ಬಳ್ಳಾರಿ: ಬಳ್ಳಾರಿಯಲ್ಲಿ ಬ್ಯಾನರ್ ಅಳವಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಗಲಭೆ ಹಾಗೂ ಕಾಂಗ್ರೆಸ್ ಕಾರ್ಯಕರ್ತನ ಸಾವಿನ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ಕಂಡುಬಂದಿದೆ. ಶಾಸಕ ಭರತರೆಡ್ಡಿ ಆಪ್ತ ಸತೀಶರೆಡ್ಡಿ ಅವರ ಕಡೆಯ ಖಾಸಗಿ ಭದ್ರತಾ ಸಿಬ್ಬಂದಿಯಾಗಿದ್ದ ಇಬ್ಬರು ಗನ್ ಮ್ಯಾನ್‌ಗಳನ್ನು ಬ್ರೂಸ್ ಪೇಟೆ ಪೊಲೀಸರು ವಶಕ್ಕೆ ಪಡೆದು ಬಂಧಿಸಿದ್ದಾರೆ.
ಜ.1 ರಂದು ಮಾಜಿ ಸಚಿವ ಜನಾರ್ದನರೆಡ್ಡಿ ಅವರ ನಿವಾಸದ ಮುಂದೆ ಬ್ಯಾನರ್ ಅಳವಡಿಸುವ ವೇಳೆ ಎರಡು ಗುಂಪುಗಳ ನಡುವೆ ತೀವ್ರ ಗಲಾಟೆ ನಡೆದಿತ್ತು. ಈ ಸಂದರ್ಭ ಖಾಸಗಿ ಗನ್ ಮ್ಯಾನ್‌ಗಳು ಏರ್ ಫೈಯರ್ ನಡೆಸಿದ್ದಾರೆ. ಗೊಂದಲದ ನಡುವೆ ಆಕಸ್ಮಿಕವಾಗಿ ಗುಂಡು ತಗುಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಮೃತಪಟ್ಟಿದ್ದರು.
ಇದನ್ನೂ ಓದಿ: ಬಳ್ಳಾರಿ ಪ್ರಕರಣ: ಕಾಂಗ್ರೆಸ್ ಕಾರ್ಯಕರ್ತ ಸಾವು ಹಿನ್ನೆಲೆ ಸತ್ಯಶೋಧನೆಗೆ ಇಳಿದ ಕಾಂಗ್ರೆಸ್
ಏರ್ ಫೈಯರ್‌ನಿಂದ ದುರಂತ: ಪೊಲೀಸ್ ಮೂಲಗಳ ಪ್ರಕಾರ, ಜನರನ್ನು ಚದುರಿಸುವ ಉದ್ದೇಶದಿಂದ ಗನ್ ಮ್ಯಾನ್‌ಗಳು ಗಾಳಿಗೆ ಗುಂಡು ಹಾರಿಸಿದ್ದಾರೆ ಎನ್ನಲಾಗಿದ್ದು, ಅದೇ ವೇಳೆ ಗುಂಡು ದಿಕ್ಕು ತಪ್ಪಿ ರಾಜಶೇಖರ್‌ಗೆ ತಗುಲಿ ಅವರು ಸ್ಥಳದಲ್ಲೇ ಗಂಭೀರ ಗಾಯಗೊಂಡು ನಂತರ ಮೃತಪಟ್ಟಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಖಾಸಗಿ ಗನ್ ಮ್ಯಾನ್‌ಗಳನ್ನು ಈಗಾಗಲೇ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಅವರಿಂದ ಉಪಯೋಗಿಸಲಾದ ಶಸ್ತ್ರಾಸ್ತ್ರಗಳು ಹಾಗೂ ಗುಂಡಿನ ಬಳಕೆಗೆ ಅನುಮತಿ ಇದ್ದಿತ್ತೇ ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಸತೀಶರೆಡ್ಡಿ ಸ್ಥಿತಿ ಗಂಭೀರ: ಘಟನೆಯಲ್ಲಿ ಶಾಸಕ ಭರತರೆಡ್ಡಿ ಆಪ್ತ ಸತೀಶರೆಡ್ಡಿ ಗಾಯಗೊಂಡಿದ್ದು, ಅವರನ್ನು ಬೆಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸತೀಶರೆಡ್ಡಿಯ ಜೊತೆಗೆ ಇನ್ನಿಬ್ಬರು ಖಾಸಗಿ ಗನ್ ಮ್ಯಾನ್‌ಗಳು ಸಹ ಆಸ್ಪತ್ರೆಯಲ್ಲೇ ಇರುವ ಮಾಹಿತಿ ಲಭ್ಯವಾಗಿದೆ.
ತನಿಖೆ ತೀವ್ರಗೊಳಿಸಿದ ಪೊಲೀಸರು: ಘಟನೆಗೆ ಸಂಬಂಧಿಸಿದಂತೆ ಬ್ಯಾನರ್ ಅಳವಡಿಕೆಗೆ ಅನುಮತಿ ಇದ್ದಿತ್ತೇ? ಖಾಸಗಿ ಗನ್ ಮ್ಯಾನ್‌ಗಳಿಗೆ ಶಸ್ತ್ರಾಸ್ತ್ರ ಬಳಸುವ ಕಾನೂನು ಮಾನ್ಯತೆ ಇದೆಯೇ? ಏರ್ ಫೈಯರ್ ನಡೆಸಲು ಯಾರು ಸೂಚನೆ ನೀಡಿದ್ದರು? ಎಂಬ ಅಂಶಗಳನ್ನು ಪೊಲೀಸರು ಆಳವಾಗಿ ಪರಿಶೀಲಿಸುತ್ತಿದ್ದಾರೆ.






















