ವಿಜಯಪುರ: ಭೂಮಿ ಗಂಧವತಿ, ಪ್ರೀತಿ-ಸ್ನೇಹ ಪಾಪ-ಪುಣ್ಯಗಳನ್ನು ಒಳಗೊಂಡವಳು. ಆಕಾಶ ನಿರ್ಲೇಪವಾದದ್ದು. ಯಾವುದಕ್ಕೂ, ಯಾರಿಗೂ ಎಲ್ಲಿಯೂ ಅಂಟಿಕೊಂಡಿಲ್ಲ. ಇಂತಹ ಭೂಮಿಯ ಗಂಧ, ಆಕಾಶದ ನಿರ್ಲೇಪವನ್ನು ಅರಿತವರು ಸಿದ್ಧೇಶ್ವರ ಸ್ವಾಮೀಜಿಗಳು ಎಂದು ಲೋಕ ಶಿಕ್ಷಣ ಟ್ರಸ್ಟ್ ಧರ್ಮದರ್ಶಿಗಳಾದ ಡಾ. ಗುರುರಾಜ ಕರಜಗಿ ಹೇಳಿದರು.
ನಗರದ ಜ್ಞಾನಯೋಗಾಶ್ರಮದಲ್ಲಿ ನಡೆಯುತ್ತಿರುವ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ೩ನೇ ವರ್ಷದ ಗುರುನಮನ ಮಹೋತ್ಸವ ಉದ್ಘಾಟಿಸಿ ಮಾತನಾಡಿದರು. ಯಾರು ಜೀವನದಲ್ಲಿ ಭೂಮಿಯ ಗಂಧ ಹಾಗೂ ಆಕಾಶದ ನಿರ್ಲೇಪವನ್ನು ಮೈಗೂಡಿಸಿಕೊಳ್ಳುತ್ತಾರೋ ಅವರು ದೇವ ಮಾನವರಾಗುತ್ತಾರೆ. ಶ್ರೀ ಸಿದ್ಧೇಶ್ವರ ಅಪ್ಪಗಳು ಜ್ಞಾನಯೋಗಾಶ್ರಮದ ಚೈತನ್ಯ ಸ್ವರೂಪಿಗಳಾಗಿದ್ದರು. ಯಾರು ಸ್ವಂತಕ್ಕಾಗಿ ಬದುಕುತ್ತಾರೋ ಅವರನ್ನು ಜಗತ್ತು ಬಹಳ ಬೇಗ ಮರೆಯುತ್ತದೆ, ಯಾರು ಇತರರಿಗಾಗಿ ಬದುಕುತ್ತಾರೋ ಅವರನ್ನು ಜಗತ್ತು ಎಂದಿಗೂ ಮರೆಯುವುದಿಲ್ಲ. ಹಾಗೆ ಸಿದ್ಧೇಶ್ವರ ಸ್ವಾಮೀಜಿಗಳು ಜಗತ್ತಿಗೆ ಜ್ಞಾನ ದಾಹ ತೀರಿಸಲು ಬದುಕಿದವರು, ಅವರ ಜನಮಾನಸದಲ್ಲಿ ಶಾಶ್ವತ ಉಳಿಯುತ್ತಾರೆ ಎಂದರು.
ಲೋಕ ಶಿಕ್ಷಣ ಟ್ರಸ್ಟ್ ಧರ್ಮದರ್ಶಿಗಳಾದ ಡಿ.ಆರ್. ಪಾಟೀಲ ಮಾತನಾಡಿ, 1994 ರಲ್ಲಿ ನನಗೆ ಸಿದ್ಧೇಶ್ವರ ಸ್ವಾಮೀಜಿಗಳ ಮೊದಲ ದರ್ಶನವಾಯಿತು. ಅಂದು ಶ್ರೀಗಳು ಕೃಷಿ ಬಗ್ಗೆ ಅಪಾರ ಜ್ಞಾನ ನೀಡಿದರು. ಅಂದಿನಿಂದ ನನ್ನ ಬದುಕಿನಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಂಡುಕೊಂಡೆ, ಇವತ್ತಿಗೂ ಶ್ರೀಗಳ ನನ್ನೊಂದಿಗೆ ಇದ್ದಾರೆ. ನಾನು ಕಷ್ಟದ ಸಮಯದಲ್ಲಿ ಅವರನ್ನು ನೆನೆದರೆ ಸಾಕು ಎಲ್ಲವನ್ನು ಪರಿಹರಿಸುತ್ತಾರೆ ಎಂದರು.
ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಗಳು ಮಾತನಾಡಿ, ಸರಳ ಜೀವನ ನಡೆಸಿದ ಶ್ರೀ ಸಿದ್ಧೇಶ್ವರ ಅಪ್ಪಗಳಿಗೆ ಸಮನಾದ ಇನ್ನೊಬ್ಬ ಸಂತ ಯಾರಾದರೂ ಇದ್ದರೆ ಅದು ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ಮಾತ್ರ ಎಂದರು.
ಈ ಸಂದರ್ಭದಲ್ಲಿ ಜ್ಞಾನಯೋಗಾಶ್ರಮದ ಅಧ್ಯಕ್ಷ ಗುರುಗಳಾದ ಬಸವಲಿಂಗ ಸ್ವಾಮೀಜಿ, ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರ ಸಾಹುಕಾರ, ತುಮಕೂರಿನ ವೀರೇಶಾನಂದ ಸರಸ್ವತಿ ಸ್ವಾಮೀಜಿ, ಪಂಡರಪುರದ ಬ್ರಹ್ಮ ಚೈತನ್ಯ ಸದ್ಗುರು ಹ.ಭ.ಪ. ಹೃಷಿಕೇಶಿ ವಿಠ್ಠಲ ವಾಸ್ಕರ ಮಹಾರಾಜರು, ಆಶ್ರಮ ಸ್ವಾಮೀಜಿಗಳು, ಸಾವಿರಾರು ಭಕ್ತರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.























