ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಮೋಹನ ಲಿಂಬಿಕಾಯಿ ಅಂತಿಮ
ಅಖಿಲ ಭಾರತ ಕಾಂಗ್ರೆಸ್ ಸಮಿತಿ (AICC)ಯು ನವೆಂಬರ್ 2026ರಲ್ಲಿ ನಡೆಯಲಿರುವ ಕರ್ನಾಟಕ ವಿಧಾನ ಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ, ಬಿಜೆಪಿಗಿಂತ ಮುಂಚಿತವಾಗಿಯೇ ರಾಜ್ಯದ ನಾಲ್ಕು ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಅಧಿಕೃತವಾಗಿ ಘೋಷಿಸಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅನುಮೋದನೆಯೊಂದಿಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ ಅವರು ಇಂದು ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ್ದಾರೆ.
ಈ ಪಟ್ಟಿ ಪ್ರಕಾರ, ಹಾವೇರಿ, ಗದಗ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನೊಳಗೊಂಡ ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಮಾಜಿ ವಿಧಾನ ಪರಿಷತ್ ಸದಸ್ಯರಾದ ಮೋಹನ ಲಿಂಬಿಕಾಯಿ ಅವರನ್ನು ಅಭ್ಯರ್ಥಿಯಾಗಿ ಅಂತಿಮಗೊಳಿಸಲಾಗಿದೆ. ಅನುಭವ ಹೊಂದಿರುವ ನಾಯಕನಿಗೆ ಟಿಕೆಟ್ ನೀಡುವ ಮೂಲಕ, ಈ ಕ್ಷೇತ್ರದಲ್ಲಿ ಕಾಂಗ್ರೆಸ್ ತನ್ನ ಸಂಘಟನಾ ಬಲವನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶ ಹೊಂದಿದೆ.
ಇದನ್ನೂ ಓದಿ: ಹುಬ್ಬಳ್ಳಿಯ KMC-RI ಆಸ್ಪತ್ರೆ ಮೇಲೆ ಲೋಕಾಯುಕ್ತ ದಾಳಿ
ಪಶ್ಚಿಮ ಪದವೀಧರ ಕ್ಷೇತ್ರಕ್ಕೆ– ಮೋಹನ ಲಿಂಬಿಕಾಯಿ
ದಕ್ಷಿಣ ಪೂರ್ವ ಪದವೀಧರ ಕ್ಷೇತ್ರಕ್ಕೆ – ಶಶಿ ಹುಲಿಕಂತೆಮಠ,
ಈಶಾನ್ಯ ಶಿಕ್ಷಕರ ಕ್ಷೇತ್ರಕ್ಕೆ – ಶರಣಪ್ಪ ಮಟ್ಟೂರ,
ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ – ಮಾಜಿ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಲಾಗಿದೆ.
ವಿಧಾನ ಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ಅಭ್ಯರ್ಥಿಗಳನ್ನು ಮುಂಚಿತವಾಗಿಯೇ ಘೋಷಿಸುವ ಮೂಲಕ, ಕಾಂಗ್ರೆಸ್ ಪಕ್ಷವು ಸಂಘಟನೆ ಬಲಪಡಿಸುವುದು, ಪದವೀಧರರು ಹಾಗೂ ಶಿಕ್ಷಕರಲ್ಲಿ ಸ್ಪಷ್ಟ ಸಂದೇಶ ನೀಡುವುದು ಎಂಬ ರಾಜಕೀಯ ತಂತ್ರವನ್ನು ಅನುಸರಿಸುತ್ತಿದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ. ಈ ಕ್ರಮದಿಂದಾಗಿ ಕ್ಷೇತ್ರ ಮಟ್ಟದಲ್ಲಿ ಪ್ರಚಾರ ಕಾರ್ಯವನ್ನು ಬೇಗನೆ ಆರಂಭಿಸಲು ಅನುಕೂಲವಾಗಲಿದೆ.
ಇದನ್ನೂ ಓದಿ: ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿ ಖಲೀದಾ ಜಿಯಾ ನಿಧನ
ಕಾಂಗ್ರೆಸ್ ಪಕ್ಷದ ಈ ಘೋಷಣೆಯಿಂದ ರಾಜ್ಯ ರಾಜಕಾರಣದಲ್ಲಿ ಚುನಾವಣಾ ಚಟುವಟಿಕೆಗಳು ಮತ್ತಷ್ಟು ಚುರುಕುಗೊಳ್ಳುವ ಸಾಧ್ಯತೆ ಇದ್ದು, ಬಿಜೆಪಿ ಸೇರಿದಂತೆ ಇತರೆ ಪಕ್ಷಗಳ ಪ್ರತಿಕ್ರಿಯೆ ಮೇಲೆ ಎಲ್ಲರ ಗಮನ ನೆಟ್ಟಿದೆ.























