ನವದೆಹಲಿ: ಕೇಂದ್ರ ರೈಲ್ವೆ ಸಚಿವಾಲಯವು ಡಿಸೆಂಬರ್ 21ರಂದು ಘೋಷಿಸಿದ್ದ ರೈಲು ಟಿಕೆಟ್ ದರ ಏರಿಕೆ ಇಂದಿನಿಂದ (ಶುಕ್ರವಾರ) ಜಾರಿಗೆ ಬಂದಿದೆ. 215 ಕಿಲೋಮೀಟರ್‌ಗಿಂತ ಹೆಚ್ಚು ದೂರದ ಪ್ರಯಾಣಗಳಿಗೆ ಅನ್ವಯವಾಗುವಂತೆ ಈ ಹೊಸ ದರವನ್ನು ಜಾರಿಗೊಳಿಸಲಾಗಿದೆ.
ಸಾಮಾನ್ಯ (ಆರ್ಡಿನರಿ) ರೈಲುಗಳಲ್ಲಿ ಪ್ರತಿ ಕಿಲೋಮೀಟರ್‌ಗೆ 1 ಪೈಸೆ, ಹಾಗೂ ಎಸಿ ಮತ್ತು ಎಸಿ ಇಲ್ಲದ ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳಲ್ಲಿ ಪ್ರತಿ ಕಿಲೋಮೀಟರ್‌ಗೆ 2 ಪೈಸೆಯಷ್ಟು ದರ ಹೆಚ್ಚಳ ಮಾಡಲಾಗಿದೆ. ಈ ದರ ಪರಿಷ್ಕರಣೆ ಅಲ್ಪ ಪ್ರಮಾಣದ ಏರಿಕೆಯಾಗಿದ್ದು, ಸಾಮಾನ್ಯ ಪ್ರಯಾಣಿಕರ ಮೇಲೆ ಅತಿಯಾದ ಹೊರೆ ಆಗದಂತೆ ನೋಡಿಕೊಳ್ಳಲಾಗಿದೆ ಎಂದು ರೈಲ್ವೆ ಸಚಿವಾಲಯ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಕುಡಚಿ – ಬಾಗಲಕೋಟೆ ರೈಲು ಮಾರ್ಗ ಹೋರಾಟ ಮತ್ತೇ ಚುರುಕು
ಗಮನಾರ್ಹ ವಿಷಯವೆಂದರೆ, ಒಂದು ವರ್ಷದೊಳಗೆ ರೈಲ್ವೆ ಟಿಕೆಟ್ ದರ ಹೆಚ್ಚಿಸಿರುವುದು ಇದು ಎರಡನೇ ಬಾರಿ. ಕಳೆದ ಜುಲೈ ತಿಂಗಳಲ್ಲಿಯೂ ದರ ಏರಿಕೆ ಜಾರಿಯಾಗಿತ್ತು. ಆದರೆ ಈ ಬಾರಿ ದರ ಏರಿಕೆ ಬಹಳ ಮಿತವಾಗಿದ್ದು, ಉದಾಹರಣೆಗೆ 500 ಕಿ.ಮೀ ದೂರದ ನಾನ್-ಎಸಿ ಪ್ರಯಾಣಕ್ಕೆ ಕೇವಲ 10 ರೂ. ಹೆಚ್ಚಳವಾಗಲಿದೆ. ಪಾಸ್ ಹೊಂದಿರುವ ಪ್ರಯಾಣಿಕರಿಗೆ ಈ ದರ ಏರಿಕೆಯ ಯಾವುದೇ ಪರಿಣಾಮ ಬೀರುವುದಿಲ್ಲ.
ಎರಡನೇ ದರ್ಜೆ (ಸೆಕೆಂಡ್ ಕ್ಲಾಸ್) ಪ್ರಯಾಣಿಕರ ಮೇಲೆ ಪರಿಣಾಮ
215 ಕಿ.ಮೀಗಿಂತ ಹೆಚ್ಚು ದೂರದ ಎರಡನೇ ದರ್ಜೆಯ ಸಾಮಾನ್ಯ ಪ್ರಯಾಣಕ್ಕೆ ದರಗಳನ್ನು ಸ್ಲ್ಯಾಬ್ ಆಧಾರದಲ್ಲಿ ಪರಿಷ್ಕರಿಸಲಾಗಿದೆ.
216–750 ಕಿ.ಮೀ: ₹5 ಹೆಚ್ಚಳ
751–1,250 ಕಿ.ಮೀ: ₹10 ಹೆಚ್ಚಳ
1,251–1,750 ಕಿ.ಮೀ: ₹15 ಹೆಚ್ಚಳ
1,751–2,250 ಕಿ.ಮೀ: ₹20 ಹೆಚ್ಚಳ
ಈ ಏರಿಕೆ ಅಲ್ಪಮಟ್ಟದಲ್ಲಿದ್ದು, ದೂರದ ಪ್ರಯಾಣಿಕರ ಮೇಲೆ ಮಾತ್ರ ಅನ್ವಯವಾಗಲಿದೆ.
ಸ್ಲೀಪರ್ ಮತ್ತು ಪ್ರಥಮ ದರ್ಜೆ (ಸಾಮಾನ್ಯ) ದರಗಳು: ಉಪನಗರವಲ್ಲದ ಪ್ರಯಾಣಗಳಿಗೆ ಸ್ಲೀಪರ್ ಕ್ಲಾಸ್ ಆರ್ಡಿನರಿ ಮತ್ತು ಫಸ್ಟ್ ಕ್ಲಾಸ್ ಆರ್ಡಿನರಿ ದರಗಳನ್ನು ಪ್ರತಿ ಕಿಲೋಮೀಟರ್‌ಗೆ 1 ಪೈಸೆಯಂತೆ ಏಕರೂಪವಾಗಿ ಪರಿಷ್ಕರಿಸಲಾಗಿದೆ. ಈ ಕ್ರಮವನ್ನು ರೈಲ್ವೆ ಸಚಿವಾಲಯ “ಕ್ರಮೇಣ ಮತ್ತು ಮಧ್ಯಮ ದರ ಏರಿಕೆ” ಎಂದು ವಿವರಿಸಿದೆ.
ಇದನ್ನೂ ಓದಿ: ‘ಡಿಜಿಟಲ್ ಡಿಟಾಕ್ಸ್’ಗೆ ಹಲಗಾ ಗ್ರಾಮಪಂಚಾಯತಿಯ ಮಾದರಿ ಹೆಜ್ಜೆ
ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳ ಮೇಲಿನ ಪರಿಣಾಮ: ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳಲ್ಲಿನ ಎಲ್ಲಾ ತರಗತಿಗಳಿಗೆ — ಸ್ಲೀಪರ್, ಫಸ್ಟ್ ಕ್ಲಾಸ್, ಎಸಿ ಚೇರ್ ಕಾರ್, ಎಸಿ 3-ಟೈರ್, ಎಸಿ 2-ಟೈರ್ ಹಾಗೂ ಎಸಿ ಫಸ್ಟ್ ಕ್ಲಾಸ್ — ಪ್ರತಿ ಕಿಲೋಮೀಟರ್‌ಗೆ 2 ಪೈಸೆಯಷ್ಟು ದರ ಹೆಚ್ಚಳ ಜಾರಿಯಾಗಿದೆ. ಉದಾಹರಣೆಗೆ, ಎಸಿ ಅಲ್ಲದ ಮೇಲ್ ಅಥವಾ ಎಕ್ಸ್‌ಪ್ರೆಸ್ ರೈಲಿನಲ್ಲಿ 500 ಕಿ.ಮೀ ಪ್ರಯಾಣಿಸುವವರಿಗೆ ಕೇವಲ ₹10 ಹೆಚ್ಚುವರಿ ವೆಚ್ಚ ಮಾತ್ರ ಬರುತ್ತದೆ ಎಂದು ಸಚಿವಾಲಯ ತಿಳಿಸಿದೆ.
ಈ ಪರಿಷ್ಕೃತ ದರಗಳು ರಾಜಧಾನಿ, ಶತಾಬ್ದಿ, ದುರಂತೋ, ವಂದೇ ಭಾರತ್, ತೇಜಸ್, ಗತಿಮಾನ್, ಹಮ್ಸಫರ್, ಅಮೃತ್ ಭಾರತ್, ಗರೀಬ್ ರಥ, ಅಂತ್ಯೋದಯ, ಜನ ಶತಾಬ್ದಿ, ಯುವ ಎಕ್ಸ್‌ಪ್ರೆಸ್ ಹಾಗೂ ನಮೋ ಭಾರತ್ ರಾಪಿಡ್ ರೈಲ್ ಸೇರಿ ಬಹುತೇಕ ಎಲ್ಲ ಪ್ರಮುಖ ರೈಲು ಸೇವೆಗಳಿಗೆ ಅನ್ವಯವಾಗಲಿವೆ.
ರೈಲ್ವೆ ಮೂಲಸೌಕರ್ಯ ಸುಧಾರಣೆ ಹಾಗೂ ಸೇವಾ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ಈ ದರ ಪರಿಷ್ಕರಣೆ ಮಾಡಲಾಗಿದೆ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ.





















