ಹೈದರಾಬಾದ್: ವಿಶಾಖಪಟ್ಟಣಂ–ದುವ್ವಾಡ ಮಾರ್ಗವಾಗಿ ಎರ್ನಾಕುಲಂಗೆ ತೆರಳುತ್ತಿದ್ದ ಟಾಟಾನಗರ್–ಎರ್ನಾಕುಲಂ ಎಕ್ಸ್‌ಪ್ರೆಸ್ ರೈಲಿನ ಎರಡು ಭೋಗಿಗಳಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಓರ್ವ ಪ್ರಯಾಣಿಕ ಮೃತಪಟ್ಟ ಘಟನೆ ಆಂಧ್ರಪ್ರದೇಶದಲ್ಲಿ ಸಂಭವಿಸಿದೆ. ಮಧ್ಯರಾತ್ರಿ ಸುಮಾರು 12.45ರ ಸುಮಾರಿಗೆ ಈ ಭೀಕರ ರೈಲು ಬೆಂಕಿ ದುರಂತ ಸಂಭವಿಸಿದ್ದು, ನೂರಾರು ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ.
ರೈಲಿನ ಪ್ಯಾಂಟ್ರಿ ಕಾರಿನ ಪಕ್ಕದಲ್ಲಿದ್ದ ಬಿ1 ಹಾಗೂ ಎಂ2 ಎಸಿ ಕೋಚ್‌ಗಳಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಘಟನೆಯ ಸಮಯದಲ್ಲಿ ಒಂದು ಬೋಗಿಯಲ್ಲಿ 82 ಪ್ರಯಾಣಿಕರು ಹಾಗೂ ಮತ್ತೊಂದು ಬೋಗಿಯಲ್ಲಿ 76 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಚೆಕ್ ಬೌನ್ಸ್ ಪ್ರಕರಣ: ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ FIR
ಬೆಂಕಿ ಕಾಣಿಸಿಕೊಂಡುದನ್ನು ಗಮನಿಸಿದ ಲೋಕೋ ಪೈಲಟ್‌ಗಳು ತಕ್ಷಣವೇ ರೈಲನ್ನು ಎಲಮಂಚಿಲಿ ಸಮೀಪದ ರೈಲ್ವೆ ನಿಲ್ದಾಣದಲ್ಲಿ ನಿಲ್ಲಿಸಿದ್ದಾರೆ. ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ಅನಕಪಲ್ಲಿ, ಎಲಮಂಚಿಲಿ ಹಾಗೂ ನಕ್ಕಪಲ್ಲಿ ಭಾಗಗಳಿಂದ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದರು. ಆದರೆ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ತಲುಪುವ ವೇಳೆಗೆ ಎರಡು ಎಸಿ ಬೋಗಿಗಳು ಸಂಪೂರ್ಣವಾಗಿ ಸುಟ್ಟು ಹೋಗಿದ್ದವು.
ಈ ದುರ್ಘಟನೆಯಲ್ಲಿ ಬಿ1 ಕೋಚ್‌ನಲ್ಲಿದ್ದ ವಿಶಾಖಪಟ್ಟಣ ಮೂಲದ ಚಂದ್ರಶೇಖರ್ ಸುಂದರ್ (70) ಎಂಬುವರು ಸಜೀವ ದಹನಗೊಂಡು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಇತರ ಪ್ರಯಾಣಿಕರು ತಕ್ಷಣ ರೈಲಿನಿಂದ ಹೊರಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಸುಮಾರು ಎರಡು ಡಜನ್ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳನ್ನು ಹೊಂದಿದ್ದಾರೆ.
ಇದನ್ನೂ ಓದಿ: ರಿವೈಂಡ್ 2025: ಮರೆಯಾದ ಮಹನೀಯರು
ರೈಲು ನಿಂತ ಪರಿಣಾಮವಾಗಿ ಸುಮಾರು 2,000ಕ್ಕೂ ಹೆಚ್ಚು ಪ್ರಯಾಣಿಕರು ರೈಲ್ವೆ ನಿಲ್ದಾಣಗಳಲ್ಲಿ ಸಿಲುಕಿದ್ದು, ಭಾರೀ ಅಸ್ತವ್ಯಸ್ತ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಘಟನೆ ಕಾರಣವಾಗಿ ವಿಶಾಖಪಟ್ಟಣಂ–ವಿಜಯವಾಡ ಮಾರ್ಗದಲ್ಲಿ ಹಲವು ರೈಲುಗಳ ಸಂಚಾರ ವ್ಯತ್ಯಯಗೊಂಡಿದೆ.
ರೈಲ್ವೆ ಅಧಿಕಾರಿಗಳು ಬೆಳಗಿನ ಜಾವ 3.30ರ ನಂತರ ಪ್ರಯಾಣಿಕರನ್ನು ಬೇರೆ ರೈಲುಗಳ ಮೂಲಕ ಸಾಗಿಸಲು ಪರ್ಯಾಯ ವ್ಯವಸ್ಥೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ. ಬೆಂಕಿ ಸಂಭವಿಸಲು ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಆರಂಭಿಸಲಾಗಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.









