ದಾವಣಗೆರೆ: ಶಾಮನೂರು ಶಿವಶಂಕರಪ್ಪ. ಈ ದೇಶ ಕಂಡ ಅತ್ಯಂತ ಹಿರಿಯ ಶಾಸಕರಾಗಿದ್ದವರು. ಕಾಂಗ್ರೆಸ್ ಪಕ್ಷವಷ್ಟೇ ಅಲ್ಲ ಎಲ್ಲ ಪಕ್ಷಗಳಲ್ಲಿಯೂ ಅತ್ಯಂತ ಹಿರಿಯ ರಾಜಕೀಯ ಮುತ್ಸದ್ಧಿ. 93ನೇ ವಯಸ್ಸಿನಲ್ಲೂ ಚುನಾವಣಾ ಕಣಕ್ಕಿಳಿದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಗೆದ್ದು ಶಾಸಕರಾದವರು. ರಾಜ್ಯ ರಾಜಕಾರಣದಲ್ಲಿ ಸೋಲರಿಯದ ಸರದಾರ ಎಂಬ ಕೀರ್ತಿ ಹೊಂದಿದ್ದ ಈ ಯುಗ ಪುರುಷ ಇನ್ನು ನೆನಪು ಮಾತ್ರ. ಇಂದು ಅವರ ಪುತ್ಥಳಿ ಅನಾವರಣಗೊಳಿಸಲಾಯಿತು.
ಅರುಣ್ ಯೋಗಿರಾಜ್ ಕೆತ್ತಿದ ಪುತ್ಥಳಿ: ಅಯೋಧ್ಯೆಯ ರಾಮನನ್ನು ಕೆತ್ತಿದ್ದ ಅರುಣ್ ಯೋಗಿರಾಜ್, ಶಾಮನೂರು ಶಿವಶಂಕರಪ್ಪ ಅವರ ಪುತ್ಥಳಿಯನ್ನೂ ಕೆತ್ತಿದ್ದಾರೆ. ಈ ಪ್ರತಿಮೆ ಶುಕ್ರವಾರ ದಾವಣಗೆರೆಗೆ ಆಗಮಿಸಿತು. ಶಾಮನೂರು ಶಿವಶಂಕರಪ್ಪನವರು ನಿಧನ ಹೊಂದಿದಾಗ ಪುತ್ಥಳಿ ಮಾಡಿಕೊಡುವುದಾಗಿ ಅರುಣ್ ಯೋಗಿರಾಜ್ ಎರಡು ಬಾರಿ ಫೋನ್ ಮಾಡಿ ಹೇಳಿದ್ದರು. ಹಾಗಾಗಿ, ನಾವು ಒಪ್ಪಿದ್ದೆವು ಎಂದು ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದ್ದಾರೆ.
ಇದನ್ನೂ ಓದಿ: ಎಸ್ಸೆಸ್ ದಾವಣಗೆರೆಯ ಬ್ರಾಂಡ್ ಅಂಬಾಸಿಡರ್: ಎಸ್ಸೆಸ್ಸೆಂ ಶ್ಲಾಘನೆ
ಯುಗಪುರುಷ: ಅವರು ಇಳಿ ವಯಸ್ಸಿನಲ್ಲಿಯೂ ರಾಜಕೀಯ ಮಾಡಿದ ಮುತ್ಸದ್ಧಿ. ನಿಧನ ಹೊಂದುವ ಒಂದು ವಾರದ ಮುಂಚೆಯವರೆಗೂ ಅವರಿಗಿದ್ದ ಜ್ಞಾಪಕ ಶಕ್ತಿ ಎಲ್ಲರನ್ನೂ ಅಚ್ಚರಿ ಮೂಡಿಸಿತ್ತು. ಮಾತ್ರವಲ್ಲ, ಆಸ್ಪತ್ರೆಯಲ್ಲಿದ್ದರೂ ಬೇಳೆ, ಬೆಲ್ಲ, ಅಕ್ಕಿ ದರ ಕೇಳುತ್ತಿದ್ದರಷ್ಟೇ. ಅಲ್ಲದೇ ಎಷ್ಟಿದೆ ದಾಸ್ತಾನು ಎಂದೂ ಕೇಳುತ್ತಿದ್ದರು. ಅಷ್ಟು ಜ್ಞಾಪಕ ಶಕ್ತಿ ಹೊಂದಿದ್ದ ಯುಗಪುರುಷ ಅವರು. ಹೀಗಾಗಿ ಎಲ್ಲೆಲ್ಲೂ ಶಾಮನೂರು ಶಿವಶಂಕರಪ್ಪನವರ ಸ್ಮರಣೆ ನಡೆಯುತ್ತಿದೆ. ಅವರು ನೀಡಿದ ಕೊಡುಗೆ, ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ರಾಜಕೀಯ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಸೈ ಎನಿಸಿಕೊಂಡು ಎಲ್ಲರೊಂದಿಗೆ, ಎಲ್ಲರಿಗೂ ಬೇಕಾದವರಾಗಿ, ಪ್ರತಿಯೊಂದು ಸಮಾಜದವರೂ ಕೊಂಡಾಡುವ ಏಕೈಕ ವ್ಯಕ್ತಿಯಾಗಿ, 95 ವರ್ಷಗಳ ಸಾರ್ಥಕ ಬದುಕು ಸಾಗಿಸಿದವರು ಎಂದು ಗುಣಗಾನ ಮಾಡಲಾಗುತ್ತಿದೆ.





















