ಬಳ್ಳಾರಿ: ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿರುವ ಕೇಂದ್ರ ತನಿಖಾ ದಳ (CBI), ಮಾಜಿ ಸಚಿವ ಹಾಗೂ ಹಾಲಿ ಶಾಸಕ ನಾಗೇಂದ್ರ ಅವರ ಆಪ್ತರ ಮನೆಗಳ ಮೇಲೆ ದಾಳಿ ನಡೆಸಿದೆ. ಬಳ್ಳಾರಿ ನಗರದಲ್ಲಿ ಇಬ್ಬರು ಆಪ್ತರಿಗೆ ಸಂಬಂಧಿಸಿದ ಮನೆಗಳಲ್ಲಿ ಸಿಬಿಐ ಅಧಿಕಾರಿಗಳು ಶೋಧ ಕಾರ್ಯ ನಡೆಸಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ನಗರದ ತೇರು ಬೀದಿಯಲ್ಲಿ ಇರುವ ವಿಶ್ವನಾಥ ಅವರ ಮನೆ ಹಾಗೂ ಹುಸೇನ್ ನಗರದಲ್ಲಿರುವ ಮಾರುತಿ ಅವರ ಮನೆ ಮೇಲೆ ಸಿಬಿಐ ದಾಳಿ ನಡೆಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ದಾಳಿ ವೇಳೆ ಅಧಿಕಾರಿಗಳು ದಾಖಲೆಗಳು, ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ದಾಖಲೆಗಳು ಹಾಗೂ ಇತರೆ ಮಹತ್ವದ ಮಾಹಿತಿಯನ್ನು ಪರಿಶೀಲಿಸುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಕೋಗಿಲು ಲೇಔಟ್‌ನಲ್ಲಿ ಬಾಂಗ್ಲಾದವರಿಲ್ಲ
ಮೂಲಗಳ ಪ್ರಕಾರ, ವಿಶ್ವನಾಥ ಹಾಗೂ ಮಾರುತಿ ಇಬ್ಬರೂ ಮಾಜಿ ಸಚಿವ ನಾಗೇಂದ್ರ ಅವರ ಅತ್ಯಂತ ಆಪ್ತರಾಗಿ ಕೆಲಸ ಮಾಡುತ್ತಿದ್ದರು. ವಿಶ್ವನಾಥ ಅವರು ನಾಗೇಂದ್ರ ಅವರ ಹಣಕಾಸು ಹಾಗೂ ಖಾತೆಗಳ (ಅಕೌಂಟ್) ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರೆ, ಮಾರುತಿ ಅವರು ವೈಯಕ್ತಿಕ ಮನೆ ಕೆಲಸ ಹಾಗೂ ನಿತ್ಯದ ವ್ಯವಸ್ಥೆಗಳನ್ನು ನಿರ್ವಹಿಸುತ್ತಿದ್ದರು ಎನ್ನಲಾಗಿದೆ.
ವಾಲ್ಮೀಕಿ ಹಗರಣದ ಸಂಪರ್ಕ ಶಂಕೆ: ಈ ದಾಳಿಗಳು ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಹಾಗೂ ದುರ್ಬಳಕೆ ಆರೋಪಗಳ ತನಿಖೆಯ ಭಾಗವಾಗಿದೆ ಎಂದು ಹೇಳಲಾಗುತ್ತಿದೆ. ಹಗರಣದಲ್ಲಿ ಸಾರ್ವಜನಿಕ ಹಣದ ದುರುಪಯೋಗ, ಅಕ್ರಮ ವರ್ಗಾವಣೆ ಹಾಗೂ ಮಧ್ಯವರ್ತಿಗಳ ಪಾತ್ರದ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ.
ಇದನ್ನೂ ಓದಿ: ಪ್ರೀತಿಯಿಂದ ಪರಮೇಶ್ವರ್ ಸಿಎಂ ಮಾಡಿ ಅಂದ್ರೆ, ಬೇಡಾ ಅನ್ನೋಕಾಗುತ್ತಾ?
ದಾಳಿ ನಡೆದ ಮನೆಗಳಲ್ಲಿ ಸಿಬಿಐ ಅಧಿಕಾರಿಗಳು ಹಲವು ಗಂಟೆಗಳ ಕಾಲ ತಪಾಸಣೆ ನಡೆಸಿದ್ದು, ಶಂಕಿತ ದಾಖಲೆಗಳನ್ನು ವಶಪಡಿಸಿಕೊಂಡಿರುವ ಸಾಧ್ಯತೆ ಇದೆ. ಈ ಸಂಬಂಧ ಸಿಬಿಐ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲದಿದ್ದರೂ, ತನಿಖೆ ಮುಂದಿನ ಹಂತಕ್ಕೆ ಸಾಗುವ ಲಕ್ಷಣಗಳು ಗೋಚರಿಸುತ್ತಿವೆ.
ರಾಜಕೀಯ ವಲಯದಲ್ಲಿ ಚರ್ಚೆ: ಮಾಜಿ ಸಚಿವ ನಾಗೇಂದ್ರ ಅವರ ಆಪ್ತರ ಮನೆಗಳ ಮೇಲೆ ಸಿಬಿಐ ದಾಳಿ ನಡೆದಿರುವುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಈ ದಾಳಿಯ ಪರಿಣಾಮವಾಗಿ ಇನ್ನಷ್ಟು ಮಹತ್ವದ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.























