ದಾಂಡೇಲಿ ಕಾಳಿ ಹುಲಿ ರಕ್ಷಿತಾರಣ್ಯದಲ್ಲಿ ಅರಣ್ಯ ಅಪರಾಧ ಪತ್ತೆಗೆ ಶ್ವಾನದಳ ಬಲವರ್ಧನೆ

0
25

ಶ್ವಾನದಳ ತಂಡಕ್ಕೆ ಸೇರ್ಪಡೆಯಾದ ‘ಅವನಿ’ ಮತ್ತು ‘ತಾರ’ರಿಂದ ಅಪರಾಧ ನಿಯಂತ್ರಣಕ್ಕೆ ಹೊಸ ಶಕ್ತಿ

ದಾಂಡೇಲಿ: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ವ್ಯಾಪ್ತಿಯಲ್ಲಿರುವ ಕಾಳಿ ಹುಲಿ ರಕ್ಷಿತಾರಣ್ಯದಲ್ಲಿ ಅರಣ್ಯ ಅಪರಾಧಗಳು ಹೆಚ್ಚುತ್ತಿರುವ ಹಿನ್ನೆಲೆ, ಅಪರಾಧ ಪತ್ತೆ ಹಾಗೂ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಶ್ವಾನದಳವನ್ನು ಬಲವರ್ಧನೆಗೊಳಿಸಿದೆ. ಮಾನವ ಮತ್ತು ಕಾಡುಪ್ರಾಣಿಗಳ ನಡುವಿನ ಸಂಘರ್ಷ, ಕಳ್ಳ ಬೇಟೆ, ಅಕ್ರಮ ಮರಕಟ್ಟೆ ಸಾಗಣೆ ಸೇರಿದಂತೆ ವಿವಿಧ ಅರಣ್ಯ ಅಪರಾಧಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಈ ಕ್ರಮ ಮಹತ್ವ ಪಡೆದುಕೊಂಡಿದೆ.

ಈವರೆಗೆ ಕಾಳಿ ಹುಲಿ ರಕ್ಷಿತಾರಣ್ಯದಲ್ಲಿ ಒಂದೇ ಶ್ವಾನದ ನೆರವಿನಿಂದ ಅಪರಾಧ ಪತ್ತೆ ಕಾರ್ಯ ನಡೆಯುತ್ತಿತ್ತು. ‘ಕ್ವೀಪರ್’ ಎಂಬ ಶ್ವಾನವು ಅರಣ್ಯ ಅಪರಾಧ ಪತ್ತೆಯಲ್ಲಿ ಮಹತ್ವದ ಪಾತ್ರವಹಿಸಿ, ಅನೇಕ ಪ್ರಕರಣಗಳನ್ನು ಬೆಳಕಿಗೆ ತಂದಿತ್ತು. ಆದರೆ ಈಗ 11 ವರ್ಷ ಪ್ರಾಯದ ಕ್ವೀಪರ್ ನಿವೃತ್ತಿಯ ಅಂಚಿನಲ್ಲಿರುವುದರಿಂದ, ಅದರ ಪರ್ಯಾಯವಾಗಿ ಬೆಲ್ಜಿಯಂ ಶೆಪರ್ಡ್ ಜಾತಿಯ ‘ಅವನಿ’ ಮತ್ತು ‘ತಾರ’ ಎಂಬ ಎರಡು ಹೊಸ ಶ್ವಾನಗಳನ್ನು ಶ್ವಾನದಳಕ್ಕೆ ಸೇರ್ಪಡೆಗೊಳಿಸಲಾಗಿದೆ.

ಇದನ್ನೂ ಓದಿ: KSDL-ಕೃಷಿ ಮಾರಾಟ ಇಲಾಖೆ ನೇಮಕಾತಿ ಪರೀಕ್ಷೆ ದಿನಾಂಕ ಬದಲಾವಣೆ

ಅಪರಾಧ ಪತ್ತೆಗೆ ಇನ್ನಷ್ಟು ಬಲ: ಹೊಸ ಶ್ವಾನಗಳ ಸೇರ್ಪಡೆಯಿಂದ ಅರಣ್ಯ ಅಪರಾಧಗಳ ಪತ್ತೆ ಕಾರ್ಯಕ್ಕೆ ಮತ್ತಷ್ಟು ಬಲ ದೊರೆತಿದ್ದು, ಅರಣ್ಯ ಸಿಬ್ಬಂದಿಗೆ ಆತ್ಮವಿಶ್ವಾಸ ಹೆಚ್ಚಾಗಿದೆ. ಈ ಶ್ವಾನಗಳು ವಾಸನೆ ಪತ್ತೆ, ಶೋಧ ಕಾರ್ಯ ಹಾಗೂ ಅಪರಾಧ ಸ್ಥಳದಿಂದ ಆರೋಪಿಗಳ ಪತ್ತೆಹಚ್ಚುವಲ್ಲಿ ಪರಿಣತಿ ಹೊಂದಿದ್ದು, ಮುಂದಿನ ದಿನಗಳಲ್ಲಿ ಕಳ್ಳ ಬೇಟೆಗಾರರು ಹಾಗೂ ಅಕ್ರಮ ಚಟುವಟಿಕೆಗಳ ಮೇಲೆ ಕಟ್ಟುನಿಟ್ಟಿನ ನಿಗಾವಹಿಸಲು ಸಹಕಾರಿಯಾಗಲಿವೆ.

ಶ್ವಾನದಳದ ತರಬೇತಿ ಮತ್ತು ನಿರ್ವಹಣೆ: ಈ ಶ್ವಾನದಳವನ್ನು ಕಾಳಿ ಹುಲಿ ರಕ್ಷಿತಾರಣ್ಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್. ಕಳ್ಳಿಮಠ ಅವರ ಮಾರ್ಗದರ್ಶನದಲ್ಲಿ ನಿರ್ವಹಿಸಲಾಗುತ್ತಿದೆ. ಡಿ.ಆರ್.ಎಫ್.ಓ. ವೆಂಕಟೇಶ, ಅಮೀನ್ ಸಾಬ್ ಹಾಗೂ ಅರಣ್ಯ ಸಿಬ್ಬಂದಿ ಶ್ವಾನಗಳ ಆರೈಕೆ, ತರಬೇತಿ ಮತ್ತು ಕಾರ್ಯಾಚರಣೆಗಳ ಜವಾಬ್ದಾರಿಯನ್ನು ಹೊತ್ತಿದ್ದಾರೆ.

ಇದನ್ನೂ ಓದಿ: ಮೊಟ್ಟೆಯಲ್ಲಿ ಕ್ಯಾನ್ಸರ್‌ಕಾರಕ ಅಂಶವಿಲ್ಲ

ಕಾಡು ಸಂರಕ್ಷಣೆಗೆ ಮಹತ್ವದ ಹೆಜ್ಜೆ: ಕಾಳಿ ಹುಲಿ ರಕ್ಷಿತಾರಣ್ಯವು ಜೀವವೈವಿಧ್ಯದಿಂದ ಸಮೃದ್ಧವಾಗಿದ್ದು, ಅರಣ್ಯ ಅಪರಾಧಗಳನ್ನು ನಿಯಂತ್ರಿಸುವುದು ಅರಣ್ಯ ಮತ್ತು ಕಾಡುಪ್ರಾಣಿಗಳ ಸಂರಕ್ಷಣೆಗೆ ಅತ್ಯಂತ ಅಗತ್ಯವಾಗಿದೆ. ಶ್ವಾನದಳ ಬಲವರ್ಧನೆಯಿಂದ ಅರಣ್ಯ ಅಪರಾಧಗಳ ಪತ್ತೆ ವೇಗವಾಗುವ ಜೊತೆಗೆ, ಅಪರಾಧಿಗಳಿಗೆ ಭಯದ ವಾತಾವರಣ ನಿರ್ಮಾಣವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

Previous articleಒಂದೇ ತಿಂಗಳಲ್ಲಿ ಫಲ ನೀಡಿದ ಮಹತ್ವಾಕಾಂಕ್ಷಿ ‘ಕ್ಷೀರ’ ಯೋಜನೆ