ಹುಬ್ಬಳ್ಳಿ: ಹೊಸ ವರ್ಷ 2026ರ ಸ್ವಾಗತಕ್ಕೆ ದೇಶಾದ್ಯಂತ ಭರದ ಸಿದ್ಧತೆಗಳು ನಡೆಯುತ್ತಿರುವ ಬೆನ್ನಲ್ಲೇ, ಸೈಬರ್ ವಂಚಕರು ಸಾಮಾನ್ಯ ಜನರನ್ನು ಬಲೆಗೆ ಬೀಳಿಸಲು ಹೊಸ ಹೊಸ ತಂತ್ರಗಳನ್ನು ಬಳಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕೆಂದು ಹುಬ್ಬಳ್ಳಿ–ಧಾರವಾಡ ಪೊಲೀಸ್ ಇಲಾಖೆ ಮಹತ್ವದ ಎಚ್ಚರಿಕೆ ನೀಡಿದೆ.
ಹೊಸ ವರ್ಷಾಚರಣೆಗೆ ಮುನ್ನವೇ ‘ಶುಭಾಶಯ ವಂಚನೆ’ (Greeting Scam)ಗಳ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಜನಜಾಗೃತಿ ಮೂಡಿಸಿರುವ ಪೊಲೀಸರು, ವಿಶೇಷ ವೈಯಕ್ತಿಕ ಶುಭಾಶಯ, ಹೊಸ ವರ್ಷದ ಉಡುಗೊರೆ, ನಿಮಗಾಗಿ ಸರ್ಪ್ರೈಸ್ ಗಿಫ್ಟ್ ಎಂಬ ಶೀರ್ಷಿಕೆಗಳೊಂದಿಗೆ ಬರುವ ಲಿಂಕ್‌ಗಳನ್ನು ಕ್ಲಿಕ್ ಮಾಡುವ ಮೊದಲು ಅತ್ಯಂತ ಎಚ್ಚರಿಕೆ ವಹಿಸಬೇಕೆಂದು ತಿಳಿಸಿದ್ದಾರೆ.
ವಾಟ್ಸ್‌ಪ್, ಟೆಲಿಗ್ರಾಮ್ ಸೇರಿದಂತೆ ವಿವಿಧ ಮೆಸೇಜಿಂಗ್ ಅಪ್ಲಿಕೇಶನ್‌ಗಳ ಮೂಲಕ ಕಳುಹಿಸಲಾಗುವ ಈ ರೀತಿಯ ಲಿಂಕ್‌ಗಳು ಬಹುತೇಕ APK ಅಥವಾ Android Package Kit ಫೈಲ್‌ಗಳನ್ನು ಒಳಗೊಂಡಿರುತ್ತವೆ. ಬಳಕೆದಾರರು ಅಜಾಗರೂಕತೆಯಿಂದ ಇವುಗಳನ್ನು ಕ್ಲಿಕ್ ಮಾಡಿದ ಕ್ಷಣದಲ್ಲೇ ಅವರ ಮೊಬೈಲ್ ಫೋನ್ ವಂಚಕರ ನಿಯಂತ್ರಣಕ್ಕೆ ಹೋಗುವ ಅಪಾಯ ಇರುತ್ತದೆ.
ಮೊಬೈಲ್ ಸಂಪೂರ್ಣ ಹ್ಯಾಕ್ ಆಗುವ ಸಾಧ್ಯತೆ: ಈ ವಂಚನೆಯ ಲಿಂಕ್‌ಗಳನ್ನು ತೆರೆಯುವ ಮೂಲಕ ಕೇವಲ ವೈಯಕ್ತಿಕ ಮಾಹಿತಿಯಷ್ಟೇ ಅಲ್ಲದೆ, ಮೊಬೈಲ್‌ನಲ್ಲಿರುವ ಫೋಟೋಗಳು, ದಾಖಲೆಗಳು, ಬ್ಯಾಂಕ್ ಮಾಹಿತಿ, ಇ-ಮೇಲ್ ವಿವರಗಳು ಹಾಗೂ ಸಂಪರ್ಕ ಸಂಖ್ಯೆಗಳನ್ನು ವಂಚಕರು ಸುಲಭವಾಗಿ ಕದಿಯುತ್ತಾರೆ. ಕೆಲ ಸಂದರ್ಭಗಳಲ್ಲಿ ಸಂಪೂರ್ಣ ಮೊಬೈಲ್‌ವೇ ಹ್ಯಾಕ್ ಆಗಿ, ಬಳಕೆದಾರರ ಹೆಸರಿನಲ್ಲೇ ಸುಲಿಗೆ, ಹಣಕಾಸು ವಂಚನೆ ಮತ್ತು ಕಳ್ಳತನ ನಡೆಯುವ ಅಪಾಯವೂ ಇದೆ.
ಇದರಿಂದಾಗಿ ಒಬ್ಬ ವ್ಯಕ್ತಿಗೆ ಮಾತ್ರವಲ್ಲದೆ, ಅವರ ಮೊಬೈಲ್‌ನಲ್ಲಿರುವ ಇತರರ ಸಂಪರ್ಕ ಸಂಖ್ಯೆಗಳು ಹಾಗೂ ಇಮೇಲ್ ವಿಳಾಸಗಳಿಗೂ ಅಪಾಯ ಎದುರಾಗುತ್ತದೆ. ಇದರಿಂದ ಸಾಮಾನ್ಯ ಜನರ ಹೆಸರನ್ನು ದುರುಪಯೋಗಪಡಿಸಿಕೊಂಡು ವಂಚಕರು ಅಪರಾಧ ಚಟುವಟಿಕೆ ನಡೆಸುವ ಸಾಧ್ಯತೆ ಹೆಚ್ಚಾಗುತ್ತದೆ ಎಂದು ಪೊಲೀಸರು ಎಚ್ಚರಿಸಿದ್ದಾರೆ.
ಸಾರ್ವಜನಿಕರಿಗೆ ಪೊಲೀಸ್ ಇಲಾಖೆಯ ಸಲಹೆಗಳು: ಅನಗತ್ಯ ಲಿಂಕ್‌ಗಳನ್ನು ಯಾವುದೇ ಕಾರಣಕ್ಕೂ ಕ್ಲಿಕ್ ಮಾಡಬಾರದು. ಅಪರಿಚಿತರಿಂದ ಬಂದ APK ಫೈಲ್‌ಗಳನ್ನು ಡೌನ್‌ಲೋಡ್ ಮಾಡಬಾರದು. ಅನುಮಾನಾಸ್ಪದ ಸಂದೇಶಗಳನ್ನು ತಕ್ಷಣ ಡಿಲೀಟ್ ಮಾಡಬೇಕು. ಇಂತಹ ವಂಚನೆಗೆ ಒಳಗಾದಲ್ಲಿ ತಕ್ಷಣವೇ ಪೊಲೀಸ್ ಠಾಣೆ ಅಥವಾ ಸೈಬರ್ ಕ್ರೈಂ ವಿಭಾಗಕ್ಕೆ ಮಾಹಿತಿ ನೀಡಬೇಕು
ಹೊಸ ವರ್ಷದ ಸಂಭ್ರಮವನ್ನು ಸುರಕ್ಷಿತವಾಗಿ ಆಚರಿಸಲು ಸಾರ್ವಜನಿಕರು ಜಾಗೃತರಾಗಬೇಕೆಂದು ಹುಬ್ಬಳ್ಳಿ–ಧಾರವಾಡ ಪೊಲೀಸ್ ಇಲಾಖೆ ಮನವಿ ಮಾಡಿದೆ.























