ಬಳ್ಳಾರಿ ಪ್ರಕರಣ: ಕಾಂಗ್ರೆಸ್ ಕಾರ್ಯಕರ್ತ ಸಾವು ಹಿನ್ನೆಲೆ ಸತ್ಯಶೋಧನೆಗೆ ಇಳಿದ ಕಾಂಗ್ರೆಸ್

0
1

ಬಳ್ಳಾರಿ: ಬಳ್ಳಾರಿ ನಗರದಲ್ಲಿ ಬ್ಯಾನರ್ ಅಳವಡಿಸುವ ವೇಳೆ ನಡೆದ ಗಲಾಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಮೃತಪಟ್ಟಿರುವ ಘಟನೆಗೆ ಸಂಬಂಧಿಸಿ ಕಾಂಗ್ರೆಸ್ ಪಕ್ಷ ಗಂಭೀರವಾಗಿ ಸತ್ಯಶೋಧನೆಗೆ ಇಳಿದಿದೆ. ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಸೂಚನೆಯ ಮೇರೆಗೆ ಹಿರಿಯ ಕಾಂಗ್ರೆಸ್ ಮುಖಂಡರನ್ನೊಳಗೊಂಡ ಸತ್ಯಶೋಧನಾ ನಿಯೋಗವನ್ನು ರಚಿಸಲಾಗಿದೆ.

ಈ ಸತ್ಯಶೋಧನಾ ತಂಡವು ಬಳ್ಳಾರಿಗೆ ಆಗಮಿಸಿದ್ದು, ನಗರದ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿ ಇಡೀ ಘಟನೆಯ ಕುರಿತು ಮಾಹಿತಿ ಸಂಗ್ರಹಿಸುತ್ತಿದೆ. ಗಲಾಟೆ ವೇಳೆ ಮೃತಪಟ್ಟ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಅವರ ಸಾವಿನ ಹಿನ್ನಲೆ, ಘಟನೆ ನಡೆದ ಪರಿಸ್ಥಿತಿ ಹಾಗೂ ಇದಕ್ಕೆ ಕಾರಣವಾದ ಅಂಶಗಳ ಕುರಿತು ಸಮಗ್ರ ಪರಿಶೀಲನೆ ನಡೆಸಲಾಗುತ್ತಿದೆ.

ಇದನ್ನೂ ಓದಿ:  ಅಂಗಾಂಗ ದಾನದಲ್ಲಿ ಕರ್ನಾಟಕಕ್ಕೆ ರಾಷ್ಟ್ರ ಮಟ್ಟದಲ್ಲಿ 3ನೇ ಸ್ಥಾನ

ಹಿರಿಯ ನಾಯಕರ ನೇತೃತ್ವದ ಸತ್ಯಶೋಧನಾ ನಿಯೋಗ: ಸತ್ಯಶೋಧನಾ ನಿಯೋಗಕ್ಕೆ ಮಾಜಿ ಸಚಿವ ಹೆಚ್.ಎಂ. ರೇವಣ್ಣ ಅವರು ನೇತೃತ್ವ ವಹಿಸಿದ್ದು, ನಿಯೋಗದಲ್ಲಿ ಮಾಜಿ ಸಚಿವ ಹೆಚ್.ಎಂ. ರೇವಣ್ಣ. ಹಿರಿಯ ಕಾಂಗ್ರೆಸ್ ನಾಯಕ ಜಯಪ್ರಕಾಶ್ ಹೆಗ್ಡೆ. ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ. ರಾಯಚೂರು ಲೋಕಸಭಾ ಸದಸ್ಯ ಕುಮಾರ್ ನಾಯ್ಕ್. ವಿಧಾನಪರಿಷತ್ ಸದಸ್ಯರು ಜಕ್ಕಪ್ಪನವರ್ ಹಾಗೂ ಬಸನಗೌಡ ಬಾದರ್ಲಿ ಇವರು ಸೇರಿದ್ದಾರೆ.

ನಿಯೋಗವು ಬಳ್ಳಾರಿ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿ, ಸ್ಥಳೀಯ ಕಾಂಗ್ರೆಸ್ ಮುಖಂಡರು, ಪರಿಶಿಷ್ಠ ಪಂಗಡದ ನಾಯಕರು ಹಾಗೂ ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿ ಬ್ಯಾನರ್ ಗಲಾಟೆಗೆ ಸಂಬಂಧಿಸಿದಂತೆ ಮಾಹಿತಿ ಪಡೆದುಕೊಳ್ಳುತ್ತಿದೆ.

ಮೃತ ಕಾರ್ಯಕರ್ತನ ಮನೆಗೆ ಭೇಟಿ: ಸಭೆ ಬಳಿಕ, ಸತ್ಯಶೋಧನಾ ನಿಯೋಗವು ಘಟನೆಯಲ್ಲಿ ಮೃತಪಟ್ಟ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಅವರ ನಿವಾಸಕ್ಕೆ ಭೇಟಿ ನೀಡಿ, ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸಿ ಅವರ ಅಹವಾಲು ಆಲಿಸುವ ನಿರ್ಧಾರ ಕೈಗೊಂಡಿದೆ.

ಇದನ್ನೂ ಓದಿ: 153 ಎಕರೆಗಳಲ್ಲಿ ‘ವಿಶ್ವಗುರು ಬಸವಣ್ಣ ಜೀವವೈವಿಧ್ಯ ಉದ್ಯಾನ’ – ಸಚಿವ ಸಂಪುಟದ ಒಪ್ಪಿಗೆ

ಈ ಘಟನೆಯ ಸತ್ಯಾಸತ್ಯತೆ, ಗಲಾಟೆಗೆ ಕಾರಣವಾದ ಹಿನ್ನೆಲೆ ಹಾಗೂ ರಾಜಕೀಯ ಅಥವಾ ಇತರ ಪಿತೂರಿಗಳಿರುವುದೇ ಎಂಬುದನ್ನು ಆಳವಾಗಿ ಪರಿಶೀಲಿಸಿ, ಕೆಪಿಸಿಸಿ ಹಾಗೂ ಎಐಸಿಸಿ ನಾಯಕರಿಗೆ ವಿವರವಾದ ವರದಿ ಸಲ್ಲಿಸಲಾಗುತ್ತದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

Previous articleಅಂಗಾಂಗ ದಾನದಲ್ಲಿ ಕರ್ನಾಟಕಕ್ಕೆ ರಾಷ್ಟ್ರ ಮಟ್ಟದಲ್ಲಿ 3ನೇ ಸ್ಥಾನ