ಹುಬ್ಬಳ್ಳಿ ನಗರದ ಕೆಎಂಸಿಆರ್‌ಐ (KMC-RI) ಆಸ್ಪತ್ರೆ ಮೇಲೆ ಲೋಕಾಯುಕ್ತ ಪೊಲೀಸರು ಮಂಗಳವಾರ ದಾಳಿ ನಡೆಸಿ ವ್ಯಾಪಕವಾಗಿ ಪರಿಶೀಲನೆ ಕೈಗೊಂಡಿದ್ದಾರೆ. ಆಸ್ಪತ್ರೆಯಲ್ಲಿ ರೋಗಿಗಳಿಗೆ ಅಗತ್ಯವಾದ ಔಷಧಿಗಳನ್ನು ಹೊರಗಿನ ಮೆಡಿಕಲ್‌ಗಳಲ್ಲಿ ಬರೆಯಿಸಿ ಕೊಡಲಾಗುತ್ತಿದೆ ಎಂಬ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ.
ಇತ್ತೀಚೆಗೆ ಇಂಜಕ್ಷನ್‌ಗಾಗಿ ವ್ಯಕ್ತಿಯೋರ್ವ ಪರದಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ವಿಡಿಯೋ ಮತ್ತು ದೂರುಗಳನ್ನು ಆಧರಿಸಿ ಉಪ ಲೋಕಾಯುಕ್ತ ನ್ಯಾಯಮೂರ್ತಿ ಫಣೀಂದ್ರ ಅವರು ಸ್ವಯಂಪ್ರೇರಿತವಾಗಿ (ಸುವೋ ಮೋಟೋ) ದೂರು ದಾಖಲಿಸಿ ತನಿಖೆಗೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿ: ಸಾರಿಗೆ ಬಸ್–ದ್ವಿಚಕ್ರ ವಾಹನ ಭೀಕರ ಅಪಘಾತ ತಂದೆ–ಮಗು ಸ್ಥಳದಲ್ಲೇ ಸಾವು, ಮತ್ತೊಂದು ಮಗು ಗಂಭೀರ
ಅದರಂತೆ, ಧಾರವಾಡ ಲೋಕಾಯುಕ್ತ ಎಸ್‌ಪಿ ಸಿದ್ದಲಿಂಗಪ್ಪ ಎಸ್.ಟಿ. ಅವರ ನೇತೃತ್ವದಲ್ಲಿ ದಾಳಿ ಕಾರ್ಯಾಚರಣೆ ಆರಂಭವಾಗಿದ್ದು, ಬೆಳಗಾವಿ, ಧಾರವಾಡ, ಗದಗ ಜಿಲ್ಲೆಗಳಿಂದ ಒಟ್ಟು 12 ತಂಡಗಳನ್ನು ರಚಿಸಿ ಆಸ್ಪತ್ರೆಯ ವಿವಿಧ ವಿಭಾಗಗಳಲ್ಲಿ ಏಕಕಾಲಕ್ಕೆ ಪರಿಶೀಲನೆ ನಡೆಸಲಾಗುತ್ತಿದೆ.
ಯಾವೆಲ್ಲ ಅಂಶಗಳ ಪರಿಶೀಲನೆ?: ಆಸ್ಪತ್ರೆಯ ಔಷಧ ವಿತರಣೆ ವ್ಯವಸ್ಥೆ. ಸ್ಟಾಕ್ ರಿಜಿಸ್ಟರ್, ಖರೀದಿ ದಾಖಲೆಗಳು, ಬಿಲ್‌ಗಳು. ರೋಗಿಗಳಿಗೆ ಹೊರಗಿನ ಮೆಡಿಕಲ್‌ಗಳಲ್ಲಿ ಔಷಧಿ ಬರೆಯಿಸುವ ಬಗ್ಗೆ ಆಂತರಿಕ ಸೂಚನೆಗಳಿದ್ದವೆಯೇ ಎಂಬುದು. ಇಂಜಕ್ಷನ್, ತುರ್ತು ಔಷಧಿ ಲಭ್ಯತೆ. ರೋಗಿಗಳಿಂದ ಬಂದಿರುವ ಸಾರ್ವಜನಿಕ ದೂರುಗಳ ದಾಖಲೆಗಳ ಪರಿಶೀಲನೆ ನಡೆದಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಹಗರಿಬೊಮ್ಮನಹಳ್ಳಿ: BDCC ಮೇಲ್ವಿಚಾರಕನ ಮನೆ ಮೇಲೆ ಲೋಕಾ ದಾಳಿ
ಲೋಕಾಯುಕ್ತ ಅಧಿಕಾರಿಗಳು ಪ್ರತಿಯೊಂದು ವಿಭಾಗವನ್ನು ಸುದೀರ್ಘವಾಗಿ ತಪಾಸಣೆ ನಡೆಸುತ್ತಿದ್ದು, ಪ್ರಾಥಮಿಕ ವರದಿ ಸಲ್ಲಿಸುವಂತೆ ಮೇಲಧಿಕಾರಿಗಳು ಸೂಚನೆ ನೀಡಿದ್ದಾರೆ. ಪರಿಶೀಲನೆ ಪೂರ್ಣಗೊಂಡ ನಂತರ, ವರದಿಯ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿದುಬಂದಿದೆ.
ಸಾರ್ವಜನಿಕ ಆಸ್ಪತ್ರೆಯಲ್ಲಿ ಈ ರೀತಿಯ ಅಕ್ರಮಗಳು ನಡೆದಿರುವುದಾದರೆ, ಕಠಿಣ ಕ್ರಮ ಅನಿವಾರ್ಯ ಎಂಬ ಮಾತುಗಳು ಕೇಳಿಬರುತ್ತಿದ್ದು, ದಾಳಿಯ ಫಲಿತಾಂಶದ ಮೇಲೆ ಸಾರ್ವಜನಿಕರ ದೃಷ್ಟಿ ನೆಟ್ಟಿದೆ.






















