ದಾವಣಗೆರೆ(ಚಳ್ಳಕೆರೆ): ರಾಜ್ಯಾದ್ಯಂತ ಹಾಗೂ ಸ್ಥಳೀಯವಾಗಿ ಇತ್ತೀಚಿನ ದಿನಗಳಲ್ಲಿ ಚಿನ್ನದ ಅಂಗಡಿಗಳಲ್ಲಿ ಕಳ್ಳತನ ಮತ್ತು ದರೋಡೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಳ್ಳಬೇಕಾದ ಅಗತ್ಯವಿದ್ದು, ಪಟ್ಟಣದ ಜ್ಯುವೇಲರಿ ಮಳಿಗೆಗಳಲ್ಲಿ ಕಡ್ಡಾಯವಾಗಿ ಹೈಟೆಕ್ ಭದ್ರತಾ ವ್ಯವಸ್ಥೆ ಅಳವಡಿಸಿಕೊಳ್ಳುವಂತೆ ನಗರ ಠಾಣೆಯ ಇನ್ಸ್‌ಪೆಕ್ಟರ್ ಕೆ. ಕುಮಾರ್ ವರ್ತಕರಿಗೆ ಸೂಚನೆ ನೀಡಿದ್ದಾರೆ.
ಚಳ್ಳಕೆರೆಯ ನಗರ ಪೊಲೀಸ್ ಠಾಣಾ ಆವರಣದಲ್ಲಿ ಜ್ಯುವೇಲರಿ ಶಾಪ್ ಮಾಲೀಕರು, ವರ್ತಕರು ಮತ್ತು ತಯಾರಕರಿಗಾಗಿ ಹಮ್ಮಿಕೊಂಡಿದ್ದ ಮಹತ್ವದ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.
ಸಾರ್ವಜನಿಕ ಸುರಕ್ಷತಾ ಕಾಯಿದೆ ಅಡಿಯಲ್ಲಿ ಪ್ರತಿಯೊಂದು ಜ್ಯುವೇಲರಿ ಮಳಿಗೆಯಲ್ಲೂ ಉತ್ತಮ ಗುಣಮಟ್ಟದ ಹಾಗೂ ಮಳಿಗೆಯ ಮೂಲೆಮೂಲೆಯನ್ನು (360 ಡಿಗ್ರಿ ಸುತ್ತಳತೆ) ಸೆರೆಹಿಡಿಯಬಲ್ಲ ಅತ್ಯಾಧುನಿಕ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಕೇವಲ ಕ್ಯಾಮೆರಾ ಅಳವಡಿಸಿದರೆ ಸಾಲದು, ಅವುಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ವರ್ತಕರು ನಿಯಮಿತವಾಗಿ ಪರಿಶೀಲಿಸಬೇಕು ಎಂದು ತಿಳಿಸಿದರು.
ಇದನ್ನೂ ಓದಿ: ಕೋಗಿಲು ಲೇಔಟ್‌ಗೆ ಡಿ.ಕೆ.ಶಿ ಬೇಟಿ: ಅಕ್ರಮ ಪರಭಾರೆ ಮಾಡಿದವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ
ಮಳಿಗೆಯ ಭದ್ರತೆಯ ದೃಷ್ಟಿಯಿಂದ ಸಿಸಿ ಕ್ಯಾಮೆರಾಗಳ ಜೊತೆಗೆ ಕಳ್ಳರು ನುಗ್ಗಿದಾಗ ಎಚ್ಚರಿಸುವ ‘ಸೈರನ್’ ವ್ಯವಸ್ಥೆಯನ್ನು ಕಡ್ಡಾಯವಾಗಿ ಅಳವಡಿಸಬೇಕು. ಮೌಲ್ಯಯುತ ಆಭರಣಗಳನ್ನು ಪ್ರದರ್ಶಿಸುವ ಗಾಜಿನ ಶೋಕೇಸ್‌ಗಳಿಗೆ ಸುರಕ್ಷತಾ ಲಾಕ್‌ಗಳು ಮತ್ತು ಅಲಾರ್ಮ್ ವ್ಯವಸ್ಥೆ ಇರಬೇಕು. ರಾತ್ರಿ ಸಮಯದಲ್ಲಿ ಅಂಗಡಿಯನ್ನು ಬಂದ್ ಮಾಡುವಾಗ ಬಲವಾದ ಲಾಕಿಂಗ್ ವ್ಯವಸ್ಥೆಯನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದರು.
ಕೇವಲ ತಾಂತ್ರಿಕ ಉಪಕರಣಗಳನ್ನಷ್ಟೇ ನಂಬದೇ, ಮಳಿಗೆಗಳ ಸುರಕ್ಷತೆಗೆ ಸಮರ್ಥರಾದ ಸೆಕ್ಯೂರಿಟಿ ಗಾರ್ಡ್‌ಗಳನ್ನು ನೇಮಿಸಿಕೊಳ್ಳುವಂತೆ ಮಾಲೀಕರಿಗೆ ಸಲಹೆ ನೀಡಲಾಯಿತು. ಪೊಲೀಸ್ ಇಲಾಖೆಯ ವತಿಯಿಂದ ಈಗಾಗಲೇ ರಾತ್ರಿ ವೇಳೆ ಗಸ್ತು ವ್ಯವಸ್ಥೆಯನ್ನು ಚುರುಕುಗೊಳಿಸಲಾಗಿದೆ. ಆದರೆ, ಕಳ್ಳತನಗಳನ್ನು ಸಂಪೂರ್ಣವಾಗಿ ತಡೆಗಟ್ಟಲು ಮಾಲೀಕರು ತಮ್ಮ ಅಂಗಡಿಗಳಿಗೆ ಸೂಕ್ತ ಭದ್ರತೆ ಒದಗಿಸಿಕೊಂಡು ಇಲಾಖೆಯೊಂದಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.























