ಅರಮನೆ ಬಳಿ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗದ ಸ್ಫೋಟದ ದೃಶ್ಯ!

0
3

ಬಲೂನ್ ಮಾರಾಟ ಮಾಡಲು ಬಂದಿದ್ದ ಸಲೀಂ ಹೆಸರಿನಲ್ಲಿದೆ 5 ಎಕರೆ ಜಮೀನು

ಮೈಸೂರು: ಅಂಬಾವಿಲಾಸ ಅರಮನೆ ಮುಂಭಾಗದ ಜಯಮಾರ್ತಾಂಡ ದ್ವಾರದ ಬಳಿ ಸಂಭವಿಸಿದ ಭೀಕರ ಹೀಲಿಯಂ ಗ್ಯಾಸ್ ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ ತನಿಖೆಯನ್ನು ಪೊಲೀಸರು ಮತ್ತಷ್ಟು ತೀವ್ರಗೊಳಿಸಿದ್ದಾರೆ. ಈ ದುರ್ಘಟನೆಯಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದ ಉತ್ತರ ಪ್ರದೇಶ ಮೂಲದ ಸಲೀಂ ಹಿನ್ನೆಲೆ ಇದೀಗ ಹಲವಾರು ಅನುಮಾನಗಳಿಗೆ ಕಾರಣವಾಗಿದೆ.

ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ, ಸಲೀಂ ಉತ್ತರ ಪ್ರದೇಶದ ಕನೋಜ್ ಜಿಲ್ಲೆಯ ತೊಫಿಯಾ ಗ್ರಾಮದ ನಿವಾಸಿಯಾಗಿದ್ದು, ಐದು ಎಕರೆ ಕೃಷಿ ಜಮೀನು ಹೊಂದಿದ್ದ ಕೃಷಿಕನಾಗಿದ್ದ ಎನ್ನುವುದು ಬೆಳಕಿಗೆ ಬಂದಿದೆ. ವರ್ಷಗಳ ಕಾಲ ಕೃಷಿಯಲ್ಲೇ ತೊಡಗಿಸಿಕೊಂಡಿದ್ದ ಸಲೀಂ ಒಂದು ತಿಂಗಳ ಹಿಂದಷ್ಟೇ ಮೈಸೂರಿಗೆ ಬಂದು ಬಲೂನ್ ಮಾರಾಟಕ್ಕೆ ಮುಂದಾಗಿದ್ದಾನೆ ಎನ್ನುವುದು ಪೊಲೀಸರ ಅನುಮಾನವನ್ನು ಮತ್ತಷ್ಟು ಗಟ್ಟಿಗೊಳಿಸಿದೆ.

ಇದನ್ನೂ ಓದಿ: KSDL-ಕೃಷಿ ಮಾರಾಟ ಇಲಾಖೆ ನೇಮಕಾತಿ ಪರೀಕ್ಷೆ ದಿನಾಂಕ ಬದಲಾವಣೆ

ಐದು ಎಕರೆ ಜಮೀನು ಹೊಂದಿದ್ದ ವ್ಯಕ್ತಿ ಏಕೆ ದೂರದ ಮೈಸೂರಿಗೆ ಬಂದು ಬಲೂನ್ ಮಾರಾಟ ಮಾಡುತ್ತಿದ್ದ? ಹೀಲಿಯಂ ಗ್ಯಾಸ್ ಸಿಲಿಂಡರ್ ಅನ್ನು ಆತ ಹೇಗೆ ಪಡೆದುಕೊಂಡ? ಇದರಲ್ಲಿ ಯಾರಾದರೂ ನೆರವಿತ್ತರೇ? ಎಂಬ ಹಲವು ಪ್ರಶ್ನೆಗಳು ಉದ್ಭವಿಸಿವೆ. ಈ ಹಿನ್ನಲೆಯಲ್ಲಿ ಮೈಸೂರು ಪೊಲೀಸರು ಉತ್ತರ ಪ್ರದೇಶ ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸಲೀಂ ಕುಟುಂಬಸ್ಥರಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಈ ಪ್ರಕರಣದ ಗಂಭೀರತೆಯನ್ನು ಮನಗಂಡು ರಾಷ್ಟ್ರೀಯ ತನಿಖಾ ದಳ (NIA) ಅಧಿಕಾರಿಗಳು ಕೂಡ ತಮ್ಮದೇ ಆದ ಆಯಾಮದಲ್ಲಿ ಮಾಹಿತಿ ಕಲೆಹಾಕುತ್ತಿದ್ದಾರೆ. ಈ ಸ್ಫೋಟ ಪ್ರಕರಣವನ್ನು ಎನ್‌ಐಎಗೆ ವಹಿಸಬೇಕೆಂಬ ಒತ್ತಾಯವೂ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಇದನ್ನೂ ಓದಿ: ಮೊಟ್ಟೆಯಲ್ಲಿ ಕ್ಯಾನ್ಸರ್‌ಕಾರಕ ಅಂಶವಿಲ್ಲ

ಭದ್ರತಾ ವೈಫಲ್ಯ ಬಯಲು: ಸ್ಫೋಟದ ಹಿನ್ನೆಲೆಯಲ್ಲಿ ಮೈಸೂರು ಅರಮನೆಯ ಭದ್ರತಾ ವ್ಯವಸ್ಥೆಯಲ್ಲಿನ ದೊಡ್ಡ ಕೊರತೆ ಕೂಡ ಬಯಲಾಗಿದೆ. ಸ್ಫೋಟ ಸಂಭವಿಸಿದ ಸ್ಥಳದ ಕೇವಲ 20 ಅಡಿ ದೂರದಲ್ಲೇ ಅಳವಡಿಸಲಾದ 360 ಡಿಗ್ರಿ ಸಿಸಿಟಿವಿ ಕ್ಯಾಮರಿಯಲ್ಲಿ ಸ್ಫೋಟದ ದೃಶ್ಯ ಸೆರೆಯಾಗಿಲ್ಲ ಎನ್ನುವುದು ಪೊಲೀಸರಿಗೆ ತಲೆನೋವಾಗಿಸಿದೆ. ವರ್ಷದಿಂದ ವರ್ಷಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ, ಅರಮನೆ ಸುತ್ತಮುತ್ತ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸುವ ಅಗತ್ಯವಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಅಮ್ಮ ಎಲ್ಲಿದ್ದೀಯಮ್ಮ…!: ಈ ದುರಂತದಲ್ಲಿ ಬೆಂಗಳೂರಿನ ಕಾಮಾಕ್ಷಿಪಾಳ್ಯದ ನಿವಾಸಿ ಲಕ್ಷ್ಮಿ ಕೂಡ ಸಾವನ್ನಪ್ಪಿದ್ದು, ಅವರ ನಾಲ್ಕನೇ ತರಗತಿಯಲ್ಲಿ ಓದುತ್ತಿರುವ ಪುತ್ರಿ ಡಿಂಪಲ್‌ನ ಆಕ್ರಂದನ ಕಲ್ಲು ಕರಗಿಸುವಂತಿದೆ. “ಅಮ್ಮ ಎಲ್ಲಿದ್ದೀಯಮ್ಮ, ಬೇಗ ಬಾರಮ್ಮ” ಎಂಬ ಮಗಳ ಅಳಲು ಹೃದಯವಿದ್ರಾವಕವಾಗಿದೆ. ಬಡ ಕುಟುಂಬದ ಆಸರೆಯಾಗಿದ್ದ ಲಕ್ಷ್ಮಿ ಸೀರೆ ಕುಚ್ಚುವ ಕೆಲಸ ಮಾಡಿ ಕುಟುಂಬ ಪೋಷಿಸುತ್ತಿದ್ದರು. ಇದೀಗ ಆ ಕುಟುಂಬದ ಭವಿಷ್ಯವೇ ಪ್ರಶ್ನಾರ್ಥಕವಾಗಿದೆ. ಸರ್ಕಾರವೇ ಡಿಂಪಲ್ ಶಿಕ್ಷಣದ ಜವಾಬ್ದಾರಿ ಹೊತ್ತುಕೊಳ್ಳಬೇಕು ಎಂದು ಕುಟುಂಬಸ್ಥರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಮಾನ್ಯಾ ಹತ್ಯೆ ಪ್ರಕರಣ: ಕರ್ತವ್ಯ ಲೋಪ, ಪಿಡಿಒ ಅಮಾನತು

ಸಾವಿನಲ್ಲಿಯೂ ಒಂದಾದ ಅಣ್ಣ–ತಂಗಿ: ಈ ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ನಂಜನಗೂಡಿನ ಚಾಮಲಾಪುರದ ನಿವಾಸಿ ಮಂಜುಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಮಂಜುಳ ಅಂತ್ಯಸಂಸ್ಕಾರದ ವೇಳೆ ಅವರ ಅಣ್ಣ ಪರಮೇಶ್ವರ್ ಅವರಿಗೆ ಹೃದಯಾಘಾತವಾಗಿದ್ದು, ಅವರು ಕೂಡ ಪ್ರಾಣಬಿಟ್ಟಿದ್ದಾರೆ. ಒಂದೇ ದಿನದಲ್ಲಿ ಅಣ್ಣ–ತಂಗಿಯನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.

ಅರಮನೆ ಮುಂಭಾಗ ನಡೆದ ಈ ಹೀಲಿಯಂ ಗ್ಯಾಸ್ ಸ್ಫೋಟ ಪ್ರಕರಣ ಹಲವು ಅನುಮಾನಗಳು, ಭದ್ರತಾ ವೈಫಲ್ಯ ಮತ್ತು ಅಮಾಯಕ ಜೀವಗಳ ಬಲಿದಾನದೊಂದಿಗೆ ರಾಜ್ಯಾದ್ಯಂತ ಆತಂಕ ಮೂಡಿಸಿದೆ. ಪೊಲೀಸರು ತನಿಖೆ ಪೂರ್ಣಗೊಳಿಸಿದ ಬಳಿಕವೇ ಈ ದುರಂತದ ಹಿಂದಿನ ನಿಜವಾದ ಸತ್ಯ ಬಹಿರಂಗವಾಗಲಿದೆ.

Previous articleಸಹಕಾರಿ ಕ್ಷೇತ್ರದ ಹಿರಿಯ ನಾಯಕ ಹಳೇಮನೆ ಶಿವನಂಜಪ್ಪ ನಿಧನ