ರಾಜ್ಯ ಮಟ್ಟದ ವೈಜ್ಞಾನಿಕ ಸಮ್ಮೇಳನ: ವಿಜ್ಞಾನ ಮುಂದುವರೆದರೂ, ಮೌಢ್ಯಗಳು ಜೀವಂತ ಇವೆ: ಸಚಿವ ದರ್ಶನಾಪುರ
ಯಾದಗಿರಿ: ಆಧುನಿಕ ಜಗತ್ತು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಅಪಾರ ಪ್ರಗತಿ ಸಾಧಿಸಿದರೂ, ಸಮಾಜದಲ್ಲಿ ಮೂಢನಂಬಿಕೆಗಳು ಇನ್ನೂ ಜೀವಂತವಾಗಿರುವುದು ವಿಷಾದಕರ ಸಂಗತಿ ಎಂದು ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಆಯೋಜಿಸಿದ್ದ ರಾಜ್ಯಮಟ್ಟದ 5ನೇ ವೈಜ್ಞಾನಿಕ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, “ನಮ್ಮಲ್ಲಿ ಗುಡಿ–ಗುಂಡಾರಗಳ ನಿರ್ಮಾಣ ಕಡಿಮೆಯಾಗಿಲ್ಲ.
ಇದನ್ನೂ ಓದಿ: ಚೆಕ್ ಬೌನ್ಸ್ ಪ್ರಕರಣ: ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ FIR
ದೇವರ ಹೆಸರಲ್ಲಿ ಯಾರಾದರೂ ಏನಾದರೂ ಹೇಳಿದರೆ ಅದನ್ನು ಪ್ರಶ್ನಿಸದೆ ಸಾಲ ಮಾಡಿಕೊಂಡಾದರೂ ಮಾಡುತ್ತೇವೆ. ಆದರೆ ಅದೇ ಉತ್ಸಾಹವನ್ನು ಮಕ್ಕಳ ಶಿಕ್ಷಣಕ್ಕೆ ತೋರಿಸುವುದಿಲ್ಲ. ಜಗತ್ತು ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದನ್ನು ಅರಿತು, ನಾವೂ ಅದೇ ದಿಕ್ಕಿನಲ್ಲಿ ಹೆಜ್ಜೆ ಹಾಕಬೇಕು” ಎಂದು ಹೇಳಿದರು.
ಮೂಢನಂಬಿಕೆಗಳನ್ನು ದುರುಪಯೋಗಪಡಿಸಿಕೊಳ್ಳುವ ಕೆಲ ಶಕ್ತಿಗಳು ತಮ್ಮ ಸ್ವಾರ್ಥಕ್ಕಾಗಿ ಜನರನ್ನು ಭಯಪಡಿಸಿ, ವಿಶೇಷವಾಗಿ ಬಡವರಿಂದ ಅನಗತ್ಯವಾಗಿ ಹಣ ಖರ್ಚು ಮಾಡಿಸುತ್ತಿವೆ ಎಂದು ಅವರು ಆಕ್ಷೇಪಿಸಿದರು.
“ಯಾವುದೇ ದೇವರು ಮನುಷ್ಯನಿಗೆ ಕೆಟ್ಟದ್ದು ಮಾಡುವುದಿಲ್ಲ. ಮನುಷ್ಯರು ಮನುಷ್ಯರಿಗೆ ಕೆಟ್ಟದ್ದು ಮಾಡುತ್ತಾರೆ. ಎಲ್ಲ ಅಡೆತಡೆಗಳನ್ನು ಮೀರಿ ಮುಂದೆ ಸಾಗುವ ಶಕ್ತಿ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಮಾತ್ರ ಇದೆ. ಜನರನ್ನು ತಪ್ಪು ದಾರಿಯಲ್ಲಿ ಸೆಳೆಯುವ ಶಕ್ತಿಗಳನ್ನು ವಿಜ್ಞಾನ ಮತ್ತು ವೈಜ್ಞಾನಿಕ ಚಿಂತನೆಯ ಮೂಲಕ ಮಟ್ಟಹಾಕಬೇಕಿದೆ” ಎಂದು ಸಚಿವರು ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಕೌಟುಂಬಿಕ ಕಲಹ: ಕಲಬುರಗಿಯಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ
ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಹುಲಿಕಲ್ ನಟರಾಜ್ ಮಾತನಾಡಿ, “ವಿಜ್ಞಾನ ಪ್ರಸಾರದಂತಹ ಮಹತ್ವದ ಕಾರ್ಯಕ್ರಮಗಳಿಗೆ ಸರ್ಕಾರ ಬಜೆಟ್‌ನಲ್ಲಿ ಪ್ರತ್ಯೇಕ ಅನುದಾನ ಒದಗಿಸಬೇಕು” ಎಂದು ಕೋರಿದರು.
ಈ ಸಮ್ಮೇಳನದಲ್ಲಿ ಗುರುಮಠಕಲ್‌ನ ಖಾಸಾಮಠದ ಶಾಂತವೀರ ಗುರುಮುರುಘಾರಾಜೇಂದ್ರ ಸ್ವಾಮೀಜಿ, ಚಿಗರಹಳ್ಳಿಯ ಮರುಳ ಶಂಕರಪೀಠದ ಸಿದ್ಧಬಸವ ಕಬೀರಾನಂದ ಸ್ವಾಮೀಜಿ, ಮೈಸೂರಿನ ಉರಿಲಿಂಗಿ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ಸಚಿವ ಸತೀಶ ಜಾರಕಿಹೊಳಿ, ಸಮ್ಮೇಳನ ಅಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ, ವಿಜ್ಞಾನಿ ಡಾ. ಎ.ಎಸ್. ಕಿರಣ್ ಕುಮಾರ್, ಶಾಸಕರಾದ ಚನ್ನಾರೆಡ್ಡಿ ಪಾಟೀಲ ತುನ್ನೂರು, ಶರಣಗೌಡ ಕಂದಕೂರ, ರಾಜಾ ವೇಣುಗೋಪಾಲ ನಾಯಕ, ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ್, ಪರಿಷತ್ತು ಜಿಲ್ಲಾ ಅಧ್ಯಕ್ಷ ಗುಂಡಪ್ಪ ಕಲಬುರಗಿ, ಡಿಡಿಪಿಐ ಚನ್ನಬಸಪ್ಪ ಮುಧೋಳ ಸೇರಿದಂತೆ ಹಲವರು ಭಾಗವಹಿಸಿದ್ದರು.
ವೈಜ್ಞಾನಿಕ ಚಿಂತನೆ, ತರ್ಕಬದ್ಧ ಮನೋಭಾವ ಮತ್ತು ಸಮಾಜದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಆಯೋಜಿಸಲಾದ ಈ ಸಮ್ಮೇಳನಕ್ಕೆ ವಿವಿಧ ಜಿಲ್ಲೆಗಳ ವಿಜ್ಞಾನಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು.























