Home ವಿಶೇಷ ಸುದ್ದಿ 2026ಕ್ಕೆ ಸಂಯುಕ್ತ ಕರ್ನಾಟಕದ 26 ಅಜೆಂಡಾ

2026ಕ್ಕೆ ಸಂಯುಕ್ತ ಕರ್ನಾಟಕದ 26 ಅಜೆಂಡಾ

0
7
  1. ವರ್ಷಕ್ಕೆ ಒಂದಾದರೂ ಗಿಡ ನೆಡಿ
    ರಾಜ್ಯದಲ್ಲಿ ಹಸಿರು ಕಡಿಮೆಯಾಗುತ್ತಿದೆ. ತಾಪಮಾನ ಹೆಚ್ಚಾಗುತ್ತಿದೆ. ಅರಣ್ಯದ ಪ್ರಮಾಣ ವರ್ಷದಿಂದ ವರ್ಷಕ್ಕೆ ಇಳಿಕೆಯಾಗುತ್ತಿದೆ. ಪ್ರತಿಯೊಬ್ಬರೂ ಕನಿಷ್ಠ ಪಕ್ಷ ವರ್ಷಕ್ಕೊಂದು ಗಿಡವನ್ನಾದರೂ ನೆಟ್ಟು ಬೆಳೆಸುವ ದೃಢ ನಿರ್ಧಾರ ಮಾಡಿದರೆ ಪರಿಹಾರ ಕಷ್ಟವಿಲ್ಲ.
  2. ನಿರಾಶ್ರಿತರಿಗೆಲ್ಲ ಸೂರು
    ಬೆಂಗಳೂರಿನ ಕೋಗಿಲು ಲೇಔಟ್‌ನಲ್ಲಿ ಕೇರಳ ಅಥವಾ ಅಕ್ರಮ ಬಾಂಗ್ಲಾ ನಿವಾಸಿಗಳು ಎನ್ನಲಾದ ವಲಸಿಗರಿಗೆ ಸರ್ಕಾರ ಮನೆ ನೀಡಲು ಹೊರಟಿದೆ. ಅದರ ಬದಲು ನಮ್ಮದೇ ರಾಜ್ಯದ ಲಕ್ಷಾಂತರ ಕನ್ನಡಿಗ ನಿರಾಶ್ರಿತರಿಗೆ ವಸತಿ ಅಥವಾ ಪರಿಹಾರ ಲಭಿಸಲಿ.
  3. ಶುದ್ಧ ನೀರು
    ಕುಡಿಯುವ ನೀರು ಪ್ರತಿಯೊಬ್ಬರ ಮೂಲಭೂತ ಅಗತ್ಯ. ಎಲ್ಲರಿಗೂ ಶುದ್ಧ ಕುಡಿಯುವ ನೀರು ನೀಡುವ ಸಂಕಲ್ಪವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಸಲ ಮಾಡಿ ಮರೆತಿವೆ. ಅದನ್ನು ನಿಜವಾಗಿಯೂ ಸಾಕಾರಗೊಳಿಸಲು ಕ್ರಮ ಕೈಗೊಳ್ಳಲಿ.
  4. ಭ್ರಷ್ಟಾಚಾರ ಮುಕ್ತ…
    ಆರ್‌ಟಿಒ ಕಚೇರಿಗಳು
    ಸಬ್ ರಿಜಿಸ್ಟ್ರಾರ್ ಕಚೇರಿಗಳು
    ತಾಲೂಕು ಕಚೇರಿಗಳು
    ಗ್ರಾಮ ಪಂಚಾಯ್ತಿಗಳು
    ನಗರ ಸ್ಥಳೀಯ ಸಂಸ್ಥೆಗಳು
  5. ಲಂಚವಿಲ್ಲದೆ ವರ್ಗಾವಣೆ
    ಪೊಲೀಸ್ ಇಲಾಖೆ ಹಾಗೂ ಸರ್ಕಾರದ ಇನ್ನಿತರ ಇಲಾಖೆಗಳಲ್ಲಿ ಭ್ರಷ್ಟಾಚಾರ ಮತ್ತು ಹಣದ ಸುಲಿಗೆಗೆ ಪ್ರಮುಖವಾದ ಕಾರಣ ಅಲ್ಲಿನ ನೌಕರರು ವರ್ಗಾವಣೆಗೆ ಲಕ್ಷಾಂತರ ರೂ. ಲಂಚ ನೀಡುವುದು. ಅದನ್ನು ನಿಲ್ಲಿಸಿದರೆ ಜನರಿಂದ ಲಂಚ ಸುಲಿಗೆ ಕಡಿಮೆಯಾಗುತ್ತದೆ.
  6. ಉತ್ತರ ಕರ್ನಾಟಕಕ್ಕೆ ನ್ಯಾಯ
    ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಸಿ ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಚರ್ಚಿಸುವುದನ್ನು ಬಿಟ್ಟರೆ ಆ ವಿಷಯದಲ್ಲಿ ಇನ್ನೇನೂ ಪ್ರಗತಿಯಾಗುತ್ತಿಲ್ಲ. ಈ ವರ್ಷವಾದರೂ ಅದಕ್ಕೆ ಸರ್ಕಾರ ದೃಢ ಸಂಕಲ್ಪ ಮಾಡಿ ಮನಸಾರೆ ಕಾರ್ಯಕ್ರಮ ರೂಪಿಸಲಿ.
  7. ರಾಜ್ಯದಲ್ಲಿ ನುಣುಪಾದ ರಸ್ತೆ
    ಕಳೆದ ಎರಡು ವರ್ಷಗಳಿಂದ ರಾಜ್ಯಾದ್ಯಂತ ರಸ್ತೆಗಳ ಸ್ಥಿತಿ ಅಧ್ವಾನವಾಗಿದೆ. ಬೆಂಗಳೂರಿಗೆ ರಸ್ತೆ ಗುಂಡಿಗಳಿಂದ ಮುಕ್ತಿ ಲಭಿಸಿಲ್ಲ. ಉತ್ತಮ ರಸ್ತೆ ನಿರ್ಮಾಣವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಆದ್ಯತೆಯಾಗಿ ಪರಿಗಣಿಸಿದರೆ ಅಭಿವೃದ್ಧಿಗೆ ವೇಗ ಲಭಿಸಲಿದೆ.
  8. ಟ್ರಂಪ್‌ಗೆ ಒಳ್ಳೆಯ ಬುದ್ಧಿ!
    ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಎರಡನೇ ಬಾರಿ ಅಧಿಕಾರ ವಹಿಸಿಕೊಂಡ ದಿನದಿಂದಲೇ ಕಂಡ ಕಂಡ ದೇಶದ ಮೇಲೆ ಯದ್ವಾತದ್ವಾ ತೆರಿಗೆ ಹಾಕುವುದೂ ಸೇರಿದಂತೆ ಅನೇಕ ಎಡವಟ್ಟು ನಿರ್ಧಾರ ಕೈಗೊಂಡು ಜಗತ್ತನ್ನು ಶೋಷಿಸುತ್ತಿದ್ದಾರೆ. ಅವರು ಬದಲಾಗಲಿ.
  9. ದೇಶಭ್ರಷ್ಟರು ಕೈಗೆ ಸಿಗಲಿ
    ಭಾರತಕ್ಕೆ ಸಾವಿರಾರು ಕೋಟಿ ರೂ. ವಂಚನೆ ಎಸಗಿ ವಿದೇಶಕ್ಕೆ ಓಡಿಹೋದ ವಿಜಯ್ ಮಲ್ಯ, ನೀರವ್ ಮೋದಿಯಂಥವರು ಈ ವರ್ಷವಾದರೂ ಮರಳಿ ದೇಶದ ಕೈಗೆ ಸಿಗುವಂತಾಗಲಿ. ಭಾರತಕ್ಕೆ ಬೇಕಾದ ಕ್ರಿಮಿನಲ್‌ಗಳೂ ಈ ವರ್ಷ ಸರ್ಕಾರದ ಕೈಗೆ ಸಿಗಲಿ.
  10. ರಷ್ಯಾ-ಉಕ್ರೇನ್ ಯುದ್ಧ ಅಂತ್ಯ
    ಎರಡು ವರ್ಷದಿಂದ ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದಿಂದಾಗಿ ಜಗತ್ತಿಗೆ ಸಾಕಷ್ಟು ನಷ್ಟವಾಗಿದೆ. ಇಡೀ ವಿಶ್ವದ ಆರ್ಥಿಕತೆಯ ಮೇಲೆ ಋಣಾತ್ಮಕ ಪರಿಣಾಮವಾಗಿದೆ. ಎಲ್ಲಾ ದೇಶಗಳೂ ಒಟ್ಟಾಗಿ ಈ ಯುದ್ಧಕ್ಕೆ ಅಂತ್ಯ ಹಾಡುವ ಕಾರ್ಯ ಮಾಡಬೇಕಿದೆ.
  11. ಮೊಬೈಲ್ ಬಳಕೆಗೆ ಕಡಿವಾಣ
    ಯುವಪೀಳಿಗೆ ಅತಿಯಾದ ಮೊಬೈಲ್ ಗೀಳಿನಿಂದ ನಾನಾ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಇದೊಂದು ಸಾಮಾಜಿಕ ಪಿಡುಗಾಗಿ ಬದಲಾಗುತ್ತಿದೆ. ಮೊಬೈಲ್, ಸೋಷಿಯಲ್ ಮೀಡಿಯಾ ಬಳಕೆಗೆ ಕಡಿವಾಣ ಬೀಳಲೇಬೇಕಿದೆ.
  12. ಸಮೂಹ ಸಾರಿಗೆ ಬಳಕೆ
    ಬೆಂಗಳೂರು, ಮಂಗಳೂರು, ಮೈಸೂರು, ಹುಬ್ಬಳ್ಳಿ, ಬೆಳಗಾವಿಯಂತಹ ನಗರಗಳಲ್ಲಿ ಟ್ರಾಫಿಕ್ ಮತ್ತು ಮಾಲಿನ್ಯ ಹೆಚ್ಚಾಗುತ್ತಿದೆ. ಜನರು ಸಮೂಹ ಸಾರಿಗೆಯನ್ನು ಹೆಚ್ಚೆಚ್ಚು ಬಳಸುವಂತಾದರೆ ಮಾಲಿನ್ಯ ಮತ್ತು ಟ್ರಾಫಿಕ್ ನಿಯಂತ್ರಣವಾಗುತ್ತದೆ.
  13. ಕುರ್ಚಿ ಫೈಟ್ ಶಮನ
    ಕಳೆದ 3 ತಿಂಗಳಿನಿಂದ ಕರ್ನಾಟಕದಲ್ಲಿ ಅಧಿಕಾರ ಹಸ್ತಾಂತರದ ರಾಜಕೀಯ ಮೇಲಾಟ ಜೋರಾಗಿದೆ. ಅದರ ನಡುವೆ ಆಡಳಿತ ಯಂತ್ರ ಮಂಕಾಗಿದೆ. ಈ ವರ್ಷ ಆದಷ್ಟು ಬೇಗ ಇದು ಇತ್ಯರ್ಥಗೊಂಡು, ಅಭಿವೃದ್ಧಿ ಕಾರ್ಯ ಚುರುಕು ಪಡೆಯಲಿ.
  14. ರೈತರ ಸಂಕಷ್ಟ ನಿವಾರಣೆ
    ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಮಧ್ಯವರ್ತಿಗಳ ಹಾವಳಿ ಈಗಲೂ ಇದೆ. ಕೃಷಿಯ ಖರ್ಚು ಹೆಚ್ಚು, ಆದಾಯ ಕಡಿಮೆ. ಪಂಪ್‌ಸೆಟ್‌ಗೆ ಮಧ್ಯರಾತ್ರಿ ವಿದ್ಯುತ್ ಸಿಗುತ್ತದೆ. ಪ್ರಕೃತಿ ವಿಕೋಪಕ್ಕೆ ಪರಿಹಾರ ಸಿಗ್ತಿಲ್ಲ. ಇದಕ್ಕೆಲ್ಲ ಪರಿಹಾರ ಸಿಗಬಹುದೆ?
  15. ಸ್ವದೇಶಿ ವಸ್ತುಗಳ ಖರೀದಿ
    ಸ್ವದೇಶಿ ವಸ್ತುಗಳನ್ನೇ ಜನರು ಹೆಚ್ಚೆಚ್ಚು ಬಳಸುವುದರಿಂದ ದೇಶದ ಸಂಪತ್ತು ದೇಶದೊಳಗೇ ಹಂಚಿಕೆಯಾಗುತ್ತದೆ. ಸಣ್ಣ ಹಾಗೂ ಗುಡಿ ಕೈಗಾರಿಕೆಗಳಿಗೆ ಅನುಕೂಲವಾಗುವ ಮೂಲಕ ಬಡವರು ಸ್ಥಿತಿವಂತರಾಗುತ್ತಾರೆ. ವಿದೇಶಗಳ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ.
  16. ಬೆಂಗಳೂರಿನ ಹೊರೆ ಇಳಿಕೆ
    ಅನ್ಯ ರಾಜ್ಯಗಳಿಂದ ಜನರ ವಲಸೆ ಹಾಗೂ ಕರ್ನಾಟಕದಲ್ಲೇ ಅನ್ಯ ಜಿಲ್ಲೆಗಳಿಂದ ಜನರ ವಲಸೆಯಿಂದಾಗಿ ಬೆಂಗಳೂರು ಅತಿ ಭಾರದಿಂದ ನಲುಗುತ್ತಿದೆ. ಬೆಂಗಳೂರಿನ ಮೇಲಿನ ಒತ್ತಡ ಕಡಿಮೆ ಮಾಡದೆ ಇದ್ದರೆ ಭವಿಷ್ಯದಲ್ಲಿ ಈ ನಗರದ ಸ್ಥಿತಿ ಗಂಭೀರವಾಗಲಿದೆ.
  17. ಡಿಜಿಟಲ್ ಅರೆಸ್ಟ್‌ಗೆ ಇತಿಶ್ರೀ
    ಡಿಜಿಟಲ್ ಅರೆಸ್ಟ್ ನೆಪದಲ್ಲಿ ಜನರನ್ನು ಸುಲಿಯುವುದೂ ಸೇರಿದಂತೆ ನಾನಾ ರೀತಿಯ ಆನ್‌ಲೈನ್ ವಂಚನೆಗಳು ದಿನೇದಿನೇ ಹೆಚ್ಚುತ್ತಿವೆ. ಅಮಾಯಕರು ಮೋಸ ಹೋಗುತ್ತಿದ್ದಾರೆ. ಪೊಲೀಸರು ಸರಿಯಾದ ತನಿಖೆ ನಡೆಸುತ್ತಿಲ್ಲ. ಇದರಿಂದ ಕಾಪಾಡಬೇಕಿದೆ.
  18. ಮರ್ಯಾದಾ ಹತ್ಯೆಗೆ ತಡೆ
    ಮಕ್ಕಳು ಅನ್ಯ ಜಾತಿಯವರನ್ನು ಮದುವೆಯಾದರು ಎಂಬ ಕಾರಣಕ್ಕೆ ಮನೆಯವರೇ ಅವರನ್ನು ಕೊಲ್ಲುವಂತಹ ಕ್ರೌರ್ಯಗಳು ಹೆಚ್ಚಾಗುತ್ತಿವೆ. ಮಕ್ಕಳ ಇಷ್ಟಾನಿಷ್ಟಗಳನ್ನು ಕೇಳುವ, ವಯಸ್ಸಿಗೆ ಬಂದವರು ಪ್ರೀತಿಸಿದರೆ ಅದನ್ನು ಗೌರವಿಸುವ ವಾತಾವರಣ ನಿರ್ಮಾಣವಾಗಬೇಕಿದೆ.
  19. ಕೆರೆ, ನದಿಗಳ ಸಂರಕ್ಷಣೆ
    ರಾಜ್ಯದಲ್ಲಿ ಜಲಮೂಲಗಳ ದುರ್ಬಳಕೆ ಮಿತಿ ಮೀರಿದೆ. ವರ್ಷದಿಂದ ವರ್ಷಕ್ಕೆ ನೀರಿನ ಲಭ್ಯತೆ ಕಡಿಮೆಯಾಗುತ್ತಿದೆ. ಕೆರೆಗಳನ್ನು ರಕ್ಷಿಸಿ, ನದಿಗಳಿಗೆ ತ್ಯಾಜ್ಯ ಹರಿಯುವುದನ್ನು ತಪ್ಪಿಸದೆ ಇದ್ದರೆ ಅಮೂಲ್ಯವಾದ ನೈಸರ್ಗಿಕ ಸಂಪತ್ತನ್ನು ನಾವೇ ನಾಶ ಪಡಿಸಿಕೊಂಡು ಕಷ್ಟಕ್ಕೆ ಸಿಲುಕುತ್ತೇವೆ.
  20. ಡ್ರಗ್ಸ್ ಹಾವಳಿ ನಿಯಂತ್ರಣ
    ರಾಜ್ಯದಲ್ಲಿ ದಿನೇ ದಿನೇ ಮಾದಕ ವಸ್ತುಗಳ ಹಾವಳಿ ಹೆಚ್ಚಾಗುತ್ತಿದೆ. ಶಾಲೆ, ಕಾಲೇಜಿನ ಮಕ್ಕಳು ಇದಕ್ಕೆ ಬಲಿಯಾಗುತ್ತಿದ್ದಾರೆ. ಯುವಜನತೆ ಡ್ರಗ್ಸ್ ವ್ಯಸನದಿಂದ ಚೈತನ್ಯ ಕಳೆದುಕೊಳ್ಳುತ್ತಿದೆ. ಈ ಮಾಫಿಯಾ ನಿಯಂತ್ರಣಕ್ಕೆ ಗಂಭೀರ ಕ್ರಮದ ಅಗತ್ಯವಿದೆ.
  21. ಕೋಮು ದ್ವೇಷ ಅಂತ್ಯ
    ರಾಜಕೀಯದ ಲಾಭಕ್ಕಾಗಿ ಧರ್ಮ-ಧರ್ಮಗಳ ನಡುವೆ ವೈಷಮ್ಯ ಬಿತ್ತುವಂತಹ ಕೀಳು ಕಾರ್ಯಗಳನ್ನು ನಿಲ್ಲಿಸಬೇಕಿದೆ. ಸಮಾಜವನ್ನು ಒಡೆದು ರಕ್ಷಣೆ ಮಾಡಿಕೊಳ್ಳಬೇಕಾದ ಧರ್ಮವಿಲ್ಲ. ಧರ್ಮದ ಬಗ್ಗೆ ಪ್ರೀತಿ ಇರಲಿ, ಆದರೆ ದುರಭಿಮಾನ ಬೇಡ.
  22. ಸೋಷಿಯಲ್ ಮೀಡಿಯಾ ಸೌಜನ್ಯ
    ಸೋಷಿಯಲ್ ಮೀಡಿಯಾಗಳಲ್ಲಿ ಜನರು ಅನಾಗರಿಕರಂತೆ ವರ್ತಿಸುವ ಪ್ರವೃತ್ತಿ ಬೆಳೆಯುತ್ತಿದೆ. ನಕಲಿ ಖಾತೆಗಳಿಂದ ತೇಜೋವಧೆ ಮಾಡುವುದು ಹೆಚ್ಚಾಗುತ್ತಿದೆ. ಸಾಮಾಜಿಕ ಮಾಧ್ಯಮಗಳನ್ನು ಸಂಯಮದಿಂದ ಬಳಸುವುದನ್ನು ಎಲ್ಲರೂ ಅಭ್ಯಾಸ ಮಾಡಿಕೊಳ್ಳಬೇಕಿದೆ.
  23. ಪ್ಲಾಸ್ಟಿಕ್ ಬಳಕೆ ಸ್ಥಗಿತ
    ಏಕಬಳಕೆಯ ಪ್ಲಾಸ್ಟಿಕ್ಕನ್ನು ಸರ್ಕಾರ ಹಲವು ಬಾರಿ ನಿಷೇಧಿಸಿದೆ. ಒಮ್ಮೆಯೂ ಅದು ಜಾರಿಗೆ ಬಂದಿಲ್ಲ. ಪರಿಸರವನ್ನು ಮಲೀನ ಮಾಡುವಲ್ಲಿ ಪ್ಲಾಸ್ಟಿಕ್ ಮುಂಚೂಣಿಯಲ್ಲಿದೆ. ಜನರೇ ಸ್ವಯಂಪ್ರೇರಿತವಾಗಿ ಈ ಪ್ಲಾಸ್ಟಿಕ್ ಬಳಕೆ ನಿಲ್ಲಿಸಿದರೆ ಮಾತ್ರ ಬದಲಾವಣೆ ಸಾಧ್ಯ.
  24. ದೇಶದ ಗಡಿಯಲ್ಲಿ ಶಾಂತಿ ಸ್ಥಾಪನೆ
    ಭಾರತ – ಪಾಕ್ ಗಡಿಯಲ್ಲಿ, ಭಾರತ-ಚೀನಾ ಗಡಿಯಲ್ಲಿ, ಭಾರತ – ನೇಪಾಳ ಗಡಿಯಲ್ಲಿ ಹಾಗೂ ಭಾರತ – ಬಾಂಗ್ಲಾ ಗಡಿಯಲ್ಲಿ ಅಶಾಂತಿ ಉಂಟುಮಾಡುವ ಚಟುವಟಿಕೆಗಳು ಹೆಚ್ಚುತ್ತಿವೆ. ಕಳ್ಳಸಾಗಣೆ, ಉಗ್ರರ ನುಸುಳುವಿಕೆ ಜಾಸ್ತಿಯಾಗುತ್ತಿದೆ. ಅದು ದೇಶದ ಭದ್ರತೆಗೆ ಅಪಾಯಕಾರಿ. ಅದಕ್ಕೆ ಕಡಿವಾಣ ಬೀಳಬೇಕಿದೆ.
  25. ವೃದ್ಧರಿಗೆ ಗೌರವದ ಬದುಕು
    ಹಣದ ಹಿಂದೆ ಬಿದ್ದಿರುವ ಜನರು ಸ್ವಂತ ತಂದೆ ತಾಯಿಯನ್ನೇ ಕೊನೆಗಾಲದಲ್ಲಿ ನಿರ್ಲಕ್ಷಿಸುವ ಪ್ರಕರಣಗಳು ಹೆಚ್ಚುತ್ತಿವೆ. ವೃದ್ಧರಿಗೆ ಕೊನೆಗಾಲದಲ್ಲಿ ನೆಮ್ಮದಿಯ ಬದುಕು ನೀಡುವುದು ಸಮಾಜದ ಕರ್ತವ್ಯ. ಹಿರಿಯರನ್ನು ಗೌರವಿಸುವ ಮಾನವೀಯ ಮೌಲ್ಯ ಪುನಃ ಎಲ್ಲರಲ್ಲೂ ನೆಲೆಸಲಿ.
  26. ಓದುವ ಹವ್ಯಾಸ ಮರುಸ್ಥಾಪನೆ
    ತಂತ್ರಜ್ಞಾನ ಬೆಳೆದಂತೆ ಬದುಕು ಯಾಂತ್ರಿಕವಾಗುತ್ತಿದೆ. ಮಾನವೀಯತೆ ಮರೆಯಾಗುತ್ತಿದೆ. ಪತ್ರಿಕೆ, ಸಾಹಿತ್ಯ, ಪುಸ್ತಕ ಓದುವ ಹವ್ಯಾಸ ಪುನಃ ಬೆಳೆಸಿಕೊಂಡರೆ ಪ್ರಬುದ್ಧ ಸಮಾಜದ ನಿರ್ಮಾಣ ಸಾಧ್ಯ. ಕಳೆದುಕೊಂಡಿದ್ದನ್ನು ಮರಳಿ ಗಳಿಸುವ ಸಂಕಲ್ಪ ಮಾಡೋಣ.