳಿದಿದ್ದರೆ, ಹಾಲಿ ಹೈಕೋರ್ಟ್ ನ್ಯಾಯಾಧೀಶರಿಂದ ನಿಷ್ಪಕ್ಷಪಾತ ತನಿಖೆ ನಡೆಸಿಸಿ, ರಾಜ್ಯವೇ ತಲೆತಗ್ಗಿಸುವಂತಹ ಗೂಂಡಾಗಿರಿ ಮತ್ತು ಹಿಂಸಾತ್ಮಕ ಕೃತ್ಯಗಳಲ್ಲಿ ಭಾಗಿಯಾದ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಅಂಗಾಂಗ ದಾನದಲ್ಲಿ ಕರ್ನಾಟಕಕ್ಕೆ ರಾಷ್ಟ್ರ ಮಟ್ಟದಲ್ಲಿ 3ನೇ ಸ್ಥಾನ
ತಮ್ಮದೇ ಆಡಳಿತದ ವೈಫಲ್ಯವನ್ನು ಮರೆಮಾಚಲು ಪ್ರಾಮಾಣಿಕ ಅಧಿಕಾರಿಗಳನ್ನು ಬಲಿಪಶು ಮಾಡುವುದು, ಅವರ ಆತ್ಮಸ್ಥೈರ್ಯ ಕುಗ್ಗಿಸುವ ಕಾಂಗ್ರೆಸ್ ಸರ್ಕಾರದ ಈ ಕೆಟ್ಟ ಪ್ರವೃತ್ತಿ ಕೂಡಲೇ ನಿಲ್ಲಬೇಕು ಎಂದು ಬಿ.ವೈ. ವಿಜಯೇಂದ್ರ ಆಗ್ರಹಿಸಿದ್ದಾರೆ.





















