ಬಾಗಲಕೋಟೆ: ಪಿಸ್ತೂಲ್ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದ ವ್ಯಕ್ತಿ ಹಾಗೂ ಪಿಸ್ತೂಲಿನ ಅಸಲಿ ಮಾಲೀಕನ ವಿರುದ್ಧ ಮುಧೋಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪಿಸ್ತೂಲಿನ ಪರವಾನಗಿ ಹೊಂದಿದ್ದ ಸುಭಾಷ್ ಪಾಟೀಲ ಹಾಗೂ ಪರವಾನಿಗಿ ಇಲ್ಲದೇ ಅದನ್ನು ಹಿಡಿದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟ ವಿಜಯಕುಮಾರ್ ಹುದ್ದಾರ ವಿರುದ್ಧ ದೂರು ದಾಖಲಾಗಿದೆ. ಇಬ್ಬರು ಆರೋಪಿಗಳು ಮುಧೋಳ ತಾಲೂಕಿನ ಸೋರಗಾಂವ ಗ್ರಾಮದವರು.
ಶಸ್ತ್ರಾಸ್ತ್ರ ಹಿಡಿದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ ಹಿನ್ನೆಲೆಯಲ್ಲಿ ಅವರ ಮೇಲೆ ಕಲಂ 351-BNS-2023, ಸಹ ಕಲಂ 25(1)(B)(h), 30 ಶಸ್ತ್ರಾಸ್ತ್ರ ಕಾಯ್ದೆ 1959 &67 ಐಟಿ ಕಾಯ್ದೆ 2000 ಅಡಿಯಲ್ಲಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.









