Home ನಮ್ಮ ಜಿಲ್ಲೆ ಧಾರವಾಡ ಬೆನ್ನು ಚಪ್ಪರಿಸುತ್ತಿದ್ದ ಶ್ರೇಷ್ಠ ಪತ್ರಕರ್ತ ಸುರೇಂದ್ರ ದಾನಿ

ಬೆನ್ನು ಚಪ್ಪರಿಸುತ್ತಿದ್ದ ಶ್ರೇಷ್ಠ ಪತ್ರಕರ್ತ ಸುರೇಂದ್ರ ದಾನಿ

0
35

ನನಗೂ ಸುರೇಂದ್ರ ದಾನಿ ಅವರಿಗೂ ಎಂದಿನಿಂದ ಸಂಪರ್ಕ ಬಂದಿತೆಂದು ಇಂದು 86ರ ಹೊಸ್ತಿಲಲ್ಲಿ ನಿಂತು ಖಚಿತವಾಗಿ ಹೇಳಲಾರೆ. 1962ರಲ್ಲಿ ಅಂದರೆ ಸುಮಾರು 60 ವರುಷಗಳಿಗಿಂತ ಅಧಿಕ ವರುಷಗಳ ಹಿಂದೆ ನಾನು ಬರೆಯಲು ಅಂಬೆಗಾಲಿಟ್ಟಂದಿನಿಂದ ಬಹುಶಃ ಸುರೇಂದ್ರ ದಾನಿ ಅವರ ಸಂಪರ್ಕ ಬಂದಿದೆ. ನನ್ನ ಮೊದಲ ಲೇಖನ 1962ರಲ್ಲಿ ಅಂದಿನ ಕರ್ಮವೀರ' ವಾರಪತ್ರಿಕೆಯಲ್ಲಿ ಪ್ರಕಟವಾಯಿತು. ಅಂದಿನಿಂದ ಇಂದಿನವರೆಗೂ ನನಗೆಸಂಯುಕ್ತ ಕರ್ನಾಟಕ’ ಬಳಗದ ಕಸ್ತೂರಿ',ಕರ್ಮವೀರ’ ಮತ್ತು `ಸಂಯುಕ್ತ ಕರ್ನಾಟಕ’ದ ಸಂಬಂಧ ಅನೂಚಾನವಾಗಿ ನಡೆದುಕೊಂಡುಬಂದಿದೆ. ಅದರೊಂದಿಗೆ ಸುರೇಂದ್ರ ದಾನಿ ಅವರು ಇರುವವರೆಗೂ ಸಂಪರ್ಕ ಇತ್ತು.

ಖಾದಿಧಾರಿಗಳಾದ ದಾನಿ ಅವರು ಮೊದಲ ನೋಟದಲ್ಲಿಯೇ ನನ್ನನ್ನು ಸೆಳೆದಿದ್ದರು. ಅಂತೆಯೇ ಅವರು ನನ್ನ ಅಣ್ಣನಾಗಿದ್ದರು. ನನ್ನ ಬರವಣಿಗೆಯ ಬಗ್ಗೆ ಆಗಾಗ ಸಲಹೆ ಸೂಚನೆಗಳನ್ನು ನೀಡಿ, ತಿದ್ದಿ, ತೀಡಿದರು. ಹೊಸಹೊಸ ವಿಷಯಗಳನ್ನು ಹೇಳಿ ಬರೆಯಿಸುತ್ತಿದ್ದರು. ನಾನಾಗ ಮುಂಬಯಿಯಲ್ಲಿ ನೌಕರಿ ಮಾಡುತ್ತಿದ್ದೆ. ಅವರು ಮುಂಬಯಿಗೂ ಬರುತ್ತಿದ್ದ ನೆನಪು ಮಸುಕುಮಸುಕಾಗಿದೆ. ಅಲ್ಲಿ ಅವರ ಸಮವಯಸ್ಕ ಡಾ. ಶ್ರೀನಿವಾಸ ಹಾವನೂರ ಇರುತ್ತಿದ್ದರು. ಗೆಳೆತನ ಇತ್ತು. ನಾನೂ ಅಲ್ಲಿಗೆ ಹೋಗುತ್ತಿದ್ದೆ. ಹನ್ನೊಂದು ವರುಷಗಳ ನಂತರ ನಾನು ಬೆಳಗಾವಿಗೆ ವರ್ಗವಾಗಿ ಬಂದೆ. ಯಾವಾಗಾದರೊಮ್ಮೆ ಹುಬ್ಬಳ್ಳಿಗೆ ಹೋದಾಗ ತಪ್ಪದೆ ದಾನಿ ಅವರ ಭೆಟ್ಟಿ ಆಗುತ್ತಿತ್ತು.

ಅಂದಿನ ದಿನಗಳಲ್ಲಿ ಅವರಿಗೆ ನಾಡಿನ ಅನೇಕ ರಾಜಕಾರಣಿಗಳು, ಲೇಖಕರು ಹತ್ತಿರದ ಸಂಪರ್ಕದಲ್ಲಿದ್ದರು. ನಗೆಸಾಹಿತಿ ಬೀಚಿ ಅವರಿಗೂ ದಾನಿ ಅವರಿಗೂ ಗೆಳೆತನ. ಬೀಚಿ ಅವರನ್ನು ಕಂಡಾಗ ದಾನಿ ಅವರ ಹೆಸರು ಬರದೆ ಇರುತ್ತಿರಲಿಲ್ಲ. ಹೀಗೆ ನಿರಂತರ ಅವರ ಒಡನಾಟ ಇತ್ತು. ನಾನು ವಿಜಾಪುರಕ್ಕೆ ವರ್ಗವಾಗಿ ಬರುವ ಹೊತ್ತಿಗೆ ಅವರು `ಸಂಯುಕ್ತ ಕರ್ನಾಟಕ’ದಿಂದ ನಿವೃತ್ತಿಯಾಗಿದ್ದರು. ಆದರೆ ನನ್ನ ಅವರ ಸಂಪರ್ಕ ತಪ್ಪಿರಲಿಲ್ಲ. ಆ ದಿನಗಳಲ್ಲಿ ಹುಟ್ಟಿದ ಕರ್ನಾಟಕ ಗಮಕ ಕಲಾ ಪರಿಷತ್ತಿನ ವಿಜಾಪುರ ಜಿಲ್ಲೆಯ ಪ್ರತಿನಿಧಿಯನ್ನಾಗಿ ನನ್ನನ್ನು ನೇಮಕ ಮಾಡಲು ಅವರ ಪಾತ್ರವಿತ್ತು. ಈ ನಿಮಿತ್ತ ಅನೇಕ ಕಾರ್ಯಕ್ರಮಗಳಲ್ಲಿ ಭೇಟಿಯಾಗುತ್ತಿತ್ತು.

ಇದನ್ನೂ ಓದಿ: ಅರುಣ್ ಯೋಗಿರಾಜ್ ಕೆತ್ತಿದ ಶಾಮನೂರು ಪುತ್ಥಳಿ ಅನಾವರಣ

ಸುರೇಂದ್ರ ದಾನಿ ಅವರಿಗೆ ಗದುಗಿನ ಕವಿ ಕುಮಾರವ್ಯಾಸನೆಂದರೆ ಅಚ್ಚುಮೆಚ್ಚು. ಅವರ ಬಾಯಿಯಿಂದ ಕುಮಾರವ್ಯಾಸ ಭಾರತದ ವ್ಯಾಖ್ಯಾನ ಕೇಳಬೇಕು. ಕಾವ್ಯವನ್ನು ಅರಗಿಸಿಕೊಂಡಿದ್ದರು. ಅನಂತರದ ದಿನಗಳಲ್ಲಿ ಕುಮಾರವ್ಯಾಸ ಭಾರತದ ಎಲ್ಲ ಪರ್ವಗಳನ್ನು ಸರಳಾನುವಾದ ರೂಪದಲ್ಲಿ ಹೊರತರಬೇಕೆಂಬ ಹಂಬಲ ಅವರಲ್ಲಿತ್ತು. ಪ್ರಾರಂಭದಲ್ಲಿ ವಿರಾಟ ಪರ್ವ ಪ್ರಕಟಿಸಿದರು. ಅದರ ಬಿಡುಗಡೆಗೆ ಕೋಳಿವಾಡಕ್ಕೆ ಹೋದ ನೆನಪು.

ವಿಜಾಪುರದಲ್ಲಿ ನೌಕರಿ ಮಾಡುತ್ತಿದ್ದಾಗ ದಾನಿ ಅವರು ನನ್ನ ಆಫೀಸಿಗೂ ಬಂದು ಭೆಟ್ಟಿಯಾದ ನೆನಪು. ಅವರು ಆಗ ಸಂಯುಕ್ತ ಕರ್ನಾಟಕದಿಂದ ನಿವೃತ್ತಿಯಾಗಿದ್ದರು. ಮರಾಠಿಯ ಸುಪ್ರಸಿದ್ಧ ಕೇಸರಿ ಪತ್ರಿಕೆಯ ಕನ್ನಡ ಆವೃತ್ತಿಯ `ಕೇಸರಿ ಗರ್ಜನೆ’ಯ ಸಂಪಾದಕರಾಗಿ ಒಂದು ಹೊಸ ಹೆಜ್ಜೆಯನ್ನು ಇಟ್ಟಿದ್ದರು. ಅದರಲ್ಲಿ ಅವರೇ ಹೇಳಿ ಬರೆಯಿಸಿದ ನನ್ನ ಲೇಖನಗಳನ್ನು ಪ್ರಕಟಿಸಿದ್ದರು.

ಒಂದು ಸಲ ಬಂದಾಗ ನಾನು ನಿವೃತ್ತಿ ಪಡೆದು ಕೇಸರಿ ಗರ್ಜನೆ ಸೇರಲು ಸೂಚನೆ ಕೊಟ್ಟಿದ್ದರು. ಸಂಸಾರದ ಬಂಧನದಲ್ಲಿ ಸಿಲುಕಿದ, ಜೊತೆಗೆ ನಿಗದಿತ ಆದಾಯದ ಕೇಂದ್ರ ಸರ್ಕಾರದ ನೌಕರಿಯಲ್ಲಿದ್ದ ನಾನು ಅವರ ಸೂಚನೆಯನ್ನು ಪಾಲಿಸಲು ಆಗಲಿಲ್ಲ. ಹಾಗೆ ದಿಢೀರೆಂದು ನಿರ್ಧಾರ ತೆಗೆದುಕೊಳ್ಳುವ ಜಾಯಮಾನವೂ ನನ್ನದಾಗಿರಲಿಲ್ಲ.

ಇದನ್ನೂ ಓದಿ: ಎಸ್ಸೆಸ್ ದಾವಣಗೆರೆಯ ಬ್ರಾಂಡ್ ಅಂಬಾಸಿಡರ್: ಎಸ್ಸೆಸ್ಸೆಂ ಶ್ಲಾಘನೆ

ಸರಳ, ಸಜ್ಜನ, ನವಿರು ಹಾಸ್ಯದ ಸುರೇಂದ್ರ ದಾನಿಯವರಂಥ ಪತ್ರಿಕೋದ್ಯೋಗಿಯನ್ನು ಇಂದು ಕಾಣುವುದು ಕಷ್ಟ. ಜೀವನದ ಕೆಲವು ಕಾಲ ಅವರೊಂದಿಗೆ ಒಡನಾಟ ಇಟ್ಟುಕೊಂಡದ್ದೇ ನನ್ನ ಒಂದು ಭಾಗ್ಯ. ಅವರು ಅಗಲಿದ ದಿನ ತುಂಬ ದುಃಖಪಟ್ಟಿದ್ದೆ. ಬೆನ್ನು ಚಪ್ಪರಿಸುತ್ತಿದ್ದ ಅಣ್ಣನನ್ನು ಕಳೆದುಕೊಂಡಂತಾಗಿತ್ತು. ಅವರ ನೆನಪು ನನ್ನೊಳಗೆ ಸದಾ ಹಸಿರು.

– ಕೃಷ್ಣ ಕೊಲ್ಹಾರ ಕುಲಕರ್ಣಿ,
ಹಿರಿಯ ಸಂಶೋಧಕರು