ಅವೈಜ್ಞಾನಿಕ ಆದೇಶ ಹಿಂಪಡೆಯದಿದ್ದರೆ ಉಗ್ರ ಹೋರಾಟ: ಸಂಘಟನೆಗಳ ಎಚ್ಚರಿಕೆ
ಚಳ್ಳಕೆರೆ: ಪಟ್ಟಣದ ಧರಣಿ ಮತ್ತು ಸತ್ಯಾಗ್ರಹಗಳಿಗೆ ನಿಗದಿಪಡಿಸಲಾಗಿದ್ದ ಸ್ಥಳವನ್ನು ಏಕಾಏಕಿ ಬದಲಿಸಿ, ಜನಸಂಚಾರವಿಲ್ಲದ ಬನ್ನಿಮಂಟಪದ ಸಮೀಪ ಸ್ಥಳಾಂತರಿಸಿರುವ ತಾಲೂಕು ಆಡಳಿತದ ಕ್ರಮವನ್ನು ಖಂಡಿಸಿ, ತಾಲೂಕಿನ ವಿವಿಧ ಸಂಘಟನೆಗಳ ಒಕ್ಕೂಟ ಸೋಮವಾರ ತಾಲೂಕು ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿತು.
ರೈತ ಸಂಘ, ದಲಿತ ಸಂಘರ್ಷ ಸಮಿತಿ, ಕನ್ನಡ ಪರ ಸಂಘಟನೆಗಳು ಹಾಗೂ ಸಿಐಟಿಯು ನೇತೃತ್ವದಲ್ಲಿ ತಾಲೂಕು ಕಚೇರಿ ಆವರಣದಲ್ಲಿ ನೂರಾರು ಕಾರ್ಯಕರ್ತರು ಜಮಾಯಿಸಿ, ಆಡಳಿತ ವರ್ಗದ ವಿರುದ್ಧ ‘ಧಿಕ್ಕಾರ ಧಿಕ್ಕಾರ’, ‘ಏನೇ ಬರಲಿ ಒಗ್ಗಟ್ಟಿರಲಿ’ ಎಂಬ ಘೋಷಣೆಗಳನ್ನು ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಚೆಕ್ ಬೌನ್ಸ್ ಪ್ರಕರಣ: ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ FIR
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ, “ಸರ್ಕಾರಕ್ಕೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದಂತೆ ತಾಲೂಕು ಆಡಳಿತ ವರ್ತಿಸುತ್ತಿದೆ. ತಾಲೂಕಿನಲ್ಲಿರುವ 56ಕ್ಕೂ ಹೆಚ್ಚು ಸಂಘಟನೆಗಳೊಂದಿಗೆ ಯಾವುದೇ ಚರ್ಚೆ ನಡೆಸದೇ ಏಕಾಏಕಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಕೋಟ್ಯಂತರ ರೂಪಾಯಿ ಸಾರ್ವಜನಿಕ ತೆರಿಗೆ ಹಣದಲ್ಲಿ ನಿರ್ಮಾಣವಾದ ತಾಲೂಕು ಕಚೇರಿ ಜನರದ್ದೇ ಹೊರತು ಅಧಿಕಾರಿಗಳದ್ದಲ್ಲ. ಅಧಿಕಾರಿಗಳು ಸೇವಕರು ಮಾತ್ರ, ಶಾಶ್ವತ ಯಜಮಾನರಲ್ಲ” ಎಂದು ಕಿಡಿಕಾರಿದರು.
ಜನಸಂಚಾರವೇ ಇಲ್ಲದ, ನಿರ್ಜನ ಪ್ರದೇಶದಲ್ಲಿ ಹೋರಾಟ ಮಾಡಲು ಸೂಚಿಸುವ ಮೂಲಕ ಪ್ರಜಾಪ್ರಭುತ್ವದ ಹಕ್ಕುಗಳನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.
ಕೆಆರ್‌ಎಸ್ ಪಕ್ಷದ ಎಸ್ಸಿ/ಎಸ್ಟಿ ಘಟಕದ ರಾಜ್ಯ ಕಾರ್ಯದರ್ಶಿ ಮಾರುತಿ ಮಾತನಾಡಿ, “ನಾವು ಜನರ ಸಮಸ್ಯೆಗಳೊಂದಿಗೆ ನ್ಯಾಯ ಕೇಳಲು ಬರುತ್ತೇವೆ. ಆದರೆ ಅಧಿಕಾರಿಗಳು ಸ್ಮಶಾನದ ಪಕ್ಕದಲ್ಲಿರುವ ಬನ್ನಿಮಂಟಪದ ಬಳಿ ಹೋಗಿ ಹೋರಾಟ ಮಾಡಿ ಎನ್ನುತ್ತಿದ್ದಾರೆ. ಅಲ್ಲಿ ಹೋರಾಟ ಮಾಡಿದರೆ ಅದು ಯಾರಿಗೆ ಕೇಳಿಸುತ್ತದೆ? ಸತ್ತವರಿಗಾ ಅಥವಾ ಜೀವಂತ ಜನರಿಗಾ? ಸಾರ್ವಜನಿಕ ಸಭೆ ನಡೆಸದೇ ತೆಗೆದುಕೊಂಡ ಈ ನಿರ್ಧಾರ ಸಂಪೂರ್ಣ ಪ್ರಜಾಪ್ರಭುತ್ವ ವಿರೋಧಿ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಕೌಟುಂಬಿಕ ಕಲಹ: ಕಲಬುರಗಿಯಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ
ಬಿಜೆಪಿ ಮುಖಂಡ ಪಾಟೀಲ್ ಕೃಷ್ಣೇಗೌಡ ಮಾತನಾಡಿ, “ಪಾದಚಾರಿಗಳಿಗೆ ತೊಂದರೆಯಾಗುತ್ತದೆ ಎಂಬ ನೆಪ ಹೇಳುವ ಅಧಿಕಾರಿಗಳಿಗೆ, ತಮ್ಮ ಕಚೇರಿ ಮುಂಭಾಗದಲ್ಲೇ ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡು ಅಂಗಡಿಗಳನ್ನು ಇಟ್ಟಿರುವುದು ಕಾಣಿಸುತ್ತಿಲ್ಲವೇ? ಹೋರಾಟಗಾರರಿಂದ ತೊಂದರೆ ಎಂದು ಹೇಳುವವರು ಮೊದಲು ತಮ್ಮ ಕಚೇರಿ ಮುಂದಿನ ಅವ್ಯವಸ್ಥೆಯನ್ನು ಸರಿಪಡಿಸಲಿ. ಸ್ವಾತಂತ್ರ್ಯ ಬಂದ ಇಷ್ಟೊಂದು ವರ್ಷಗಳಲ್ಲಿ ಇಲ್ಲಿನ ಯಾವುದೇ ಪ್ರತಿಭಟನೆಗಳಿಂದ ಸಾರ್ವಜನಿಕ ಆಸ್ತಿ ಹಾನಿಯಾಗಿಲ್ಲ. ಹೀಗಿದ್ದರೂ ಏಕಪಕ್ಷೀಯ ಆದೇಶ ಸರಿಯಲ್ಲ” ಎಂದು ಎಚ್ಚರಿಸಿದರು.
ತಾಲೂಕು ದಂಡಾಧಿಕಾರಿಗಳು ಕೂಡಲೇ ಈ ಅವೈಜ್ಞಾನಿಕ ಆದೇಶವನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯನವರೇ ಬಜೆಟ್ ಮಂಡಿಸಲಿದ್ದಾರೆ
ಈ ಪ್ರತಿಭಟನೆಯಲ್ಲಿ ಕೆಆರ್‌ಎಸ್ ಪಕ್ಷದ ರಾಜ್ಯ ಕಾರ್ಯನಿರ್ವಾಹಕ ಸಮಿತಿ ಸದಸ್ಯ ಮಹೇಶ್ ಸಿ. ನಗರಂಗೆರೆ, ಸಾಮಾಜಿಕ ಹೋರಾಟಗಾರ ಮುರಳಿ, ರೈತ ಸಂಘದ ತಾಲೂಕು ಅಧ್ಯಕ್ಷ ರಾಜಣ್ಣ, ಶ್ರೀಕಂಠಮೂರ್ತಿ, ಚನ್ನಕೇಶವ, ತಿಪ್ಪೇಸ್ವಾಮಿ, ಸಿಐಟಿಯು ಅಧ್ಯಕ್ಷ ನಿಂಗಣ್ಣ, ಪ್ರಧಾನ ಕಾರ್ಯದರ್ಶಿ ತಿಪ್ಪೇಸ್ವಾಮಿ, ಕರವೇ ಅಧ್ಯಕ್ಷ ಮಂಜುನಾಥ್, ಚಂದ್ರಣ್ಣ, ಬಿಎಸ್‌ಪಿ ಜಿಲ್ಲಾಧ್ಯಕ್ಷ ಪ್ರಕಾಶ್, ಕರವೇ ರವಿಕುಮಾರ್ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.









