ಡ್ರಗ್ ಮಾಫಿಯಾ ನಿಯಂತ್ರಣದಲ್ಲಿ ರಾಜ್ಯ ಸರ್ಕಾರ: ಬೊಮ್ಮಾಯಿ

0
5

ಗದಗ: ಮಹಾರಾಷ್ಟ್ರ ಪೊಲೀಸರು ಕರ್ನಾಟಕಕ್ಕೆ ಬಂದು ಡ್ರಗ್ ಟ್ರಾಫಿಕಿಂಗ್ ಮಾಡುವವರನ್ನು ಪತ್ತೆ ಹೆಚ್ಚುತ್ತಾರೆ ಎಂದರೆ ಇಲ್ಲಿನ ಪೊಲೀಸರು ಡ್ರಗ್ ಟ್ರಾಫಿಕಿಂಗ್‌ನಲ್ಲಿ ಶಾಮೀಲಾಗಿದ್ದಾರೆ ಎಂಬ ಅನುಮಾನ ಮೂಡುತ್ತದೆ. ಮುಖ್ಯಮಂತ್ರಿಗಳು ಎಚ್ಚೆತ್ತುಕೊಳ್ಳದಿದ್ದರೆ ಉಡ್ತಾ ಕರ್ನಾಟಕ ಆಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.

ಗದಗನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಗ್ಸ್ ಬಳಕೆ ಕರ್ನಾಟಕದಲ್ಲಿ ಅತಿ ಹೆಚ್ಚಿದೆ. ಅದನ್ನು ನಿಯಂತ್ರಿಸಲು ಸರ್ಕಾರ ಸ್ಪೆಷಲ್ ಸ್ಕ್ವಾಡ್ ಮಾಡಿದ್ದಾರೆ. ಆದರೆ, ಪೊಲೀಸರ ಭಯ ಇಲ್ಲ. ಹಲವಾರು ಪ್ರಸಂಗಗಳಲ್ಲಿ ಪೊಲೀಸರು ಕೆಲವರನ್ನು ಬಂಧಿಸಿದ್ದಾರೆ. ಇದಕ್ಕಾಗಿ ವಿಶೇಷ ಕಾನೂನಿದೆ. ಅದನ್ನು ಬಳಕೆ ಮಾಡುತ್ತಿಲ್ಲ. ಮಹಾರಾಷ್ಟ್ರದವರು ಬಂದು ಇಲ್ಲಿ ಡಗ್ಸ್ ಪತ್ತೆ ಹೆಚ್ಚುತ್ತಾರೆ ಎಂದರೆ ಇಲ್ಲಿನ ಪೊಲೀಸರು ಡ್ರಗ್ ಟ್ರಾಫಿಕಿಂಗ್‌ನಲ್ಲಿ ಶಾಮೀಲಾಗಿದ್ದಾರೆ ಎಂಬ ಅನುಮಾನ ಮೂಡುತ್ತದೆ. ಹಾವೇರಿ ಸೇರಿದಂತೆ ಜಿಲ್ಲಾ ಕೇಂದ್ರಗಳಲ್ಲೂ ಡ್ರಗ್ಸ್ ಮುಕ್ತವಾಗಿ ಮಾರಾಟವಾಗುತ್ತಿದೆ. ಇದೇ ರೀತಿ ಮುಂದುವರೆದರೆ ಪಂಜಾಬ್ ಆದ ಹಾಗೆ ಆಗುತ್ತದೆ. ಉಡ್ತಾ ಪಂಜಾಬ್ ಥರಾ ಉಡ್ತಾ ಕರ್ನಾಟಕ ಆಗುತ್ತದೆ ಎಂದು ಹೇಳಿದರು.

ಯಾವ ಅಧಿಕಾರಿಗಳ ವ್ಯಾಪ್ತಿಯಲ್ಲಿ ಡ್ರಗ್ಸ್ ಮಾರಾಟ ನಡೆಯುತ್ತಿದೆ ಆ ಎಲ್ಲ ಅಧಿಕಾರಿಗಳನ್ನು ಬದಲಾಯಿಸಬೇಕು. ಮುಖ್ಯಮಂತ್ರಿಗಳು ಎಚ್ಚೆತ್ತುಕೊಳ್ಳಬೇಕು. ಸ್ಟ್ಯಾಡ್‌ಗಳನ್ನು ಮಾಡಿ ಡ್ರಗ್ ಟ್ರಾಫಿಕಿಂಗ್ ಮಾಡುವವರನ್ನು ಒದ್ದು ಒಳಗೆ ಹಾಕಬೇಕು. ಡ್ರಗ್ ಟ್ರಾಫಿಕಿಂಗ್ ಮಾಡುವರಿಗೆ ಕಠಿಣ ಕಾನೂನು ತರಬೇಕು. ರಾಜ್ಯ ಸರ್ಕಾರ ದ್ವೇಷ ಭಾಷಣ ಮಾಡುವುದರ ವಿರುದ್ಧ ಕಾನೂನು ತರುವ ಬದಲು, ರೈತರ ಗೊಬ್ಬರ ಕಳ್ಳತನ ಮಡುವವರಿಗೆ ಕಠಿಣ ಕಾನೂನಿನಲ್ಲ, ಡ್ರಗ್ ಮಾರುವವರಿಗೂ ಬಿಗಿ ಕಾನೂನಿಲ್ಲ. ಕಳ್ಳಭಟ್ಟಿ ಮಾಡುವವರಿಗೂ ಬಿಗಿ ಕಾನೂನಿಲ್ಲ ಈ ರಾಜ್ಯ ಸಂಪೂರ್ಣ ಕಾನೂನು ಸುವ್ಯವಸ್ಥೆ ಅಲ್ಲದೇ ಅನೈತಿಕ ಚಟುವಟಿಕೆಯಿಂದ ಕೂಡಿದ ರಾಜ್ಯವಾಗಿದೆ. ಈ ಸರ್ಕಾರ ಸಂಪೂರ್ಣ ಕಚ್ಚಾಟದಲ್ಲಿ ಮುಳುಗಿದೆ. ಹೀಗಾಗಿ ಡ್ರಗ್ ಮಾಫಿಯಾ ಮುಕ್ತವಾಗಿದೆ. ಇದು ಡ್ರಗ್ ಮಾಫಿಯಾ ನಿಯಂತ್ರಣದಲ್ಲಿರುವ ಸರ್ಕಾರವಾಗಿದೆ ಎಂದರು.

ಇದೇ ವೇಳೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ತಿಯಿಸಿದ ಅವರು, ಬಾಂಗ್ಲಾ ಸರ್ಕಾರ ಜನರ ಮೇಲೆ ನಿಯಂತ್ರಣ ಕಳೆದುಕೊಂಡಿದೆ. ಅಲ್ಪಸಂಖ್ಯಾತರು ಅಸುರಕ್ಷಿತವಾಗಿದ್ದಾರೆ. ಯೂನಸ್ ಸರ್ಕಾರ ಹಿಂದೂ ಜನರು, ಸಂಸ್ಥೆಗಳು ಮತ್ತು ಮನೆಗಳಿಗೆ ರಕ್ಷಣೆ ಕೊಡಬೇಕು. ಇಲ್ಲದಿದ್ದರೆ ದಕ್ಷಿಣ ಏಷಿಯಾ ಪ್ರದೇಶ ಸಮಸ್ಯೆಗೆ ಸಿಲುಕಲಿದೆ. ಅದಕ್ಕಾಗಿ ಅವರು ಬೆಲೆ ತೆರಬೇಕಾಗುತ್ತದೆ ಎಂದು ಹೇಳಿದರು.

Previous articleಕಾರಾಗೃಹ ಸಿಬ್ಬಂದಿ ಜತೆ ಆರ್.ಡಿ. ಪಾಟೀಲ್ ಕಿರಿಕ್