ಕಾರವಾರಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನೀಡುವುದು ನಮ್ಮ ಸರ್ಕಾರದ ಜವಾಬ್ದಾರಿ: ಡಿಸಿಎಂ ಡಿ.ಕೆ. ಶಿವಕುಮಾರ್

0
4

ಕಾರವಾರ: ಕಾರವಾರದ ಜನರ ಬಹುದಿನದ ಬೇಡಿಕೆಯಂತೆ ಕ್ಷೇತ್ರಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನೀಡುವುದು ನಮ್ಮ ಸರ್ಕಾರದ ಜವಾಬ್ದಾರಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.

ರವೀಂದ್ರನಾಥ ಠಾಗೋರ್ ಕಡಲತೀರದಲ್ಲಿ ಭಾನುವಾರ ರಾತ್ರಿ ನಡೆದ ಕರಾವಳಿ ಉತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾರವಾರ ಹಾಗೂ ಉತ್ತರ ಕನ್ನಡ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ಕರಾವಳಿ–ಮಲೆನಾಡು ಅಭಿವೃದ್ಧಿಗೆ ಹೊಸ ಪ್ರವಾಸೋದ್ಯಮ ನೀತಿ

ಶಾಸಕರಾದ ಸತೀಶ್ ಸೈಲ್ ಅವರ ಮನವಿಯನ್ನು ಉಲ್ಲೇಖಿಸಿದ ಡಿಸಿಎಂ, “ನಮ್ಮ ಜಿಲ್ಲೆಯ ಜನರು ಚಿಕಿತ್ಸೆಗಾಗಿ ಗೋವಾ, ಉಡುಪಿ, ಮಂಗಳೂರು ಕಡೆಗೆ ಹೋಗಬೇಕಾಗುತ್ತಿರುವ ಸ್ಥಿತಿ ಇದೆ. ಈ ಹಿನ್ನೆಲೆ ಕಾರವಾರಕ್ಕೆ ಅತ್ಯುತ್ತಮ ವೈದ್ಯಕೀಯ ಸೌಲಭ್ಯಗಳೊಂದಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಅಗತ್ಯ ಎಂದು ಶಾಸಕರು ಮನವಿ ಮಾಡಿದ್ದಾರೆ. ನಾವು ನಿಮ್ಮ ಜೊತೆಗೆ ಇದ್ದೇವೆ” ಎಂದು ಭರವಸೆ ನೀಡಿದರು.

ಐದು ಶಾಸಕರ ಶಕ್ತಿಯಿಂದ ಗ್ಯಾರಂಟಿಗಳ ಅನುಷ್ಠಾನ: ಉತ್ತರ ಕನ್ನಡ ಜಿಲ್ಲೆಯ ಜನತೆ ಐದು ಶಾಸಕರನ್ನು ಆಯ್ಕೆ ಮಾಡಿ ಸರ್ಕಾರಕ್ಕೆ ಶಕ್ತಿ ತುಂಬಿದ್ದಾರೆ. “ನೀವು ಶಕ್ತಿ ಕೊಟ್ಟ ಕಾರಣಕ್ಕೆ ಐದು ಗ್ಯಾರಂಟಿಗಳನ್ನು ನೀಡಿದ್ದೇವೆ. ನಿಮ್ಮಿಂದಲೇ ಈ ಕೈ ಗಟ್ಟಿಯಾಗಿದೆ. ನಾವು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ” ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ಇದನ್ನೂ ಓದಿ: ಅರಣ್ಯ ಭೂಮಿ ಒತ್ತುವರಿ ಮಾಡಿ ಕೃಷಿ ನಡೆಸುತ್ತಿರುವವರ ಒಕ್ಕಲೆಬ್ಬಿಸದಂತೆ ಡಿ.ಕೆ.ಶಿವಕುಮಾರ ಸೂಚನೆ

ಪ್ರವಾಸೋದ್ಯಮ ನೀತಿ, ಉದ್ಯೋಗ ಸೃಷ್ಟಿಗೆ ಒತ್ತು: ಕರಾವಳಿ ಭಾಗದ ಯುವಜನರ ವಲಸೆ ತಪ್ಪಿಸಲು ಸರ್ಕಾರ ಪ್ರತ್ಯೇಕ ಪ್ರವಾಸೋದ್ಯಮ ನೀತಿ ರೂಪಿಸಲಿದೆ ಎಂದು ಘೋಷಿಸಿದ ಅವರು, “ಉದ್ಯೋಗವನ್ನು ಮನೆ ಬಾಗಿಲಿಗೆ ತರುತ್ತೇವೆ. ಯುವಜನರಿಗೆ ಇಲ್ಲಿಯೇ ಕೆಲಸ ಸಿಗುವಂತೆ ಮಾಡುತ್ತೇವೆ. ಈ ಸಂಬಂಧ ಜನವರಿ 10ರಂದು ಮಂಗಳೂರಿನಲ್ಲಿ ಮಹತ್ವದ ಸಭೆ ನಡೆಸಲಾಗುವುದು” ಎಂದು ತಿಳಿಸಿದರು.

ಕರಾವಳಿಯ ವೈಭವಕ್ಕೆ ಡಿಸಿಎಂ ಮೆಚ್ಚುಗೆ: ಪಶ್ಚಿಮ ಘಟ್ಟ ಮತ್ತು ಸಮುದ್ರತೀರ ಹೊಂದಿರುವ ಉತ್ತರ ಕನ್ನಡ ಜಿಲ್ಲೆಯನ್ನು ವಿಶಿಷ್ಟ ಪ್ರದೇಶ ಎಂದು ಬಣ್ಣಿಸಿದ ಡಿಸಿಎಂ, “ವಿಭಿನ್ನವಾದ ಸಾಹಿತ್ಯ, ಸಂಸ್ಕೃತಿ, ಭಾಷೆ, ಆಚರಣೆ, ಪರಿಸರ ಹೊಂದಿರುವ ಅಪರೂಪದ ನಾಡಿದು. ಸಮುದ್ರ ಎಂದರೆ ಶಕ್ತಿ, ಸಂಪತ್ತು. ಮೀನುಗಾರರ ಬದುಕಿಗೆ ಆಧಾರ, ವ್ಯಾಪಾರಿಗಳಿಗೆ ನಿಧಿ, ಪ್ರವಾಸಿಗರಿಗೆ ಸ್ವರ್ಗ ಈ ಸಮುದ್ರ” ಎಂದು ಕರಾವಳಿಯ ವೈಭವವನ್ನು ಹೊಗಳಿದರು.

ಏಳು ವರ್ಷಗಳ ಬಳಿಕ ಕರಾವಳಿ ಉತ್ಸವ: “ಕಳೆದ ಏಳು ವರ್ಷಗಳಿಂದ ಕರಾವಳಿ ಉತ್ಸವ ನಡೆದಿರಲಿಲ್ಲ. ಈ ವರ್ಷ ನೀವು ಬರಲೇಬೇಕು ಎಂದು ಶಾಸಕರಾದ ಸತೀಶ್ ಸೈಲ್ ಹಾಗೂ ಜಿಲ್ಲಾ ಸಚಿವ ಮಂಕಾಳ್ ವೈದ್ಯ ಅವರು ಒತ್ತಾಯಪೂರ್ವಕವಾಗಿ ನನ್ನನ್ನು ಕರೆತಂದಿದ್ದಾರೆ” ಎಂದು ಹೇಳಿದ ಡಿಸಿಎಂ, “ದೇವರು ವರ ಅಥವಾ ಶಾಪ ಕೊಡುವುದಿಲ್ಲ, ಆದರೆ ಅವಕಾಶ ನೀಡುತ್ತಾನೆ. ಆ ಅವಕಾಶವನ್ನು ಬಳಸಿಕೊಂಡು ಸತೀಶ್ ಸೈಲ್ ಅವರು ಜಿಲ್ಲೆಯ ಕಲಾವಿದರು ಸೇರಿದಂತೆ ಅನೇಕರಿಗೆ ವೇದಿಕೆ ಕಲ್ಪಿಸಿದ್ದಾರೆ” ಎಂದರು.

ಸ್ಥಳೀಯ ಪ್ರತಿಭೆಗಳಿಗೆ ದೊಡ್ಡ ವೇದಿಕೆ: ಕರಾವಳಿ ಉತ್ಸವದಿಂದ ಸ್ಥಳೀಯ ಕಲಾವಿದರ ಪ್ರತಿಭಾ ಪ್ರದರ್ಶನಕ್ಕೆ ಮಹತ್ವದ ಅವಕಾಶ ಸಿಕ್ಕಿದೆ ಎಂದು ಹೇಳಿದ ಅವರು,“ಈ ರೀತಿ ಪ್ರೋತ್ಸಾಹ ನೀಡುವುದರಿಂದ ಯುವ ಕಲಾವಿದರ ಬೆಳವಣಿಗೆ ಸಾಧ್ಯ” ಎಂದರು.

ಟೀಕೆಗಳಿಗಿಂತ ಕೆಲಸ ಮುಖ್ಯ: ತಮ್ಮ ಅನುಭವ ಹಂಚಿಕೊಂಡ ಡಿ.ಕೆ. ಶಿವಕುಮಾರ್,“ನಾನು ಕಳೆದ 10–15 ವರ್ಷಗಳಿಂದ ನನ್ನ ಕ್ಷೇತ್ರ ಕನಕಪುರದಲ್ಲಿ ಕನಕೋತ್ಸವ ನಡೆಸಿಕೊಂಡು ಬಂದಿದ್ದೇನೆ. ಆದರೆ ಸತೀಶ್ ಸೈಲ್ ಅವರು ಅತ್ಯಂತ ಭವ್ಯವಾದ ಕಾರ್ಯಕ್ರಮ ಆಯೋಜಿಸಿರುವುದು ಸಂತೋಷ ತಂದಿದೆ” ಎಂದರು.

ಇದನ್ನೂ ಓದಿ: ಚೆಕ್ ಬೌನ್ಸ್ ಪ್ರಕರಣ: ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ FIR

ಇದೇ ವೇಳೆ ವಿರೋಧಿಗಳ ಟೀಕೆಗೆ ಪ್ರತಿಕ್ರಿಯಿಸಿದ ಅವರು, “ಮಾತನಾಡುವ ಬಾಯಿಗಿಂತ ಕೆಲಸ ಮಾಡುವ ಕೈಗಳು ಮುಖ್ಯ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ. ನಾನು ಕೇವಲ ಭಾಷಣ ಮಾಡಲು ಇಲ್ಲಿಗೆ ಬಂದಿಲ್ಲ. ಕಾರವಾರದ ಜನತೆಯ ಜೊತೆ ಇದ್ದೇನೆ ಎಂದು ಹೇಳಲು ಬಂದಿದ್ದೇನೆ. ಮುಂದಿನ ದಿನಗಳಲ್ಲಿ ಆರು ಮಂದಿ ಶಾಸಕರನ್ನು ಆಯ್ಕೆ ಮಾಡಿ ಕೈ ಬಲಪಡಿಸಬೇಕು” ಎಂದು ಕರೆ ನೀಡಿದರು.

Previous articleಹಾಡಹಗಲೇ ಚಿನ್ನದಂಗಡಿ ದರೋಡೆ: ಗನ್​ ತೋರಿಸಿ 5 ನಿಮಿಷದಲ್ಲಿ ಲೂಟಿ