ಛೋಟಾ ಮುಂಬೈ ಹುಬ್ಬಳ್ಳಿ: ಕ್ರೈಂ ರಿವೈಂಡ್‌ 2025

0
11

ಮಾಲತೇಶ ಹೂಲಿಹಳ್ಳಿ
ಹುಬ್ಬಳ್ಳಿ: ಛೋಟಾ ಮುಂಬೈ ಖ್ಯಾತಿಯ ವಾಣಿಜ್ಯನಗರಿ ಹುಬ್ಬಳ್ಳಿಯ 2025ರ ಕ್ರೈಂ ಲೋಕ ತುಸು ಪೆಟ್ಟು ಬಿದ್ದು ಬೆಚ್ಚಿಬಿದಿದ್ದೆಯಾದರೂ, ಎನ್‌ಕೌಂಟರ್, ಬಾಲ ಬಿಚ್ಚಿದ ಆರೋಪಿಗಳಿಗೆ ಗುಂಡೇಟು, ವರ್ಷದ ಕೊನೆಯಲ್ಲಿ ನಗರದ ಹೊರವಲಯ ಊರಲ್ಲಿ ನಡೆದ ಮರ್ಯಾದೆಗೇಡು ಹತ್ಯೆ, ದರೋಡೆಗಳಂತಹ ಪ್ರಕರಣಗಳು ಹುಬ್ಬಳ್ಳಿಗೆ ಕಪ್ಪು ಮಸಿ ಬಳಿದಿವೆ.

ಹೌದು… ವಾಣಿಜ್ಯನಗರಿಯಲ್ಲಿ ಕೊಲೆ ಸಂಖ್ಯೆ ಸ್ವಲ್ಪ ಇಳಿಮುಖವಾಗಿದೆ. ಆದರೆ ಚಾಕು ಇರಿತ, ದರೋಡೆ, ಸೈಬರ್ ವಂಚನೆ, ಕಳ್ಳತನದಂತಹ ಕೃತ್ಯಗಳಿಗೆ ಪೂರ್ಣವಿರಾಮ ಬಿದ್ದಿಲ್ಲ. ಹೀಗಾಗಿ ವಾಣಿಜ್ಯ ನಗರಿಯಲ್ಲಿ 2025ನೇ ಸಾಲು ಸಿಹಿ-ಕಹಿ ಘಟನೆಗಳಿಗೆ ಸಾಕ್ಷಿಯಾಗಿದೆ. ಈ ನಡುವೆ ಪೊಲೀಸರು ಗುಂಡೇಟು ಅಪರಾಧಿಗಳಿಗೆ ಬುದ್ದಿ ಕಲಿಸಿದ್ದು, ಹಲವರ ಹೆಸರನ್ನು ರೌಡಿಶೀಟರ್ ಪಟ್ಟಿಯಲ್ಲಿ ಸೇರ್ಪಡೆ, ಪುಂಡಾಟ ಮೆರೆಯುವವರನ್ನು ಗೂಂಡಾ ಕಾಯ್ದೆಯಡಿ ಜೈಲಿಗೆ ಅಟ್ಟಿದ್ದು, ಗಾಂಜಾ ಕುಳಗಳಿಗೆ ಬಿಸಿ ಮುಟ್ಟಿಸಿದ ಗಾಂಜಾ ಪೆಡ್ಲರ್ ಪರೇಡ್, ರೌಡಿಶೀಟರ್ ಪರೇಡ್‌ನಂತಹ ಪೊಲೀಸ್ ಇಲಾಖೆ ಕಾರ್ಯಗಳು ಮೆಚ್ಚುಗೆಗೆ ಪಾತ್ರವಾಗಿವೆ.

ಜ. 11ರಂದು ಕುಸುಗಲ್‌ನಲ್ಲಿ ಮಗನಿಂದಲೇ ತಂದೆ, ಮಲತಾಯಿಯನ್ನು ಭೀಕರವಾಗಿ ಕೊಲೆ ಮಾಡಿದ ಘಟನೆ ನಡೆದಿತ್ತು. ಮಾರ್ಚ್ 13ರಂದು ಹುಬ್ಬಳ್ಳಿಯಲ್ಲಿ ಕೊಲೆ ಮಾಡಿ ಬಂಕಾಪುರದಲ್ಲಿ ಶವ ಪತ್ತೆಯಾದ ಘಟನೆ, ಏ. 1 ರಂದು ಈದ್ ವೇಳೆ ಅವಹೇಳನಕಾರಿ ಪೋಸ್ಟರ್ ಪ್ರದರ್ಶನ, ಜೂ. 4 ರಂದು ಅರಳಿಕಟ್ಟಿ ಓಣಿಯಲ್ಲಿ ಮಣ್ಣು ಕುಸಿದು ಕಾರ್ಮಿಕ ಸಾವು. ಮೇ 24 ರಂದು ಬಿಕ್ಷುಕರ ನಡುವೆ ಜಗಳ ನಡೆದು ಓರ್ವನ ಕೊಲೆ, ನ. 13ರಂದು ಮಂಟೂರ ರಸ್ತೆಯಲ್ಲಿ ಗುಂಪು ಸೇರಿ ಮಲ್ಲಿಕ್‌ಜಾನ್ ಎಂಬಾತನ ಕೊಲೆ, ನ. 22ರಂದು ಹಣಕ್ಕಾಗಿ ಕಸಬಾಪೇಟೆ ವ್ಯಾಪ್ತಿಯಲ್ಲಿ ಸ್ನೇಹಿತನ ಕೊಲೆ, ಅಕ್ಟೋಬರ್‌ನಲ್ಲಿ ಬೆಂಡಿಗೇರಿ ಠಾಣೆ ವ್ಯಾಪ್ತಿಯಲ್ಲಿ ಚಾಕು ಇರಿತ ಘಟನೆಗಳು ಅವಳಿನಗರದಲ್ಲಿ ನಡೆದಿವೆ.

ನ. 19ರಂದು ನಗರದ ಚನ್ನಮ್ಮ ವೃತ್ತದ ಬಳಿ ಚಿನ್ನದ ವ್ಯಾಪಾರಿ ಸುಧೀನ್ ಎಂಬಾತನಿಂದ 3.2 ಕೋಟಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ನಡೆದಿದ್ದು, ಉತ್ತರ ಪ್ರದೇಶ ಮೂಲದ ಆರೋಪಿಗಳನ್ನು ಬಂಧಿಸಲಾಗಿತ್ತು.

ಗೂಂಡಾ ಕಾಯ್ದೆ, ಗಡಿಪಾರು ಶಿಕ್ಷೆ: 2025ರಲ್ಲಿ ಒಟ್ಟು 6 ಜನರ ವಿರುದ್ಧ ಗೂಂಡಾ ಕಾಯ್ದೆ, 132 ರೌಡಿಶೀಟರ್‌ಗಳನ್ನು ಗಡಿಪಾರು ಮಾಡಲಾಯಿತು. ಪೊಲೀಸ್ ಇಲಾಖೆ ಆಯುಕ್ತಾಲಯ ವ್ಯಾಪ್ತಿಯ 1,700 ರೌಡಿಗಳಲ್ಲಿ 500 ಮಂದಿ ಹೆಸರನ್ನು ರೌಡಿ ಪಟ್ಟಿಯಿಂದ ತೆಗೆಯಲಾಗಿದೆ. ಹೆಚ್ಚುವರಿಯಾಗಿ 108 ಮಂದಿ ಸೇರ್ಪಡೆ ಮಾಡಲಾಗಿದೆ.

ದೇಶದ ಗಮನ ಸೆಳೆದ ಮೊದಲ ಎನ್‌ಕೌಂಟರ್: ಹುಬ್ಬಳ್ಳಿಯ ಅಧ್ಯಾಪಕ ನಗರದಲ್ಲಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಬಿಹಾರ ಮೂಲದ ರಿತೇಶಕುಮಾರ ಎಂಬಾತನನ್ನು ಏ. 13ರಂದು ಪೊಲೀಸರು ಎನ್‌ಕೌಂಟರ್ ಮಾಡಿದರು. ಇದು ಹುಬ್ಬಳ್ಳಿಯ ಮೊದಲ ಎನ್‌ಕೌಂಟರ್ ಪ್ರಕರಣವಾಗಿದೆ.

ಮನೆಗೆಲಸಕ್ಕೆ ಹೋಗಿದ್ದ ತಾಯಿ ಒಳಗಡೆ ಕೆಲಸ ಮಾಡುತ್ತಿದ್ದಾಗ ಗೇಟ್ ಬಳಿ ಆಟವಾಡುತ್ತಿದ್ದ ಬಾಲಕಿಯನ್ನು ಹೊತ್ತೊಯ್ದ ದುರುಳ, ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಹುಬ್ಬಳ್ಳಿ ಅಶೋಕ ನಗರದ ಪೊಲೀಸರು, ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಿದ್ದರು. ವಿಚಾರಣ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದಾಗ ಪಿಎಸ್‌ಐ ಅನ್ನಪೂರ್ಣ ಎನ್‌ಕೌಂಟರ್ ಮಾಡಿದ್ದರು. ಈ ಶಿಕ್ಷೆಗೆ ದೇಶಾದ್ಯಂತ ಶ್ಲಾಘನೆ ವ್ಯಕ್ತವಾಗಿತ್ತು. ರಾಜ್ಯ ಮಾನವ ಹಕ್ಕುಗಳ ಆಯೋಗವು ತನಿಖೆ ನಡೆಸುತ್ತಿದೆ.

ಬಾಲಕನಿಗೆ ಚಾಕು ಇರಿತ: ಡಿಜೆ ಮತ್ತು ಲೈಟಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಬಾಲಕನೇ ಬಾಲಕನನ್ನು ಚಾಕುವಿನಿಂದ ಇರಿದು ಕೊಂದ ಘಟನೆ ಇಲ್ಲಿಯ ಗುರುಸಿದ್ದೇಶ್ವರ ನಗರದಲ್ಲಿ ಮೇ 12 ರಂದು ನಡೆದಿತ್ತು. ಆರನೇ ತರಗತಿ ಓದುವ ಬಾಲಕ 8ನೇ ತರಗತಿಯ ಚೇತನ ಎನ್ನುವ ಬಾಲಕನಿಗೆ ಚಾಕು ಇರಿದಿದ್ದ. ರಕ್ತಸ್ರಾವದಿಂದ ನರಳುತ್ತಿದ್ದ ಚೇತನನನ್ನು ಕೆಎಂಸಿಆರ್‌ಐಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ ಮೃತಪಟ್ಟಿದ್ದರ ಕುರಿತು ಕಮರಿಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಸದ್ದು ಮಾಡಿದ ಪೊಲೀಸರ ಗನ್: ವಾಣಿಜ್ಯನಗರಿಯಲ್ಲಿ 5 ಬಾರಿ ಗುಂಡಿನ ಸದ್ದು ಪೊಲೀಸರಿಂದ ಮೊಳಗಿದೆ. ವಿದ್ಯಾನಗರದ ಗೋಲ್ಡನ್ ಹೈಟ್ಸ್ ಬಾರ್ ಅಂಡ್ ರೆಸ್ಟೋರೆಂಟ್‌ನ ಪಾರ್ಕಿಂಗ್ ಜಾಗದಲ್ಲಿ ಜ. 1ರಂದು ತಡರಾತ್ರಿ ಆಕಾಶ ವಾಲ್ಮೀಕಿ (22) ಎನ್ನುವ ಯುವಕನನ್ನು ಚಾಕುವಿನಿಂದ ಇರಿದು ಐವರು ಕೊಲೆ ಮಾಡಿದ್ದರು. ಆನಂದ ನಗರದ ಅಭಿಷೇಕ ಶಿರೂರ, ಯಲ್ಲಪ್ಪ ಕೋಟಿ, ವಿನೋದ ಅಂಬಿಗೇರ ಎನ್ನುವವರನ್ನು ಪೊಲೀಸರು ವಶಕ್ಕೆ ಪಡೆದು ಸ್ಥಳ ಮಹಜರು ನಡೆಸುವ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದರು. ಈ ಮೂವರ ಕಾಲಿಗೆ ಪಿಎಸ್‌ಐ ಸುನೀಲ ಎಂ., ಶ್ರೀಮಂತ ಹುಣಸಿಕಟ್ಟಿ ಗುಂಡು ಹೊಡೆದಿದ್ದರು.

ನಟೋರಿಯಸ್ ಗ್ಯಾಂಗ್: ನಗರ ಹೊರವಲಯದಲ್ಲಿ ವಾಹನಗಳನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ ನಟೋರಿಯಸ್ ಗ್ಯಾಂಗ್‌ನ ಇಬ್ಬರ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದರು. ಬೆಂಡಿಗೇರಿ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಎಸ್.ಆರ್. ನಾಯಿಕ ನೇತೃತ್ವದ ತಂಡದಲ್ಲಿದ್ದ ಪಿಎಸ್‌ಐ ಅಶೋಕ, ಆರೋಪಿಗಳಾದ ಗುಜರಾತ್ ಮೂಲದ ನಿಲೇಶ, ದಿಲೀಪ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದರು.

ಬೈಕ್ ಮೇಲೆ ಹೊರಟ್ಟಿದ್ದ ಕುಂದಗೋಳ ಮೂಲದ ವ್ಯಕ್ತಿಗೆ ನಾಲ್ಕೈದು ಜನರ ಗುಂಪು ಅಡ್ಡಗಟ್ಟಿ ಬೈಕ್, ನಗದು, ಮೊಬೈಲ್ ಫೋನ್ ಸುಲಿಗೆ ಮಾಡಿ ಹಲ್ಲೆ ನಡೆಸಿ ಪರಾರಿಯಾಗಿತ್ತು. ಇದಾದ ಸ್ವಲ್ಪ ಸಮಯದಲ್ಲಿ ರವಿಚಂದ್ರ ಎಂಬುವವರನ್ನು ಅಡ್ಡಗಟ್ಟಿ ಈ ತಂಡ ಸುಲಿಗೆ ಮಾಡಿತ್ತು. ನಂತರ ಮಂಟೂರ ರಸ್ತೆಯಲ್ಲಿನ ಶಾರುಖ್ ಎಂಬುವವರ ಮನೆಗೆ ಕನ್ನ ಹಾಕಲು ಯತ್ನಿಸಿ ಮನೆಗೆ ಕಲ್ಲು ತೂರಾಟ ನಡೆಸಿತ್ತು.

ವಿಷಯ ತಿಳಿಯುತ್ತಿದ್ದಂತೆ ಪಿಎಸ್‌ಐ ಅಶೋಕ ಹಾಗೂ ಪೇದೆಗಳಾದ ಶರಣು, ಸೋಮಣ್ಣ ಮೇಟಿ ಸೇರಿ ನಗರ ಹೊರವಲಯದ ಬಿಡನಾಳ ಸಮೀಪ ತಪಾಸಣೆ ನಡೆಸುವ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿ ದರೋಡೆಕೋರರು ಪರಾರಿಯಾಗಲು ಯತ್ನಿಸಿದ್ದರು. ಈ ವೇಳೆ ಆತ್ಮರಕ್ಷಣೆಗಾಗಿ ಪೊಲೀಸರು ಇಬ್ಬರು ಆರೋಪಿಗಳ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದರು. ಆಂಧ್ರಪ್ರದೇಶ, ಮಹಾರಾಷ್ಟ್ರ, ಬಿಹಾರ, ಗುಜರಾತ್ ಮೂಲದ ಗ್ಯಾಂಗ್‌ಗಳ ಮೇಲೆ ಪೊಲೀಸರು ಫೈರಿಂಗ್ ಮಾಡಿ, ಆರೋಪಿಗಳನ್ನು ಬಂಧಿಸಿದ್ದು 2025ರಲ್ಲಿ ದಾಖಲಾಗಿದೆ. ನವೆಂಬರ್ 16 ರಂದು ಮಂಟೂರ ರಸ್ತೆಯಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳಿಗೆ ಪೊಲೀಸರು ಫೈರಿಂಗ್ ಮಾಡಿದ್ದರು.

ಅಂಗನವಾಡಿ ಅನ್ನಕ್ಕೆ ಕನ್ನ ಹಾಕಿದ ಪ್ರಕರಣ: ಅಂಗನವಾಡಿಗೆ ಪೂರೈಕೆ ಮಾಡಬೇಕಾದ 329 ಚೀಲಗಳಲ್ಲಿನ 8 ಟನ್ 84 ಕೆಜಿ ಪೌಷ್ಟಿಕ ಆಹಾರ ಪದಾರ್ಥಗಳನ್ನು ಗೋದಾಮುಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪ್ರಕರಣದ ಆರೋಪಿಗಳ ವಿರುದ್ಧ, ಕಸಬಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದವು. ಈ ಪ್ರಕರಣದಲ್ಲಿ 30ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿತ್ತು.

ಗಾಂಜಾ ಘಾಟಿಗಿಲ್ಲ ಕೊನೆ: ಛೋಟಾ ಮುಂಬೈನಲ್ಲಿ ಗಾಂಜಾ ಘಮಲು ತನ್ನದೇ ಜಾಲವನ್ನು ಹೊಂದಿದೆ. ಹೊರ ರಾಜ್ಯ, ದೇಶದಿಂದ ಬರುವ ಗಾಂಜಾ ಕುಳಗಳು, ಇಲ್ಲಿ ಗಾಂಜಾ ಮಾರಾಟ ಮಾಡಿ ಹೋಗುತ್ತಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಜನವರಿಯಿಂದ ಜುಲೈವರೆಗೆ ಒಟ್ಟು 372 ಜನರನ್ನು ಬಂಧಿಸಿದ್ದು, 28 ಲಕ್ಷ ರೂ. ಮೌಲ್ಯದ 35 ಕೆಜಿ ಗಾಂಜಾ ಜಪ್ತಿ ಮಾಡಿದ್ದರು.

ಲೋಕಾಯುಕ್ತ ಪೊಲೀಸ್ ಇನ್ಸಪೆಕ್ಟರ್ ಸಾವು: ಡಿಸೆಂಬರ್ 5 ರಂದು ಅಣ್ಣಿಗೇರಿ ಬಳಿ ನಡೆದ ಕಾರು ಅಪಘಾತದಲ್ಲಿ ಹಾವೇರಿಯ ಲೋಕಾಯುಕ್ತದಲ್ಲಿ ಸೇವೆ ಸಲ್ಲಿಸುತ್ತಿದ್ದ ಪೊಲೀಸ್ ಇನ್ಸಪೆಕ್ಟರ್ ಪಂಚಾಕ್ಷರಯ್ಯ ಸಾಲಿಮಠ ಭೀಕರ ಅಪಘಾತದಲ್ಲಿ ಕಾರಿಗೆ ಬೆಂಕಿ ಹೊತ್ತಿಕೊಂಡು ಕಾರಿನಲ್ಲಿ ಮೃತಪಟ್ಟ ಘಟನೆ ಪೊಲೀಸ್ ಇಲಾಖೆಗೆ ನೋವು ತರಿಸಿತ್ತು. ಧಾರವಾಡ ಗ್ರಾಮೀಣ, ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು.

ಸಮಾಜದ ತಲೆತಗ್ಗಿಸಿದ ಗರ್ಭಿಣಿ ಮರ್ಯಾದೆ ಹತ್ಯೆ: ಅನ್ಯ ಜಾತಿಯ ಯುವಕನನ್ನು ಮದುವೆಯಾಗಿದ್ದಾಳೆ ಎಂಬ ಕಾರಣಕ್ಕೆ ಹೆತ್ತ ತಂದೆಯೇ ಏಳು ತಿಂಗಳ ಗರ್ಭಿಣಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಡಿ. 22ರಂದು ಹುಬ್ಬಳ್ಳಿ ತಾಲೂಕಿನ ಇನಾಂವೀರಾಪುರ ಗ್ರಾಮದಲ್ಲಿ ನಡೆದೆ ಹೋಯಿತು. ಗ್ರಾಮದ ಮಾನ್ಯಾ (20) ಮೃತ ಗರ್ಭಿಣಿ. ಅದೇ ಗ್ರಾಮದ ವಿವೇಕಾನಂದ ಎಂಬವನನ್ನು ಪ್ರೀತಿಸಿ ಮದುವೆಯಾಗಿದ್ದಳು. ಯುವಕ ಅನ್ಯಜಾತಿಯವನು ಎಂಬ ಕಾರಣಕ್ಕೆ ಆಕೆಯ ತಂದೆ ಪ್ರಕಾಶಗೌಡ ಮನೆಗೆ ನುಗ್ಗಿ, ಗರ್ಭಿಣಿ ಎಂಬುದನ್ನೂ ನೋಡದೇ ಪೈಪ್ ಮತ್ತು ಗುದ್ದಲಿಯಿಂದ ಹಲ್ಲೆ ಮಾಡಿ ಮಾನ್ಯಾಳನ್ನು ಹತ್ಯೆ ಮಾಡಿದ್ದ. ಈ ಪ್ರಕರಣ ಸಂಬಂಧ 15 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಹತ್ಯೆ ಮಾಡಿದ 8 ಜನ ಆರೋಪಿಗಳನ್ನು ಬಂಧಿಸಲಾಗಿದೆ.

Previous articleಬಸ್–ಲಾರಿ ಮುಖಾಮುಖಿ ಡಿಕ್ಕಿ, ಚಾಲಕನ ಕಾಲು ತುಂಡು, ಹಲವರಿಗೆ ಗಂಭೀರ ಗಾಯ