ಹೊಸ ವರ್ಷಾಚರಣೆಗೆ ರಾಜ್ಯದ ರೆಸಾರ್ಟ್‌ಗಳು ಬಹುತೇಕ ಭರ್ತಿ!

0
1

ಬೆಂಗಳೂರು: ಹೊಸ ವರ್ಷ ಸಂಭ್ರಮಾಚರಣೆಗೆ ಕ್ಷಣಗಣನೆ ಶುರುವಾಗಿದ್ದು, ಚಿಕ್ಕಮಗಳೂರು, ಕೊಡಗು, ಮಂಗಳೂರು, ಕಾರವಾರ, ದಾಂಡೇಲಿ, ಮೈಸೂರು, ಸಕಲೇಶಪುರ ಸೇರಿದಂತೆ ಹಲವು ರೆಸಾರ್ಟ್‌ಗಳಲ್ಲಿ ಪ್ರವಾಸಿಗರು ಮುಂಗಡವಾಗಿ ಆನ್‌ಲೈನ್‌ನಲ್ಲೆ ಕೊಠಡಿ ಕಾಯ್ದಿರಿಸಿದ್ದು, ಬಹುತೇಕ ರೆಸಾರ್ಟ್‌ಗಳು ಭರ್ತಿಯಾಗಿವೆ.

ಇತ್ತೀಚಿನ ವರ್ಷಗಳಲ್ಲಿ ನ್ಯೂಯರ್ ಆಚರಣೆಗೆ ಕುಟುಂಬ, ಸ್ನೇಹಿತರೊಂದಿಗೆ ಪ್ರವಾಸಿ ಸ್ಥಳ, ಧಾರ್ಮಿಕ ಸ್ಥಳಗಳಿಗೆ ತೆರಳುವ ಹವ್ಯಾಸವನ್ನು ರೂಢಿಸಿಕೊಂಡಿದ್ದಾರೆ. ರಾಜ್ಯದ ನಾಗರಿಕರನ್ನು ಹೊರತು ಪಡಿಸಿ, ದೇಶದ ವಿವಿಧ ಭಾಗಗಳಿಂದ ಪ್ರವಾಸಿಗರು ಆಗಮಿಸಿ, ಕೆಲವು ದಿನಗಳು ತಂಗಲು ಇಚ್ಛಿಸಿ ಮುಂಗಡವಾಗಿ ಹಣ ಪಾವತಿಸಿ ಬುಕ್ ಮಾಡಿದ್ದಾರೆ. ಇದರಿಂದ ಬಹುತೇಕ ರೆಸಾರ್ಟ್‌ಗಳಲ್ಲಿ ಪ್ರವಾಸಿಗರ ದಂಡು ಹೆಚ್ಚಿದೆ.

ಹೊಸ ವರ್ಷ ಆಚರಣೆಗೆ ಧಾರ್ಮಿಕ ಹಾಗೂ ಪ್ರಕೃತಿ ತಾಣಗಳಿಗೆ ಆಗಮಿಸುವ ಪ್ರವಾಸಿಗರನ್ನು ಸ್ವಾಗತಿಸಲು ಹೋಟೆಲ್ ರೆಸಾರ್ಟ್‌ಗಳು ಸಿಂಗಾರಗೊಂಡಿವೆ. ಅವರನ್ನು ಸೆಳೆಯಲು ನಾನಾ ಕಾರ್ಯಕ್ರಮ ಆಯೋಜಿಸಲಾಗಿದೆ. ಮನರಂಜನೆಗಾಗಿಯೇ ಇರುವ ಪ್ರಸಿದ್ಧ ಕ್ಲಬ್‌ಗಳಲ್ಲಿ ರಸಮಂಜರಿ, ಡ್ಯಾನ್ಸ್ ಮತ್ತಿತರ ಕಾರ್ಯಕ್ರಮ ಆಯೋಜನೆ ಫ್ಲೆಕ್ಸ್‌ಗಳು ಈಗಾಗಲೇ ರಾರಾಜಿಸುತ್ತಿವೆ.

ಹೊಸ ವರ್ಷಾಚರಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಪೊಲೀಸ್ ಇಲಾಖೆ ಈಗಾಗಲೇ ಹೋಟೆಲ್, ರೆಸಾರ್ಟ್, ಹೋಂಸ್ಟೇ ಮಾಲೀಕರೊಂದಿಗೆ ಸಭೆ ನಡೆಸಿ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಿದೆ.

ರೆಸಾರ್ಟ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಕಡ್ಡಾಯವಾಗಿ ಅಳವಡಿಸಬೇಕು. ಹೋಂಸ್ಟೆಗಳಲ್ಲಿ ಧ್ವನಿವರ್ಧಕ ಅವಶ್ಯಕತೆ ಇದ್ದರೆ ಸಂಬಂಧಪಟ್ಟ ಪೊಲೀಸ್ ಠಾಣೆಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕಾಗಿದೆ. ರೇವ್ ಪಾರ್ಟಿ ಆಯೋಜಿಸಬಾರದು. ನೈತಿಕ ಪೊಲೀಸ್‌ಗಿರಿಗೆ ಅವಕಾಶ ಇರಬಾರದು.

ಅಹಿತಕರ ಸನ್ನಿವೇಶ ಉಂಟಾದರೆ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಮದ್ಯ ಸರಬರಾಜು ಮಾಡುವುದಿದ್ದರೆ ಸಿಎಲ್ -5 ಪರವಾನಗಿ ಪಡೆದುಕೊಳ್ಳಬೇಕು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ನ್ಯೂ ಇಯರ್ ಆಚರಣೆಗೆ ಬೇಕರಿಗಳು ಸಹ ಸಜ್ಜಾಗಿವೆ. ಆಕರ್ಷಕ ಕೇಕ್‌ಗಳನ್ನು ತಯಾರಿ ಮಾಡಿಕೊಡುವುದಾಗಿ ಗ್ರಾಹಕರನ್ನು ಆಕರ್ಷಿಸಲು ಮುಂದಾಗಿವೆ.
ಆದರೆ, ರಾಜ್ಯದಲ್ಲಿ ಮೊಟ್ಟೆ ಸುದ್ದಿ ಸದ್ದು ಮಾಡುತ್ತಿದ್ದು, ಕೆಲವು ಕಡೆ ಕೇಕ್‌ಗಳಿಗೆ ಬೇಡಿಕೆ ಕಡಿಮೆ ಆಗಿದೆ ಎಂದು ಹೇಳಲಾಗುತ್ತಿದೆ.

ಪ್ರವಾಸಿ ತಾಣಗಳಿಗೆ ತಾತ್ಕಾಲಿಕ ನಿರ್ಬಂಧ: ನಂದಿಬೆಟ್ಟ ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಮಾಣಿಕ್ಯಧಾರಾ, ಝರಿ ಫಾಲ್ಸ್, ಹೊನ್ನಮ್ಮನಹಳ್ಳ, ಗಾಳಿಕೆರೆ, ಹಿರೇಕೊಳಲೆ ಕೆರೆ, ಡೈಮಂಡ್ ಫಾಲ್ಸ್, ಎತ್ತಿನಭುಜ, ದೇವರಮನೆ, ರಾಣಿಝರಿ, ಬಳ್ಳಾಳರಾಯನ ದುರ್ಗ, ಕೆಮ್ಮಣ್ಣುಗುಂಡಿ, ಕಲ್ಲತ್ತಿಗರಿ, ಬಂಡಾಜೆ ಫಾಲ್ಸ್, ಕೂಡಿಗೆ ಫಾಲ್ಸ್, ಕ್ಯಾತನಮಕ್ಕಿ, ರುದ್ರಪಾದ, ತೂಗು ಸೇತುವೆ, ಅಬ್ಬುಗುಡಿಗೆ ಫಾಲ್ಸ್, ಅಯ್ಯನಕೆರೆ, ಮದಗದಕೆರೆ ಹಾಗೂ ಹೆಬ್ಬೆ ಜಲಪಾತಕ್ಕೆ ಡಿಸೆಂಬರ್ 31 ರಂದು ಮಧ್ಯಾಹ್ನ 2 ಗಂಟೆಯಿಂದ ಜನವರಿ 1 ರ ಬೆಳಗ್ಗೆ 10 ಗಂಟೆಯವರೆಗೂ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.

ಜಿಲ್ಲಾ ಆಸ್ಪತ್ರೆಗಳಲ್ಲಿ ತುರ್ತುಚಿಕಿತ್ಸೆ ಒದಗಿಸಲು ಸೂಚನೆ: ಹೊಸ ವರ್ಷಾಚರಣೆಗೆ ದಿನಗಣನೆ ಶುರುವಾಗಿದ್ದು, ರಾಜ್ಯದ ವಿವಿಧ ಸ್ಥಳಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮತ್ತು ಸಾರ್ವಜನಿಕರು ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ಅಸ್ವಸ್ಥಗೊಳ್ಳುವ ಸಾಧ್ಯತೆ ಇದೆ. ಜಿಲ್ಲಾ ಮಟ್ಟದ ಎಲ್ಲಾ ಆಸ್ಪತ್ರೆಗಳಲ್ಲಿ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಚಿಕಿತ್ಸಾ ಕೊಠಡಿಗಳನ್ನು ಕಾಯ್ದಿರಿಸಬೇಕು. ಆಂಬ್ಯಲೆನ್ಸ್ ವಾಹನ ಸೌಲಭ್ಯ ಮತ್ತು ಅಗತ್ಯ ಔಷಧಗಳು ಲಭ್ಯವಿರುವಂತೆ ವ್ಯವಸ್ಥೆಗೊಳಿಸಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

Previous articleಪುಟಿನ್ ನಿವಾಸದ ಮೇಲೆ ಉಕ್ರೇನ್ ದಾಳಿ – ಪ್ರಧಾನಿ ಮೋದಿ ಕಳವಳ