ಚಿಕ್ಕಮಗಳೂರು: ಭದ್ರಾ ಅಭಯಾರಣ್ಯದಲ್ಲಿ ಅಪರೂಪದ ಕಪ್ಪು ಚಿರತೆ ಕಾಣಿಸಿಕೊಂಡಿದ್ದು, ಬ್ಲ್ಯಾಕ್ ಪ್ಯಾಂಥರ್ ಕಂಡು ಪ್ರವಾಸಿಗರಲ್ಲಿ ಸಂತಸ ಮೂಡಿಸಿದೆ. ಸುಮಾರು 20 ವರ್ಷಗಳ ನಂತರ ಭದ್ರಾ ಅಭಯಾರಣ್ಯದಲ್ಲಿ ಬ್ಲಾಕ್ ಪ್ಯಾಂಥರ್ ಪತ್ತೆಯಾಗಿದೆ ಎಂದು ಹೇಳಲಾಗಿದೆ.
ಕಪ್ಪು ಚಿರತೆಯನ್ನು ನೋಡಿ ಪ್ರವಾಸಿಗರು ಸಂತಸ ವ್ಯಕ್ಷಪಡಿಸಿದ್ದು, ತಮ್ಮ ಮೊಬೈಲ್‌ಗಳಲ್ಲಿ ಸೆರೆ ಹಿಡಿದಿದ್ದಾರೆ. ಕಳೆದ ಎರಡು ದಶಕಗಳಿಂದ ಅರಣ್ಯಾಧಿಕಾರಿಗಳು, ವಾಚರ್‌ಗಳು ಮತ್ತು ಗಾರ್ಡ್‌ಗಳಿಗೂ ಕಾಣಿಸಿಕೊಳ್ಳದ ಈ ಕಪ್ಪು ಚಿರತೆ, ಕಳೆದೊಂದು ವಾರದಲ್ಲಿ ಹಲವು ಬಾರಿ ಪ್ರತ್ಯಕ್ಷವಾಗಿದೆ.
ಸುಮಾರು 492.2 ಚದರ ಕಿ.ಮೀ. ವ್ಯಾಪ್ತಿಯ ಹೊಂದಿರುವ ಭದ್ರಾ ಅಭಯಾರಣ್ಯವು ಲಕ್ಷಾಂತರ ವನ್ಯಜೀವಿಗಳ ಆಶ್ರಯ ತಾಣವಾಗಿದೆ. ಪ್ರವಾಸಿಗರೊಬ್ಬರ ಕ್ಯಾಮೆರಾದಲ್ಲಿ ಬ್ಲಾಕ್ ಚಿರತೆ ಸೆರೆಯಾಗಿದ್ದು, ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಬ್ಲ್ಯಾಕ್ ಪ್ಯಾಂಥರ್ ಅನ್ನು ಸಾಮಾನ್ಯವಾಗಿ ಕಪ್ಪು ಚಿರತೆ ಎಂದೇ ಕರೆಯುತ್ತಾರೆ. ಈ ಅಪರೂಪದ ಪ್ರಾಣಿಯ ಗೋಚರವೂ ಭದ್ರಾ ಅಭಯಾರಣ್ಯದ ಜೀವವೈವಿಧ್ಯದ ಶ್ರೀಮಂತಿಕೆಗೆ ಮತ್ತಷ್ಟು ಮೆರುಗು ನೀಡಿದೆ.









