Home ನಮ್ಮ ಜಿಲ್ಲೆ ಉತ್ತರ ಕನ್ನಡ ಅರಣ್ಯ ಭೂಮಿ ಒತ್ತುವರಿ ಮಾಡಿ ಕೃಷಿ ನಡೆಸುತ್ತಿರುವವರ ಒಕ್ಕಲೆಬ್ಬಿಸದಂತೆ ಡಿ.ಕೆ.ಶಿವಕುಮಾರ ಸೂಚನೆ

ಅರಣ್ಯ ಭೂಮಿ ಒತ್ತುವರಿ ಮಾಡಿ ಕೃಷಿ ನಡೆಸುತ್ತಿರುವವರ ಒಕ್ಕಲೆಬ್ಬಿಸದಂತೆ ಡಿ.ಕೆ.ಶಿವಕುಮಾರ ಸೂಚನೆ

0
8

ದಾಂಡೇಲಿ / ಕಾರವಾರ: ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಕೃಷಿ ಮಾಡಿಕೊಂಡು ಬದುಕುತ್ತಿರುವ ರೈತರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಬಾರದು ಎಂದು ಅರಣ್ಯಾಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ನಮ್ಮ ಯುಪಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ವೇಳೆ ಅರಣ್ಯ ಭೂಮಿಯಲ್ಲಿ ವಾಸಿಸುತ್ತಿದ್ದವರಿಗೆ ಭೂಮಿ ನೀಡುವ ಸಂಬಂಧ ಕಾನೂನು ಜಾರಿಗೆ ತಂದಿದ್ದು, ಅದಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.

ಕಾರವಾರದಲ್ಲಿ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಅರಣ್ಯ ಭೂಮಿಗಾಗಿ ರೈತರು ಅರ್ಜಿ ಸಲ್ಲಿಸಿರುವ ವಿಚಾರ ಗಮನದಲ್ಲಿದೆ ಎಂದರು. ಪಂಚಾಯತ್ ಮಟ್ಟದಲ್ಲಿಯೇ ರೆಸಲ್ಯೂಷನ್ ಹೊರಡಿಸಿ, ಮೂರು ತಲೆಮಾರಿನಿಂದ ಅಲ್ಲಿ ವಾಸವಿದ್ದು ಕೃಷಿ ಮಾಡುತ್ತಿರುವ ಬಗ್ಗೆ ಪ್ರಮಾಣ ಪತ್ರ ನೀಡಿದರೆ ಅದಕ್ಕಿಂತ ದೊಡ್ಡ ದಾಖಲೆ ಮತ್ತೊಂದಿಲ್ಲ. ಯಾರ ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂಬುದರ ಬಗ್ಗೆ ಭೀಮಣ್ಣ ನಾಯ್ಕ, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯ ಸೇರಿದಂತೆ ಎಲ್ಲ ಶಾಸಕರು ಗಮನ ಸೆಳೆದಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: ಚೆಕ್ ಬೌನ್ಸ್ ಪ್ರಕರಣ: ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ FIR

ಮೂರು ಎಕರೆ ಒಳಗೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಬದುಕುತ್ತಿರುವ ಬಡವರು ಹಾಗೂ ರೈತರನ್ನು ರಕ್ಷಿಸುವುದು ನಮ್ಮ ಜವಾಬ್ದಾರಿ. ಇದು ನಮ್ಮ ಪಕ್ಷ ಜಾರಿಗೆ ತಂದ ಕಾನೂನು. ಬುಡಕಟ್ಟು ಸಮುದಾಯಗಳಿಗೆ 25 ವರ್ಷ ಹಾಗೂ ಇತರೆ ಸಮುದಾಯಗಳಿಗೆ 75 ವರ್ಷಗಳ ವಾಸದ ಆಧಾರದ ಮೇಲೆ ಭೂಮಿ ಹಕ್ಕು ನೀಡುವ ಅವಕಾಶವಿದೆ ಎಂದು ಡಿಸಿಎಂ ಹೇಳಿದರು.

ಬೇಡ್ತಿ–ವರದಾ ನದಿ ಜೋಡಣೆ – ನೀರನ್ನು ನಮ್ಮ ಬಳಕೆಗೆ ತರುವ ಬದ್ಧತೆ: ನದಿ ಜೋಡಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ಬೇಡ್ತಿ ಮತ್ತು ವರದಾ ನದಿ ಜೋಡಣೆ ಯೋಜನೆಗೆ ಈಗಾಗಲೇ ಡಿಪಿಆರ್ ತಯಾರಿಸಲು ಅನುಮತಿ ನೀಡಿ ಸಹಿ ಮಾಡಲಾಗಿದೆ. ನಮ್ಮ ನೀರನ್ನು ನಾವು ಬಳಸಿಕೊಳ್ಳಲು ಸರ್ಕಾರ ಬದ್ಧವಾಗಿದೆ. ಈ ಯೋಜನೆಗೆ ಕೇಂದ್ರ ಸರ್ಕಾರ ಶೇ.90 ಮತ್ತು ರಾಜ್ಯ ಸರ್ಕಾರ ಶೇ.10 ರಷ್ಟು ಅನುದಾನ ನೀಡಲಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಟಾಟಾನಗರ್–ಎರ್ನಾಕುಲಂ ಎಕ್ಸ್‌ಪ್ರೆಸ್‌ಗೆ ಬೆಂಕಿ: ಎರಡು ಬೋಗಿಗಳಿಗೆ ಬೆಂಕಿ, ಓರ್ವ ಮೃತ್ಯು

ಸ್ಥಳೀಯ ಶಾಸಕರ ವಿರೋಧದ ಕುರಿತು ಮಾತನಾಡಿದ ಅವರು, ಯಾರು ವಿರೋಧ ಮಾಡುತ್ತಾರೋ ಬಿಡುತ್ತಾರೋ ಮುಖ್ಯವಲ್ಲ. ನಮ್ಮ ಜನರಿಗೆ ಹಾಗೂ ರೈತರಿಗೆ ಅನುಕೂಲವಾಗುವುದು ಮುಖ್ಯ. ಅಂತರ್ಜಲ ಮಟ್ಟ ಹೆಚ್ಚಳವಾಗಬೇಕು. ಯಾವುದೇ ಒಳ್ಳೆಯ ಕೆಲಸಕ್ಕೆ ವಿರೋಧಗಳು ಸಹಜ. ಆದರೆ ಸಂತ್ರಸ್ತರಿಗೆ ಕಾನೂನು ಪ್ರಕಾರ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಅಭಿವೃದ್ಧಿ ಕೆಲಸಗಳಿಗೆ ವಿರೋಧ ರಾಜಕೀಯ ಪ್ರೇರಿತ: ರಸ್ತೆ ಅಗಲ, ಕಾರ್ಖಾನೆ ಸ್ಥಾಪನೆ, ಸೇತುವೆ ನಿರ್ಮಾಣ ಸೇರಿದಂತೆ ಎಲ್ಲ ಅಭಿವೃದ್ಧಿ ಕಾರ್ಯಗಳಿಗೂ ವಿರೋಧ ವ್ಯಕ್ತವಾಗುತ್ತದೆ. ಗ್ಯಾರಂಟಿ ಯೋಜನೆಗಳಿಗೂ ವಿರೋಧ ಮಾಡಿದರು, ಆದರೆ ಈಗ ಅವುಗಳನ್ನು ಪಡೆದುಕೊಳ್ಳುತ್ತಿದ್ದಾರೆ. ವಿರೋಧಿಸಿದವರು ಗ್ಯಾರಂಟಿಗಳನ್ನು ವಾಪಸ್ ನೀಡಲಿ ಎಂದು ತೀಕ್ಷ್ಣವಾಗಿ ಹೇಳಿದರು.

ನೂತನ ಸೇತುವೆಗಳ ಉದ್ಘಾಟನೆ ಬಳಿಕ ಸಂಚಾರ: ನೂತನ ಸೇತುವೆಯನ್ನು ತಮ್ಮ ಉದ್ಘಾಟನೆಯವರೆಗೆ ವಾಹನ ಸಂಚಾರಕ್ಕೆ ಮುಕ್ತಗೊಳಿಸದಿರುವ ಬಗ್ಗೆ ಕೇಳಿದಾಗ, ಗಂಗಾವತಿ ಹಾಗೂ ಗೋಕರ್ಣ ಸೇತುವೆಗಳನ್ನು ಮತ್ತೊಂದು ದಿನ ಬಂದು ಉದ್ಘಾಟಿಸಲಾಗುವುದು. 45 ವರ್ಷ ಕಾದಿದ್ದೀರಂತೆ, ಸ್ವಲ್ಪ ದಿನ ಕಾಯಿರಿ. ಜಿಲ್ಲೆಯ ಐದು ಮಂದಿ ಶಾಸಕರು ಒಟ್ಟಾಗಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಶಿವರಾಂ ಹೆಬ್ಬಾರ್ ಸೇರಿದಂತೆ ಎಲ್ಲರೂ ಸಹಕಾರ ನೀಡುತ್ತಿದ್ದಾರೆ. ಈ ಜನತೆ ನಮ್ಮ ಸರ್ಕಾರಕ್ಕೆ ಶಕ್ತಿಯನ್ನು ನೀಡಿದ್ದಾರೆ ಎಂದು ಹೇಳಿದರು.

ಶರಾವತಿ ಪಂಪ್ ಸ್ಟೋರೇಜ್ ಯೋಜನೆ ರಾಜ್ಯಕ್ಕೆ ಆಸ್ತಿ: ಶರಾವತಿ ಪಂಪ್ ಸ್ಟೋರೇಜ್ ಯೋಜನೆಗೆ ವಿರೋಧ ವ್ಯಕ್ತವಾಗುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಈ ಹಿಂದೆ ಇಂಧನ ಇಲಾಖೆ ಜವಾಬ್ದಾರಿ ವಹಿಸಿದ್ದಾಗ ಜರ್ಮನಿ ಮತ್ತು ಸ್ವಿಜರ್ಲ್ಯಾಂಡ್‌ನಲ್ಲಿ ಇಂತಹ ಯೋಜನೆಗಳನ್ನು ವೀಕ್ಷಿಸಿದ್ದೇನೆ. ಇದರಿಂದ ಯಾರಿಗೂ ತೊಂದರೆಯಾಗುವುದಿಲ್ಲ. 100–200 ಎಕರೆ ವ್ಯಾಪ್ತಿಯಲ್ಲಿ ಸ್ಟೋರೇಜ್ ಪಾಯಿಂಟ್ ನಿರ್ಮಿಸಿ ಪಂಪ್ ಮೂಲಕ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಶರಾವತಿಯಲ್ಲಿ ಈಗ ಉತ್ಪಾದನೆಯಾಗುತ್ತಿರುವಷ್ಟೇ ವಿದ್ಯುತ್ ಉತ್ಪಾದನೆ ಸಾಧ್ಯವಾಗುತ್ತದೆ. ಇದು ರಾಜ್ಯಕ್ಕೆ ದೊಡ್ಡ ಆಸ್ತಿಯಾಗಲಿದೆ ಎಂದು ಹೇಳಿದರು.

ರಾಜಕೀಯ ಪ್ರಶ್ನೆಗಳಿಗೆ ವ್ಯಂಗ್ಯ ಉತ್ತರ: ಜನವರಿ ನಂತರ ನೀವು ಮುಖ್ಯಮಂತ್ರಿ ಆಗುವಿರಾ ಎಂಬ ಪ್ರಶ್ನೆಗೆ, “ನಾವು ನಿಮ್ಮ ಬಳಿ ಹೇಳಿದ್ದೇವಾ? ನೀವುಗಳೇ ಸೃಷ್ಟಿ ಮಾಡುತ್ತಿರುವ ವಿಚಾರ” ಎಂದು ಉತ್ತರಿಸಿದರು. ಸಚಿವ ಸಂಪುಟ ವಿಸ್ತರಣೆ ವಿಳಂಬದ ಕುರಿತು ಆರ್.ವಿ. ದೇಶಪಾಂಡೆ ಅವರ ಹೇಳಿಕೆ ಬಗ್ಗೆ ಕೇಳಿದಾಗ, ಅವರು ಹಿರಿಯ ನಾಯಕರು. ಈ ವಿಚಾರದಲ್ಲಿ ಮುಖ್ಯಮಂತ್ರಿಯವರ ಜೊತೆ ಮಾತನಾಡುವುದು ಒಳಿತು ಎಂದು ಹೇಳಿದರು.