ಚಾಮರಾಜನಗರ: ನಾಪತ್ತೆಯಾಗಿದ್ದ ತಂದೆಯೂ ಇನ್‌ಸ್ಟಾಗ್ರಾಮ್‌ನ ವಿಡಿಯೋ ಒಂದರಲ್ಲಿ ಕಾಣಿಸಿಕೊಂಡ ಕೂಡಲೇ ಮಗನು ತಂದೆಯನ್ನು ಹುಡುಕಿಕೊಂಡು ಬಂದು ಮತ್ತೆ ತನ್ನ ಮನೆಗೆ ಕರೆದುಕೊಂಡು ಹೋದ ಘಟನೆ ತಾಲೂಕಿನ ಸಂತೇಮರಹಳ್ಳಿಯಲ್ಲಿ ನಡೆದಿದೆ.
ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯ ಅಮರ್ಪುರ್ ತಾಲೂಕಿನ ಧನ್ವಾಸಿ ಗ್ರಾಮದ ಪ್ರೀತಂ ಸಿಂಗ್(60) ಎಂಬವರು ಮತ್ತೆ ಕುಟುಂಬ ಸೇರಿರುವವರು.
ಏನಿದು ಘಟನೆ?: ಪ್ರೀತಂಸಿಂಗ್ ಆಗಾಗ ಕುಟುಂಬದವರೊಂದಿಗೆ ಕೂಲಿ ಕೆಲಸಕ್ಕೆ ರಾಜ್ಯದ ವಿವಿಧೆಡೆಗೆ ಬರುತ್ತಿದ್ದರು. ಆದರೆ, ಇತ್ತೀಚೆಗೆ ಆಕಸ್ಮಿಕವಾಗಿ ಕುಟುಂಬದಿಂದ ಬೇರೆಯಾಗಿದ್ದ ಪ್ರೀತಂಸಿಂಗ್ ಅಚಾನಾಕ್ಕಾಗಿ ಜಿಲ್ಲೆಯ ಯಳಂದೂರಿಗೆ ಬಂದಿದ್ದಾನೆ.
ಹಿಂದಿ ಬಿಟ್ಟು ಬೇರೆ ಭಾಷೆ ಗೊತ್ತಿಲ್ಲದೇ, ಯಳಂದೂರು ಬಸ್ ನಿಲ್ದಾಣದ ಸುತ್ತಮುತ್ತ ಓಡಾಡುತ್ತಾ, ರಾತ್ರಿ ವೇಳೆ ರಸ್ತೆ ಬದಿ ಮಲಗಿ ದಿನ ಕಳೆಯುತ್ತಿದ್ದರು. ನಿರ್ಗತಿಕ ವೃದ್ಧನನ್ನು ಗಮನಿಸಿದ ಯಳಂದೂರು ಠಾಣೆ ಪೊಲೀಸರು, ವೃದ್ಧಾಶ್ರಮಕ್ಕೆ ಸೇರಿಸಿದ್ದರು.
ಇದನ್ನೂ ಓದಿ: ಬಲೆಗೆ ಬಿದ್ದ 32 ಕೆಜಿ ತೂಕದ ಹದ್ದು ಮೀನು!
ಈ ಸಂದರ್ಭದಲ್ಲಿ ವೃದ್ದಾಶ್ರಮದಲ್ಲಿ ಆರೋಗ್ಯ ಜಾಗೃತಿ ಮೂಡಿಸಲು ಬಂದಿದ್ದ ಸತ್ಯ ಎಜುಕೇರ್ ಕಾಂಪಿಟೆನ್ಸಿ ಟ್ರಸ್ಟ್‌ನ ಮಹೇಶ್ ಅವರು ಪ್ರೀತಂ ಸಿಂಗ್ ಅವರ ವಿಡಿಯೋ ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿರುವ ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯ ಗ್ರುಪ್‌ಗೆ ಹಾಕಿ ಸಹಾಯ ಕೋರಿದ್ದರು.
ಇನ್‌ಸ್ಟಾಗ್ರಾಮ್‌ನಿಂದ ಸಿಕ್ಕ ಮಾಹಿತಿ ಆಧರಿಸಿ ಪ್ರೀತಂಸಿಂಗ್ ಪುತ್ರ ರಾಜೇಶ್ ಸಿಂಗ್ ಧುರ್ವಿ ಇಲ್ಲಿಗೆ ಹುಡುಕಿಕೊಂಡು ಬಂದಿದ್ದಾರೆ. ಕಾನೂನು ಪ್ರಕಾರ, ಪ್ರೀತಂಸಿಂಗ್‌ನನ್ನು ಯಳಂದೂರು ಪೊಲೀಸರ ಮೂಲಕ ಮಗನಿಗೆ ಒಪ್ಪಿಸಲಾಯಿತು.























