ಹುಬ್ಬಳ್ಳಿ: `ಸಂಯುಕ್ತ ಕರ್ನಾಟಕ’ ಪತ್ರಿಕೆಯ ನಿವೃತ್ತ ಸಂಪಾದಕ ಹಾಗೂ ಟಿಎಸ್‌ಆರ್ ಪ್ರಶಸ್ತಿ ಪುರಸ್ಕೃತ ಖ್ಯಾತ ಪತ್ರಕರ್ತ ದಿವಂಗತ ಸುರೇಂದ್ರ ಭೀಮರಾವ್ ದಾನಿ ಜನ್ಮಶತಮಾನೋತ್ಸವ ಸಮಾರಂಭ ಶನಿವಾರ ಹುಬ್ಬಳ್ಳಿಯ ಸವಾಯಿ ಗಂಧರ್ವ ಕಲಾ ಮಂದಿರದಲ್ಲಿ ಅರ್ಥಪೂರ್ಣವಾಗಿ ನೆರವೇರಿತು.
`ಕೊಟ್ಟ ವಚನವನ್ನು ಈಡೇರಿಸುವ’ ಸಂಯುಕ್ತ ಕರ್ನಾಟಕ ಧ್ಯೇಯ ವಾಕ್ಯಕ್ಕೆ ಪೂರಕವಾಗಿ ತಮ್ಮ ವೃತ್ತಿ ಹಾಗೂ ಬದುಕಿನಲ್ಲಿ ನಡೆದುಕೊಂಡ ಉತ್ತರ ಕರ್ನಾಟಕದ ಶ್ರೇಷ್ಠ ಪತ್ರಕರ್ತ ದಾನಿ ಎಂದು ಸಮಾರಂಭದಲ್ಲಿ ಭಾಗವಹಿಸಿದ್ದ ಗಣ್ಯರು ಸ್ಮರಿಸಿದರು.
ಮುಖ್ಯ ಅತಿಥಿಯಾಗಿದ್ದ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್.ಕೆ. ಪಾಟೀಲ, `ಸುರೇಂದ್ರ ದಾನಿ ಅತ್ಯಂತ ಮೌಲ್ಯಯುತ ವ್ಯಕ್ತಿಯಾಗಿದ್ದರು; ಪತ್ರಿಕಾವೃತ್ತಿಗೆ ದಾನಿ ಅವರಿಂದ ಹಿರಿಮೆ ಬಂದಿತ್ತು’ ಎಂದು ನೆನಪು ಮಾಡಿಕೊಂಡರು. ಮನುಷ್ಯನ ಜೀವನದಲ್ಲಿ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದಷ್ಟೇ ಅಲ್ಲ; ಅವುಗಳನ್ನು ಕೊನೆಯ ತನಕ ಉಳಿಸಿಕೊಂಡು ಬಾಳುವುದು ಎಲ್ಲ ಪ್ರಶಸ್ತಿ ಪುರಸ್ಕಾರಗಳಿಗಿಂತಲೂ ಮಿಗಿಲು. ಸುರೇಂದ್ರ ದಾನಿ ಈ ಕಾರಣಕ್ಕಾಗಿಯೇ ಇಂದಿಗೂ ನಮಗೆ ಪ್ರಸ್ತುತ ಎಂದರು.
ಗಾಂಧಿ ವಿಚಾರ ಧಾರೆಯನ್ನು ಬದುಕು- ಬರಹಗಳಿಗೆ ಅಳವಡಿಸಿಕೊಂಡು ಸಮಾಜ ಸುಧಾರಣಾ ಕೆಲಸಗಳಿಗೆ ಕೈ ಹಾಕುವಾಗ ಇರಬೇಕಾದ ಶಿಸ್ತು ಹಾಗೂ ದಣಿವರಿಯದ ದುಡಿಮೆ ದಾನಿಯವರು ತೋರಿಸಿಕೊಟ್ಟ ಮಾರ್ಗ ಎಂದು ಮಾಜಿ ಸಂಸದ ಪ್ರೊ. ಐ.ಜಿ. ಸನದಿ ಹೇಳಿದರು.
ಸಂಪಾದಕರಾದವರಿಗೆ ಯಾವ ರೀತಿಯ ದೂರದೃಷ್ಟಿ ಇರಬೇಕು ಎಂಬುದಕ್ಕೆ ಸುರೇಂದ್ರ ದಾನಿಯವರು ನಿದರ್ಶನ ಎಂದು ಹುಬ್ಬಳ್ಳಿ ಆಯುರ್ವೇದ ಕಾಲೇಜಿನ ಅಧ್ಯಕ್ಷ ಗೋವಿಂದ ಜೋಶಿ ಹೇಳಿದರು.
ಸುರೇಂದ್ರ ದಾನಿಯವರು ಮೊಹರೆ ಹಣಮಂತರಾಯರು ಹೆಕ್ಕಿ ತೆಗೆದ ಪತ್ರಿಕೋದ್ಯಮದ ರಸಋಷಿ ಎಂದು ಕರ್ನಾಟಕ ವಿಶ್ವವಿದ್ಯಾಲಯ ಪತ್ರಿಕೋದ್ಯಮ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ.ಜೆ.ಎಂ. ಚಂದೂನವರ್ ನುಡಿದರು.
ಸುರೇಂದ್ರ ದಾನಿ ಜೊತೆ ನಿಕಟವಾಗಿ ಕರ್ತವ್ಯ ನಿರ್ವಹಿಸಿದ್ದ ನಾರಾಯಣ ಘಳಗಿ, ಲೇಖಕ ಬಾಬು ಕೃಷ್ಣಮೂರ್ತಿ ಮಾತನಾಡಿದರು. ಅದ್ವೈತ ವಿದ್ಯಾಶ್ರಮದ ಶ್ರೀ ಪ್ರಣವಾನಂದ ತೀರ್ಥರು ಆಶೀರ್ವಚನ ನೀಡಿದರು. ಜನ್ಮ ಶತಮಾನೋತ್ಸವ ಸಮಿತಿಯ ಡಾ. ಶ್ಯಾಮಸುಂದರ ಬಿದರಕುಂದಿ ಪ್ರಾಸ್ತಾವಿಕ ಭಾಷಣ ಮಾಡಿದರು. ಅಶೋಕ ದಾನಿ ಅಧ್ಯಕ್ಷತೆ ವಹಿಸಿದ್ದರು.
ದಾನಿ ಹೆಸರಲ್ಲಿ ಪ್ರಶಸ್ತಿ: `ಸುರೇಂದ್ರ ದಾನಿ ಹೆಸರಿನಲ್ಲಿ ಪ್ರತಿ ವರ್ಷ ಪ್ರಶಸ್ತಿ ನೀಡುವ ಬಗ್ಗೆ ಅಭಿಮಾನಿಗಳು, ಬುದ್ಧಿಜೀವಿಗಳು ಹಾಗೂ ಪತ್ರಿಕಾ ವಲಯದ ಜೊತೆ ಸೇರಿ ಯೋಜನೆ ರೂಪಿಸೋಣ. ಸಂಯುಕ್ತ ಕರ್ನಾಟಕ ಪತ್ರಿಕಾ ಬಳಗವನ್ನು ಒಳಗೊಂಡು ಈ ಬಗ್ಗೆ ಚಿಂತನೆ ನಡೆಸಲಾಗುವುದು’ ಎಂದು ಸಚಿವ ಎಚ್.ಕೆ. ಪಾಟೀಲ ಸದಭಿಪ್ರಾಯ ವ್ಯಕ್ತಪಡಿಸಿದರು. ಟಿಎಸ್‌ಆರ್ ಮಾದರಿಯಲ್ಲಿ ದಾನಿ ಪ್ರಶಸ್ತಿಯನ್ನು ಸರ್ಕಾರ ನೀಡಬೇಕು ಎಂಬ ಜನ್ಮ ಶತಮಾನೋತ್ಸವ ಸಮಿತಿ ಮನವಿಯ ಹಿನ್ನೆಲೆಯಲ್ಲಿ ಈ ರೀತಿ ಸ್ಪಂದಿಸಿದರು.























