ದಾವಣಗೆರೆ: ದಾವಣಗೆರೆಯ ಬ್ರಾಂಡ್ ಅಂಬಾಸಿಡರ್ ಅಂತಲೇ ಕರೆಸಿಕೊಳ್ಳುತ್ತಿದ್ದ ನಮ್ಮ ತಂದೆಯ ಹೆಸರನ್ನು ಉಳಿಸಲು ನಾವೆಲ್ಲರೂ ಕಟಿಬದ್ಧರಾಗಿದ್ದೇವೆ ಎಂದು ಶಾಮನೂರು ಶಿವಶಂಕರಪ್ಪ ಅವರ ಪುತ್ರ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಭರವಸೆ ನೀಡಿದರು.
ದಾವಣಗೆರೆಯ ಕಲ್ಲೇಶ್ವರ ಮಿಲ್ ಹಿಂಭಾಗದಲ್ಲಿ ಆಯೋಜಿಸಲಾಗಿದ್ದ ದಿ. ಶಾಮನೂರು ಶಿವಶಂಕರಪ್ಪ ಅವರ ಕೈಲಾಸ ಶಿವಗಣಾರಾಧನೆಯಲ್ಲಿ ಅವರು ಮಾತನಾಡಿದರು.
ನಮ್ಮ ತಂದೆ ಶಾಮನೂರು ಅಪ್ಪನಂತೆ ಎಂದೂ ನಮಗೆ ಕಾಣದೆ, ಸ್ನೇಹಿತರಂತೆ ಇದ್ದರು ಎಸ್ಸೆಸ್ಸೆಲ್ಸಿ ಓದಿ. 18ನೇ ವಯಸ್ಸಿನಲ್ಲಿಯೇ ವ್ಯಾಪಾರದಿಂದ ವೃತ್ತಿ ಬದುಕು ಆರಂಭಿಸಿದ ನಮ್ಮ ತಂದೆಯವರು, ಅವರ ಚಿಕ್ಕಪ್ಪ ಶಿವಜ್ಜನವರ ಪ್ರೋತ್ಸಾಹದಂತೆ ನಗರಸಭೆಗೆ ಸ್ಪರ್ಧಿಸಿ ಗೆದ್ದರು. ನಂತರ ಬಾಪೂಜಿ ವಿದ್ಯಾಸಂಸ್ಥೆಯ ಆಡಳಿತ ಸದಸ್ಯರಾದರು. ಅವರು ಸದ್ಯರಾಗಿದ್ದ ಬಾಪೂಜಿ ಸಂಸ್ಥೆಯ ಈ 50 ವರ್ಷಗಳಲ್ಲಿ 65 ಅಂಗಸಂಸ್ಥೆಗಳನ್ನು ಕಟ್ಟಿಬೆಳೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಶ್ಲಾಘಿಸಿದರು.
ದಾವಣಗೆರೆಯಲ್ಲಿ 1992 ರಲ್ಲಿ ನಡೆದ ಕೋಮುಗಲಭೆಯಲ್ಲಿ ಮರಣವನ್ನಪ್ಪಿದ 18 ಜನ ಹುತಾತ್ಮರಿಗೂ 50 ಸಾವಿರ ಪರಿಹಾರ ಕೊಡಿಸಿದ್ದರು. ಅವರಿಗೆ ರಾಜಕೀಯ ಪ್ರವೇಶ ಮಾಡಬೇಕೆಂಬ ಬಯಕೆ ಇರಲಿಲ್ಲ. ಆದರೆ ಎಲ್ಲರ ಪ್ರೋತ್ಸಾಹದಿಂದ ವಿಧಾನಸಭಾ ಚುನಾವಣೆಯಲ್ಲಿ ಶಾಸಕರಾಗಿ ಗೆದ್ದು, ಎಲ್ಲರ ಮೆಚ್ಚುಗೆ ಗಳಿಸಿದರು. ಮಧ್ಯ ಕರ್ನಾಟಕದಲ್ಲಿ ಕಾಟನ್ ಉದ್ಯಮಗಳು ಮುಚ್ಚಿದಾಗ ವಿದ್ಯಾಸಂಸ್ಥೆ ಕಟ್ಟಿ ಬೆಳೆಸಿದರು. ಮ್ಯಾಂಚೆಸ್ಟರ್ ಆಗಿದ್ದ ದಾವಣಗೆರೆಯನ್ನ ಆಕ್ಸ್‌ಫರ್ಡ್ ಲೆವೆಲ್‌ಗೆ ಬೆಳೆಸಿದರು ಎಂದರು.
ನಮ್ಮ ತಂದೆ ಇಷ್ಟು ಬೆಳೆಯಲು, ಹೆಸರು ಮಾಡಲು ಅವರಿಗೆ ಸಿದ್ದವೀರಪ್ಪ, ಮುದೇಗೌಡ್ರು, ಕಾಸಲ್ ವಿಠಲ್ ಸೇರಿದಂತೆ ಅನೇಕರು ಪ್ರೋತ್ಸಾಹ ನೀಡಿದ್ದೇ ಕಾರಣ. ಇದರಿಂದಲೇ ಅವರು ಸಚಿವರು, ಶಾಸಕರು, ಸಂಸದರಾಗಿ ಸುದೀರ್ಘ ಸೇವೆ ಸಲ್ಲಿಸಿದ್ದಾರೆ ಎಂದು ನೆನೆದರು.
ಕೋವಿಡ್ ಸಮಯದಲ್ಲಿ 6 ಕೋಟಿ ಅನುದಾನದಲ್ಲಿ ಲಸಿಕೆ ನೀಡಲಾಯಿತು. ಒಟ್ಟಾರೆ ಜನಾನುರಾಗಿಯಾಗಿದ್ದ ನಮ್ಮತಂದೆ ಹ್ಯಾಪಿ ಲೈಫ್ ಲೀಡ್ ಮಾಡಿದ್ದಾರೆ. ದಾವಣಗೆರೆ ಬ್ರಾಂಡ್ ಅಂಬಾಸಿಡರ್ ಅಂತಲೇ ಕರೆಸಿಕೊಳ್ಳುತ್ತಿದ್ದರು ಎಂದರು.





















