ನವದೆಹಲಿ: ಯುಪಿಎ ಸರ್ಕಾರದ ಮಹತ್ವಾಕಾಂಕ್ಷೆಯ ಮನ್‌ರೆಗಾ (ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ)ವನ್ನು ಮಾರ್ಪಾಡು ಮಾಡಿರುವುದರ ವಿರುದ್ಧ ಕಾಂಗ್ರೆಸ್ ಸಿಡಿದೆದ್ದಿದ್ದು, ಜನವರಿ 5ರಿಂದ ದೇಶಾದ್ಯಂತಮನ್ರೆಗಾ ಬಚಾವೋ’ ಪ್ರತಿಭಟನೆಗೆ ಕರೆ ಕೊಟ್ಟಿದೆ.
ಶನಿವಾರ ಇಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲುಸಿ) ಸಭೆಯ ನಂತರ ಸುದ್ದಿಗಾರ ರೊಂದಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಮನ್ರೆಗಾ ಯೋಜನೆಯನ್ನುವಿಕೃತಗೊಳಿಸಿರುವು ದರ ವಿರುದ್ಧ ರಾಷ್ಟ್ರ ಮಟ್ಟದಲ್ಲಿ ಪ್ರತಿಭಟಿಸುವ ಅಗತ್ಯವಿದೆ. ಕಾಂಗ್ರೆಸ್ ಜನವರಿ 5 ರಿಂದ ಮನ್ರೆಗಾ ಬಚಾವೋ ಅಭಿಯಾನ ಹಮ್ಮಿಕೊಂಡಿದೆ.ಮನ್ರೆಗಾ’ಗೆ ಕೈಹಾಕಿರುವ ಎನ್‌ಡಿಎ ಕ್ರಮದ ವಿರುದ್ಧ ಜನ ಸಿಟ್ಟಾಗಿದ್ದಾರೆ, ಇದರ ಪರಿಣಾಮವನ್ನು ಮೋದಿ ನೇತೃತ್ವದ ಸರ್ಕಾರ ಸರ್ಕಾರ ಎದುರಿಸಲಿ’ ಎಂದು ಸವಾಲೆಸೆದರು.
ಮನ್ರೆಗಾ ಎಂಬುದು ಬರೀ ಒಂದು ಯೋಜನೆಯಲ್ಲ, ಅದು ಸಂವಿಧಾನ ನೀಡಿರುವಉದ್ಯೋಗದ ಹಕ್ಕು. ಅದನ್ನು ಕಸಿಯಲು ಮೋದಿ ಸರ್ಕಾರ ಹೊರಟಿರುವುದರಿಂದ ಜನ ಸಿಟ್ಟಾಗಿದ್ದಾರೆ ಎಂದು ವಾಗ್ದಾಳಿ ಮಾಡಿದರು. `ಮನ್ರೆಗಾ’ವನ್ನೇ ಪ್ರಧಾನ ಅಂಶವಾಗಿಟ್ಟುಕೊಂಡು ರಾಷ್ಟ್ರ ಮಟ್ಟದ ಅಭಿಯಾನ ನಡೆಸಲು ಕಾರ್ಯಕಾರಿಣಿ ಸಭೆಯಲ್ಲಿ ನಿರ್ಧರಿಸಿದ್ದೇವೆ. ಜನವರಿ 5 ರಿಂದ ದೇಶಾದ್ಯಂತ ಆರಂಭವಾಗುವ ಅಭಿಯಾನದ ನೇತೃತ್ವವನ್ನು ಕಾಂಗ್ರೆಸ್ ವಹಿಸಲಿದೆ ಎಂದು ಖರ್ಗೆ ಘೋಷಿಸಿದರು.
ಇದನ್ನೂ ಓದಿ: ಜನವರಿ ಮೊದಲ ವಾರದಲ್ಲೇ ನಾಯಕತ್ವ ಕ್ರಾಂತಿಗೆ ಮುಹೂರ್ತ ನಿಗದಿ?
ಹೊಸ `ವಿಬಿ-ಜಿ ರಾಮ್-ಜಿ’ ಕಾಯ್ದೆಯಲ್ಲಿ, ಖರ್ಚಿನ ಪಾಲನ್ನು ರಾಜ್ಯಗಳೂ ಹಂಚಿಕೊಳ್ಳುವ ಸೆಕ್ಷನ್ ಸೇರ್ಪಡೆಯು ರಾಜ್ಯಗಳ ಪಾಲಿಗೆ ಹೆಚ್ಚುವರಿ ಹೊರೆಯಾಗಲಿದೆ. ಯಾವುದೇ ಸಮಾಲೋಚನೆ ಇಲ್ಲದೆ ಕೈಗೊಂಡ ಈ ಕಾಯ್ದೆ ಏಕಪಕ್ಷೀಯವಾದದು ಎಂದು ಖರ್ಗೆ ಖಂಡಿಸಿದರು.
ಬಡವರ ಬೆನ್ನಿಗೆ ಮೋದಿ ಸರ್ಕಾರ ಚೂರಿ ಹಾಕಿದೆ: ಮನ್ರೆಗಾ ರದ್ದು ಮಾಡುವ ಮೂಲಕ ಬಡವರ ಬೆನ್ನಿಗೆ ಮೋದಿ ಸರ್ಕಾರ ಚೂರಿ ಹಾಕಿದೆ. ಹಿಂದೆ ಕೃಷಿ ಕಾಯ್ದೆಗಳನ್ನು ಏಕಪಕ್ಷೀಯವಾಗಿ ಜಾರಿಗೆ ತಂದು, ವ್ಯಾಪಕ ಪ್ರತಿಭಟನೆ ಎದುರಿಸಲಾಗದೆ ಸರ್ಕಾರ ಅವನ್ನು ಹೇಗೆ ಹಿಂಪಡೆದುಕೊಂಡಿತೋ ಅದೇ ಮಾದರಿ ಪರಿಣಾಮವನ್ನು ಮನ್ರೆಗಾ ಬಚಾವೋ ಆಂದೋಲವೂ ಬೀರಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಯಾರೊಬ್ಬರ ಜತೆ ಮೋದಿ ಚರ್ಚೆ ಮಾಡಿಲ್ಲ: ಬಡವರ ಮನ್ರೆಗಾ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರೊಬ್ಬರೇ ನಾಶ ಮಾಡಿದ್ದಾರೆ. ಅವರು ಯೋಜನೆಯ ಅಧ್ಯಯನ ಮಾಡದೆ ಹಾಗೂ ಸಚಿವ ಸಂಪುಟದ ಗಮನಕ್ಕೂ ತಾರದೆ ಏಕಪಕ್ಷೀಯವಾಗಿ ತೀರ್ಮಾನಿಸಿದ್ದಾರೆ ಎಂದು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.






















