ಕೋಗಿಲು ಬಡಾವಣೆ ಅಕ್ರಮ ವಲಸಿಗರ ಕುರಿತು SIT ತನಿಖೆಗೆ ಆಗ್ರಹ

0
16

ಮಂಗಳೂರು: ಬೆಂಗಳೂರು ನಗರದ ಕೋಗಿಲು ಬಡಾವಣೆಯಲ್ಲಿ ಅಕ್ರಮವಾಗಿ ನೆಲೆಸಿರುವ ವಲಸಿಗರು ಎಲ್ಲಿಂದ ಬಂದವರು, ಅವರು ಇಲ್ಲಿ ಬಂದು ನೆಲೆಸಲು ಕಾರಣವೇನು, ಈ ಪ್ರಕ್ರಿಯೆ ಹಿಂದೆ ಯಾರ ಕೈವಾಡವಿದೆ ಎಂಬುದರ ಕುರಿತು ಸಮಗ್ರ ತನಿಖೆ ನಡೆಸಲು ಸರಕಾರ ವಿಶೇಷ ತನಿಖಾ ತಂಡ (SIT) ರಚಿಸಬೇಕು ಎಂದು ಶಾಸಕ ಡಾ. ವೈ. ಭರತ್ ಶೆಟ್ಟಿ ಒತ್ತಾಯಿಸಿದ್ದಾರೆ.

ನಗರದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಗಿಲು ಬಡಾವಣೆಯಲ್ಲಿ ಅಕ್ರಮವಾಗಿ ಟೆಂಟ್‌ಗಳನ್ನು ಅಳವಡಿಸಿ ವಾಸವಾಗಿರುವವರಿಗೆ ಉಚಿತವಾಗಿ ಮನೆ ಕಟ್ಟಿಸಿಕೊಡುವ ನಿರ್ಧಾರಕ್ಕೆ ಕಾಂಗ್ರೆಸ್ ಸರಕಾರ ಮುಂದಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಈ ಕ್ರಮವು ಕೇರಳದ ಕೆಲವು ರಾಜಕೀಯ ಮುಖಂಡರ ಒತ್ತಡದ ಫಲವಾಗಿ ನಡೆಯುತ್ತಿದೆ ಎಂದು ಆರೋಪಿಸಿದರು.

ಇದನ್ನೂ ಓದಿ: ಮಾಜಿ ಸಚಿವ ನಾಗೇಂದ್ರ ಆಪ್ತರ ಮನೆಗಳ ಮೇಲೆ CBI ದಾಳಿ

ರಾಜ್ಯದ ಬಡವರಿಗೆ ಮನೆ ಇಲ್ಲ, ಹೊರ ರಾಜ್ಯದವರಿಗೆ ಏಕೆ?: ರಾಜ್ಯದಲ್ಲಿ ವಾಸಿಸುತ್ತಿರುವ ಅನೇಕ ಬಡವರಿಗೆ ಸರಕಾರ ಇನ್ನೂ ಒಂದು ಮನೆ ಕೂಡ ಕಟ್ಟಿಸಿಕೊಟ್ಟಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಹೊರ ರಾಜ್ಯದಿಂದ ಬಂದ ಅಕ್ರಮ ವಲಸಿಗರಿಗೆ ಮನೆ ಕಟ್ಟಿಸಿಕೊಡುವ ಔಚಿತ್ಯವೇನು? ಎಂದು ಅವರು ಪ್ರಶ್ನಿಸಿದರು. ಈ ಬೆಳವಣಿಗೆಯ ಹಿಂದೆ ಸಚಿವ ಜಮೀರ್ ಅಹ್ಮದ್ ಅವರ ನೇರ ಅಥವಾ ಪರೋಕ್ಷ ಕೈವಾಡವಿದೆ ಎಂದು ಗಂಭೀರ ಆರೋಪ ಮಾಡಿದರು.

2023ರ ಬಳಿಕವೇ ವಲಸಿಗರ ಸಂಖ್ಯೆ ಹೆಚ್ಚಳ: ಕೋಗಿಲು ಬಡಾವಣೆಯಲ್ಲಿ 2023ರ ಬಳಿಕವೇ ಅಕ್ರಮ ವಲಸಿಗರ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಿದ ಡಾ. ಭರತ್ ಶೆಟ್ಟಿ, 2023ರ ಹಿಂದಿನ ಗೂಗಲ್ ಮ್ಯಾಪ್ ಚಿತ್ರಗಳನ್ನು ಪರಿಶೀಲಿಸಿದರೆ ಈ ವಿಚಾರ ಸ್ಪಷ್ಟವಾಗುತ್ತದೆ ಎಂದರು. ಪ್ರಸ್ತುತ ಅಲ್ಲಿನ ಬಹುತೇಕ ಜಾಗವನ್ನು ಒತ್ತುವರಿ ಮಾಡಲಾಗಿದ್ದು, ಇದರ ಹಿಂದೆ ಯೋಜಿತ ಪಿತೂರಿ ಅಡಗಿದೆ ಎಂದು ಆರೋಪಿಸಿದರು.

ಮತಬೇಟೆಗಾಗಿ ಈ ಪ್ರಯತ್ನ?: ಈ ಸಂಪೂರ್ಣ ಬೆಳವಣಿಗೆಯು ಮುಸ್ಲಿಂ ಮತಬ್ಯಾಂಕ್‌ ರಾಜಕಾರಣದ ಭಾಗವಾಗಿದೆ ಎಂದು ಟೀಕಿಸಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಥವಾ ಸಚಿವ ಜಮೀರ್ ಅಹ್ಮದ್ ಅವರ ಜಮೀನಿನಲ್ಲಿ ನಾವು ಒತ್ತುವರಿ ಮಾಡಿದರೆ ಸರಕಾರ ನಮಗೂ ಮನೆ ಕಟ್ಟಿಸಿಕೊಡುತ್ತದೆಯೇ? ಎಂದು ಕಟುವಾಗಿ ಪ್ರಶ್ನಿಸಿದರು.

ಇದನ್ನೂ ಓದಿ: ಪ್ರೀತಿಯಿಂದ ಪರಮೇಶ್ವರ್ ಸಿಎಂ ಮಾಡಿ ಅಂದ್ರೆ, ಬೇಡಾ ಅನ್ನೋಕಾಗುತ್ತಾ?

ವಿಕೋಪ ಪೀಡಿತರಿಗೆ ನೆರವಿಲ್ಲ, ಅಕ್ರಮರಿಗೆ ಮನೆ?: ಈ ಹಿಂದೆ ರಾಜ್ಯದಲ್ಲಿ ಪ್ರಾಕೃತಿಕ ವಿಕೋಪಗಳಿಂದ ಅನೇಕ ಮಂದಿ ಮನೆ ಕಳೆದುಕೊಂಡಿದ್ದರು. ಆದರೆ ಅವರಿಗೆ ಸರಕಾರ ಮನೆ ನಿರ್ಮಿಸಿಕೊಡಲು ಮುಂದಾಗಲಿಲ್ಲ. ಹೀಗಿರುವಾಗ ಅಕ್ರಮ ವಲಸಿಗರಿಗೆ ಮನೆ ನೀಡಲು ಹೊರಟಿರುವುದು ಅನ್ಯಾಯಕರ ಹಾಗೂ ಕ್ಷಮಿಸಲಾಗದ ನೀತಿ ಎಂದು ಡಾ. ವೈ. ಭರತ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.

ಈ ಪ್ರಕರಣದಲ್ಲಿ ಸತ್ಯಾಂಶ ಹೊರಬರಬೇಕಾದರೆ ರಾಜಕೀಯ ಹಸ್ತಕ್ಷೇಪವಿಲ್ಲದ ಸ್ವತಂತ್ರ ಎಸ್‌ಐಟಿ ತನಿಖೆ ಅನಿವಾರ್ಯ ಎಂದು ಅವರು ಆಗ್ರಹಿಸಿದರು.

Previous articleಕರ್ನಾಟಕದಲ್ಲಿ NIPER ಸ್ಥಾಪನೆಗೆ ಸಚಿವ ಎಂ.ಬಿ. ಪಾಟೀಲ್ ಮನವಿ