ರಾಜ್ಯ ಸರ್ಕಾರದ ಕಾರ್ಯ ಮುಕ್ತಾಯಗೊಂಡಿದೆ. ಇನ್ನೇನಿದ್ದರೂ ಕೇಂದ್ರದ್ದು
ರಬಕವಿ-ಬನಹಟ್ಟಿ: ಕುಡಚಿಯಿಂದ ಜಮಖಂಡಿಯವರೆಗೆ ನಡೆಯುತ್ತಿರುವ ರೈಲು ಮಾರ್ಗ ಕಾಮಗಾರಿ ಯಾವುದೇ ಮೀನಾಮೇಷವಿಲ್ಲದೆ ನಿರಂತರವಾಗಿ ಮುಂದುವರಿಯಬೇಕೆಂದು ಕೇಂದ್ರ ಸರ್ಕಾರ ಹಾಗೂ ರೈಲ್ವೆ ಅಧಿಕಾರಿಗಳಿಗೆ ರೈಲ್ವೆ ಹೋರಾಟ ಸಮಿತಿ ಎಚ್ಚರಿಕೆ ನೀಡಿದೆ. ಕಾಮಗಾರಿ ಮಧ್ಯದಲ್ಲಿ ನಿಂತಲ್ಲಿ ಮತ್ತೆ ಉಗ್ರ ಹೋರಾಟ ನಡೆಸಲಾಗುವುದು ಎಂದು ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಕುತ್ಬುದ್ದೀನ್ ಖಾಜಿ ಸ್ಪಷ್ಟಪಡಿಸಿದರು.
ರಬಕವಿ-ಬನಹಟ್ಟಿ ಪತ್ರಿಕಾ ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆ ಕುಡಚಿಯಲ್ಲಿ ರೈಲು ಮಾರ್ಗ ಕಾಮಗಾರಿ ಪ್ರಾರಂಭದ ನಂತರ ಕಳೆದ 10 ದಿನಗಳ ಕಾಲ ನಡೆದ ಸತ್ಯಾಗ್ರಹವನ್ನು ಜನಪ್ರತಿನಿಧಿಗಳ ಪೂರಕ ಭರವಸೆ ಹಿನ್ನೆಲೆಯಲ್ಲಿ ಮೊಟಕುಗೊಳಿಸಲಾಗಿದೆ ಎಂದು ತಿಳಿಸಿದರು. ಕೇಂದ್ರ ಸರ್ಕಾರ ಹಾಗೂ ರೈಲ್ವೆ ಇಲಾಖೆಯ ಅಧಿಕಾರಿಗಳು ಕಾಮಗಾರಿ ವೇಗವಾಗಿ ನಡೆಸುವುದಾಗಿ ನೀಡಿದ ಭರವಸೆ ಹಿನ್ನೆಲೆಯಲ್ಲಿ ಸತ್ಯಾಗ್ರಹ ಹಿಂಪಡೆಯಲಾಗಿದೆ ಎಂದರು.
ಇದನ್ನೂ ಓದಿ: KSDL-ಕೃಷಿ ಮಾರಾಟ ಇಲಾಖೆ ನೇಮಕಾತಿ ಪರೀಕ್ಷೆ ದಿನಾಂಕ ಬದಲಾವಣೆ
ಕುಡಚಿ–ಬಾಗಲಕೋಟೆ ರೈಲು ಮಾರ್ಗಕ್ಕೆ ಅಗತ್ಯವಿರುವ ಸುಮಾರು 3000 ಎಕರೆಯಷ್ಟು ಭೂಮಿಯನ್ನು ಸರ್ಕಾರ ಸಂಪೂರ್ಣವಾಗಿ ಸ್ವಾಧೀನಪಡಿಸಿಕೊಂಡಿದೆ. ಆದರೂ ಮಧ್ಯಂತರದಲ್ಲಿ ಕಾಮಗಾರಿ ವಿಳಂಬವಾಗಿದ್ದುದರಿಂದ ಸಾರ್ವಜನಿಕರಲ್ಲಿ ಅಸಮಾಧಾನ ಮೂಡಿತ್ತು. ಈ ಹಿನ್ನೆಲೆಯಲ್ಲಿ ರೈಲ್ವೆ ಹೋರಾಟ ಸಮಿತಿ ಸತ್ಯಾಗ್ರಹ ಹಮ್ಮಿಕೊಂಡಿದ್ದು, ಇದೀಗ ಸಚಿವ ಸತೀಶ ಜಾರಕಿಹೊಳಿ ಹಾಗೂ ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿಯವರ ಸ್ಪಂದನೆಯಿಂದ ಕಾಮಗಾರಿ ನಿಲ್ಲಿಸದೆ ಮುಂದುವರೆಸುವ ಭರವಸೆ ದೊರೆತಿದೆ ಎಂದು ಹೇಳಿದರು.
ಜನಪ್ರತಿನಿಧಿಗಳ ಮಧ್ಯಸ್ಥಿಕೆಯಿಂದ ಶುಕ್ರವಾರದಿಂದಲೇ ರೈಲು ಮಾರ್ಗ ಕಾಮಗಾರಿಗೆ ವೇಗ ಬಂದಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಈ ಬೆಳವಣಿಗೆಯನ್ನು ಗಮನಿಸಿ, ಹೋರಾಟ ಸಮಿತಿ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಹಿಂಪಡೆಯಲು ನಿರ್ಧರಿಸಿದೆ ಎಂದು ಕುತ್ಬುದ್ದೀನ್ ಖಾಜಿ ಹೇಳಿದರು.
ಇದನ್ನೂ ಓದಿ: ಮೊಟ್ಟೆಯಲ್ಲಿ ಕ್ಯಾನ್ಸರ್‌ಕಾರಕ ಅಂಶವಿಲ್ಲ
ರೈಲು ಮಾರ್ಗ ಕಾಮಗಾರಿ ಯಶಸ್ವಿಗೆ ರೈತರೂ ಸಹಕಾರ ನೀಡುತ್ತಿರುವುದು ಶ್ಲಾಘನೀಯವಾಗಿದೆ. ಹಲವಾರು ರೈತರು ತಮ್ಮ ಜಮೀನಿನಲ್ಲಿ ಬೆಳೆದಿದ್ದ ಬೆಳೆಗಳನ್ನು ಸ್ವಯಂಪ್ರೇರಿತವಾಗಿ ಕಡಿದು, ರೈಲು ಮಾರ್ಗ ನಿರ್ಮಾಣಕ್ಕೆ ಅನುಕೂಲ ಮಾಡಿಕೊಡುತ್ತಿದ್ದಾರೆ. ರೈತರ ಈ ಸಹಕಾರಕ್ಕೆ ರೈಲ್ವೆ ಹೋರಾಟ ಸಮಿತಿ ಕೃತಜ್ಞತೆ ಸಲ್ಲಿಸುತ್ತದೆ ಎಂದರು.
ಕುಡಚಿ–ಜಮಖಂಡಿ ರೈಲು ಮಾರ್ಗ ಪೂರ್ಣಗೊಂಡಲ್ಲಿ ಉತ್ತರ ಕರ್ನಾಟಕ ಭಾಗದ ಆರ್ಥಿಕ, ಸಾಮಾಜಿಕ ಹಾಗೂ ಕೈಗಾರಿಕಾ ಅಭಿವೃದ್ಧಿಗೆ ಮಹತ್ವದ ಬದಲಾವಣೆ ತರಲಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಕಾಮಗಾರಿ ಸ್ಥಗಿತಗೊಳ್ಳಬಾರದು ಎಂಬುದು ಈ ಭಾಗದ ಜನರ ಒಕ್ಕೊರಲ ಆಗ್ರಹವಾಗಿದೆ ಎಂದು ಅವರು ಹೇಳಿದರು.























