ವಿಜಯಪುರ: ಕಳೆದ 106 ದಿನಗಳಿಂದ ಸರ್ಕಾರಿ ವೈದ್ಯಕೀಯ ಕಾಲೇಜ್ ಹೋರಾಟದಲ್ಲಿ ಮುಂಚೂಣಿ ಪಾತ್ರ ವಹಿಸಿದ ಹುಣಶ್ಯಾಳದ ಶ್ರೀ ಸಂಗನಬಸವೇಶ್ವರ ಸ್ವಾಮೀಜಿ ಪೊಲೀಸ್ ಅಧಿಕಾರಿಗೆ ಕಪಾಳಮೋಕ್ಷ ಮಾಡಿದ ವಿಡಿಯೋ ಹರಿದಾಡುತ್ತಿದೆ.
ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲರ ನಿವಾಸಕ್ಕೆ ಮುತ್ತಿಗೆ ಹಾಕಲು ಅಣಿಯಾಗುತ್ತಿದ್ದಂತೆ ಮುಗಳಖೋಡಮಠದ ಸಮೀಪ ಪ್ರತಿಭಟನಾಕಾರರನ್ನು ಪೊಲೀಸರು ತಡೆಯಲು ಮುಂದಾದರು.
ಆಗ ವಾಗ್ವಾದ ನಡೆದ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಸ್ವಾಮೀಜಿಗಳ ಕಾವಿಗೆ ಕೈ ಹಾಕಿ ಕಾಲರ್ ಮಾದರಿಯಲ್ಲಿ ಅದನ್ನು ಹಿಡಿಯಲು ಮುಂದಾದರು. ಇದರಿಂದಾಗಿ ಅಸಮಾಧಾನಗೊಂಡ ಸ್ವಾಮೀಜಿ, ಅಧಿಕಾರಿಯ ಕಪಾಳಕ್ಕೆ ಬಾರಿಸಿದ ವಿಡಿಯೋ ಹರಿದಾಡುತ್ತಿದೆ.
ಇದನ್ನೂ ಓದಿ: 2026ಕ್ಕೆ ಸಂಯುಕ್ತ ಕರ್ನಾಟಕದ 26 ಅಜೆಂಡಾ
ಶ್ರೀಗಳ ಜೊತೆ ಪೊಲೀಸರು ಅಗೌರವ ತೋರಿರುವುದು ಸರಿಯಲ್ಲ ಎಂದು ಅನೇಕ ಪ್ರತಿಭಟನಾಕಾರರು ಪೊಲೀಸರ ಜೊತೆ ವಾಗ್ವಾದ ಸಹ ನಡೆಸಿದರು. ಆಗ ತಕ್ಷಣವೇ ಪೊಲೀಸರು ಅಲ್ಲಿದ್ದ ಎಲ್ಲ ಪ್ರತಿಭಟನಾಕಾರರನ್ನು ಪೊಲೀಸ್ ವ್ಯಾನ್‌ನಲ್ಲಿ ಝಳಕಿ, ಹೊರ್ತಿಗೆ ಕರೆದುಕೊಂಡು ಹೋಗಿದ್ದಾರೆ.
ರೈತ ಹೋರಾಟ, ಜನಪರ ಹೋರಾಟ ಯಾವುದೇ ಇರಲಿ ಹುಣಶ್ಯಾಳ ಶ್ರೀಗಳು ಹೋರಾಟದಲ್ಲಿ ಸದಾ ಮುಂಚೂಣಿ ವಹಿಸುವುದುಂಟು. ಈ ಹೋರಾಟದಲ್ಲಿಯೂ ಶ್ರೀಗಳು ಭಾಗವಹಿಸಿ ಬೆಂಬಲ ಸೂಚಿಸಿದ್ದರು.























