ಬಳ್ಳಾರಿ: ನಗರದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣದ ಬ್ಯಾನರ್ ಅಳವಡಿಕೆ ವಿಚಾರದ ಗಲಾಟೆ ತನಿಖೆಯನ್ನು ಹೈಕೋರ್ಟಿನ ನ್ಯಾಯಮೂರ್ತಿ ಇಲ್ಲವೇ ಸಿಬಿಐಗೆ ಒಪ್ಪಿಸುವಂತೆ ಮಾಜಿ ಸಚಿವ ಶ್ರೀರಾಮುಲು ಒತ್ತಾಯಿಸಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಳ್ಳಾರಿ ಘಟನೆ ಪೂರ್ವ ನಿಯೋಜಿತ ಕುತಂತ್ರ. ಸಾಕಷ್ಟು ಮೊದಲೇ ಎಲ್ಲವನ್ನೂ ಪ್ಲಾನ್ ಮಾಡಿಕೊಂಡೇ ಗೊಂದಲ ಸೃಷ್ಟಿ ಮಾಡಿದ್ದಾರೆ. ಗುಂಡೇಟಿನಿಂದ ಅಮಾಯಕನ ಸಾವಾಗಿರುವುದಕ್ಕೆ ಶಾಸಕ ನಾರಾ ಭರತರೆಡ್ಡಿ ಕಡೆಯವರು ಹಾರಿಸಿದ ಗುಂಡು ಕಾರಣವಾಗಿದೆ ಎಂದಿದ್ದಾರೆ.
ಬಿಹಾರ, ಯುಪಿ ಕಡೆಯಿಂದ ಶಾಸಕ ಭರತ್ ರೆಡ್ಡಿ ತಂದಿರಿಸಿಕೊಂಡಿರುವವರಿಂದಲೇ ಈ ಕೃತ್ಯ ನಡೆದಿದೆ. ಪೊಲೀಸರಿಂದ ಹಾರಿದ ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತನ ಸಾವು ಸಂಭವಿಸಿಲ್ಲ. ಕಾಂಗ್ರೆಸ್‌ನವರಿಂದಲೇ ಆತನ ಹತ್ಯೆ ಆಗಿದೆ. ಈ ಬಗ್ಗೆ ವಾಸ್ತವ ಹೊರತರಲು ನ್ಯಾಯಮೂರ್ತಿ ಇಲ್ಲವೇ ಸಿಬಿಐಗೆ ತನಿಖೆ ಒಪ್ಪಿಸಲಿ ಎಂದು ಹೇಳಿದ್ದಾರೆ.
ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಹತ್ಯೆಗೆ ಷಡ್ಯಂತ್ರ ಮಾಡಲಾಗಿದೆ. ಪೊಲೀಸ್ ಇಲಾಖೆ ಈ ಬಗ್ಗೆ ಸರಿಯಾದ ತನಿಖೆ ನಡೆಸಿದರೆ ಸತ್ಯಾಂಶ ಹೊರಬರಲಿದೆ. ದುರುದ್ದೇಶದಿಂದ ಮೊದಲೇ ಪ್ಲಾನ್ ಮಾಡಿಕೊಂಡೇ ರೆಡ್ಡಿ ಮನೆ ಮೇಲೆ ದಾಳಿಗೆ ಪ್ರಯತ್ನ ಮಾಡಲಾಗಿದೆ ಎಂದರು.
ಘಟನೆ ಕುರಿತು ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಪಕ್ಷ ನಾಯಕ ಆರ್. ಅಶೋಕ ಸೇರಿ ಎಲ್ಲ ಹಿರಿಯರ ಜತೆ ಮಾತನಾಡಿ ಮಾಹಿತಿ ನೀಡಲಾಗಿದೆ. ಇಂದು ಸಂಜೆ ರಾಜ್ಯಾಧ್ಯಕ್ಷ ವಿಜಯೇಂದ್ರ, ಜನಾರ್ದನ ರೆಡ್ಡಿ ಅವರಿಗೆ ಭೇಟಿ ಮಾಡಲಿದ್ದಾರೆ ಎಂದರು.
ಖಾಸಗಿ ಗನ್‌ಮೆನ್‌ನಿಂದಲೇ ಫೈರಿಂಗ್ ಆಗಿ ಸಾವು ಸಂಭವಿಸಿದೆ ಎಂದು ಎಸ್ಪಿ ಹೇಳಿದ್ದು, ಇದು ಗಂಭೀರ ಪ್ರಕರಣ. ಜನಾರ್ದನ ರೆಡ್ಡಿಯಿಂದಲೇ ಕಾಂಗ್ರೆಸ್ ಕಾರ್ಯಕರ್ತನ ಸಾವು ಎಂಬುದು ಸತ್ಯಕ್ಕೆ ದೂರವಾದುದು ಎಂದರು.





















