ತಂದೆ–ಮಗು ಸ್ಥಳದಲ್ಲೇ ಸಾವು, ಮತ್ತೊಂದು ಮಗು ಗಂಭೀರ
ಹುಬ್ಬಳ್ಳಿ: ಕಾರವಾರದಿಂದ ಹುಬ್ಬಳ್ಳಿಯತ್ತ ಸಾಗುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಬಸ್ಸೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ, ತಂದೆ ಮತ್ತು ಒಂದು ಮಗು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಹುಬ್ಬಳ್ಳಿ ತಾಲೂಕಿನ ಅಂಚಟಗೇರಿ ಗ್ರಾಮದ ಬಳಿ ನಡೆದಿದೆ. ಅಪಘಾತದಲ್ಲಿ ಇನ್ನೊಂದು ಮಗು ಗಂಭೀರವಾಗಿ ಗಾಯಗೊಂಡಿದ್ದು, ಸಾವು–ಬದುಕಿನ ನಡುವೆ ಹೋರಾಟ ನಡೆಸುತ್ತಿದೆ.
ತಡಸದ ಮೆಹಬೂಬ ಖಾನ್ ಉಸ್ತಾದಿ(36), ಅಸ್ನೇನ್(2) ಮೃತಪಟ್ಟಿದ್ದು, ಅಜೀಜಾ ನಾಲ್ಕು ವರ್ಷದ ಹೆಣ್ಣು ಮಗು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರು ತಮ್ಮ ಇಬ್ಬರು ಮಕ್ಕಳೊಂದಿಗೆ ದ್ವಿಚಕ್ರ ವಾಹನದಲ್ಲಿ ತಡಸದ ಕಡೆಗೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಬಸ್‌ನ ವೇಗ ಮತ್ತು ಡಿಕ್ಕಿಯ ತೀವ್ರತೆಗೆ ದ್ವಿಚಕ್ರ ವಾಹನ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಅಪಘಾತದ ದೃಶ್ಯ ಕಂಡ ಸ್ಥಳೀಯರು ತಕ್ಷಣ ಧಾವಿಸಿ ಗಾಯಾಳು ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಲು ಸಹಕರಿಸಿದ್ದಾರೆ.
ಇದನ್ನೂ ಓದಿ: ಹಗರಿಬೊಮ್ಮನಹಳ್ಳಿ: BDCC ಮೇಲ್ವಿಚಾರಕನ ಮನೆ ಮೇಲೆ ಲೋಕಾ ದಾಳಿ
ಸ್ಥಳಕ್ಕೆ ಪೊಲೀಸರು ಭೇಟಿ: ಘಟನೆಯ ಮಾಹಿತಿ ದೊರಕುತ್ತಿದ್ದಂತೆ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ಕಾರಣವಾದ ಅಂಶಗಳ ಕುರಿತು ತನಿಖೆ ಆರಂಭಿಸಲಾಗಿದ್ದು, ಬಸ್ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಸಾರ್ವಜನಿಕರಲ್ಲಿ ಆತಂಕ: ಈ ಮಾರ್ಗದಲ್ಲಿ ಸಾರಿಗೆ ಬಸ್‌ಗಳು ಹಾಗೂ ಭಾರೀ ವಾಹನಗಳ ಸಂಚಾರ ಹೆಚ್ಚಿರುವುದರಿಂದ, ರಸ್ತೆ ಸುರಕ್ಷತೆ ಕುರಿತು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಅಪಘಾತಗಳ ತಡೆಗೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಅಪಘಾತಕ್ಕೆ ಸಂಬಂಧಿಸಿದಂತೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.






















