ಭಾಗಲಕೋಟೆ: ಬೆಳಗಾವಿ–ರಾಯಚೂರು ರಾಜ್ಯ ಹೆದ್ದಾರಿಯಲ್ಲಿ ಇಂದು ಸಂಭವಿಸಿದ ಭೀಕರ ರಸ್ತೆ ಅಪಘಾತವು ಸ್ಥಳೀಯರಲ್ಲಷ್ಟೇ ಅಲ್ಲದೆ ಇಡೀ ಜಿಲ್ಲೆಯಲ್ಲಿ ಆತಂಕ ಮತ್ತು ಸಂಚಲನ ಮೂಡಿಸಿದೆ. ವೇಗವಾಗಿ ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಮತ್ತು ಲಾರಿ ಮುಖಾಮುಖಿಯಾಗಿ ಡಿಕ್ಕಿಯಾದ ಪರಿಣಾಮ ಅಪಘಾತದ ತೀವ್ರತೆ ಭಯಾನಕವಾಗಿತ್ತು.
ಲೋಕಾಪುರ ಪಟ್ಟಣದ ಹೊರವಲಯದಲ್ಲಿರುವ ರಾಜ್ಯ ಹೆದ್ದಾರಿಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಡಿಕ್ಕಿಯ ರಭಸ ಎಷ್ಟಿತ್ತೆಂದರೆ ಬಸ್ ಹಾಗೂ ಲಾರಿಯ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಅಪಘಾತದ ಸಂದರ್ಭದಲ್ಲಿ ಬಸ್ ಚಾಲಕ ವಾಹನದ ಒಳಗೇ ಸಿಲುಕಿಕೊಂಡಿದ್ದು, ಅವರ ಕಾಲು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ತುಂಡಾಗಿರುವುದಾಗಿ ತಿಳಿದುಬಂದಿದೆ.
ಇದನ್ನೂ ಓದಿ: ಮಾಜಿ ಸಚಿವ ನಾಗೇಂದ್ರ ಆಪ್ತರ ಮನೆಗಳ ಮೇಲೆ CBI ದಾಳಿ
ಗಾಯಾಳುಗಳಿಗೆ ತುರ್ತು ಚಿಕಿತ್ಸೆ: ಘಟನೆಯಲ್ಲಿ ಬಸ್‌ನಲ್ಲಿದ್ದ ಹಲವಾರು ಪ್ರಯಾಣಿಕರು ರಕ್ತಸಿಕ್ತವಾಗಿ ಗಾಯಗೊಂಡಿದ್ದಾರೆ. ಚಾಲಕ ಸೇರಿದಂತೆ ಗಂಭೀರವಾಗಿ ಗಾಯಗೊಂಡವರನ್ನು ಸ್ಥಳೀಯರು ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ತಕ್ಷಣವೇ ಲೋಕಾಪುರ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಕೆಲವರ ಸ್ಥಿತಿ ಗಂಭೀರವಾಗಿದ್ದು, ಅಗತ್ಯವಿದ್ದರೆ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ.
ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆಯೇ ಲೋಕಾಪುರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಅಪಘಾತದಿಂದಾಗಿ ಕೆಲಕಾಲ ಬೆಳಗಾವಿ–ರಾಯಚೂರು ಹೆದ್ದಾರಿಯಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ನಂತರ ಪೊಲೀಸರು ಹಾಗೂ ಸಾರ್ವಜನಿಕರ ಸಹಾಯದಿಂದ ವಾಹನಗಳನ್ನು ತೆರವುಗೊಳಿಸಿ ಸಂಚಾರವನ್ನು ಸುಗಮಗೊಳಿಸಿದರು.
ಈ ಸಂಬಂಧ ಲೋಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತಕ್ಕೆ ನಿಖರ ಕಾರಣ ಏನು ಎಂಬುದರ ಕುರಿತು ತನಿಖೆ ಕೈಗೊಳ್ಳಲಾಗಿದೆ. ಅತಿವೇಗ ಹಾಗೂ ಅಜಾಗರೂಕ ಚಾಲನೆಯೇ ಅಪಘಾತಕ್ಕೆ ಕಾರಣವಾಗಿರಬಹುದೆಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ.























