ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಬಳಿ ನಡೆದ ಭೀಕರ ಬಸ್ ಅಪಘಾತವು ಕೆಲವೇ ಕ್ಷಣಗಳಲ್ಲಿ ಭಯಾನಕ ದುರಂತವಾಗಿ ಮಾರ್ಪಟ್ಟರೂ, ಅದೃಷ್ಟವಶಾತ್ ಒಂದು ಕುಟುಂಬ ಸಾವಿನ ಬಾಯಿಂದ ಪಾರಾದ ಘಟನೆ ಹೃದಯ ಹಿಂಡುವಂತಿದೆ. ಈ ಅಪಘಾತದಲ್ಲಿ ಹೇಮರಾಜ್ ದಂಪತಿ ತಮ್ಮ 8 ವರ್ಷದ ಮಗುವಿನೊಂದಿಗೆ ಬಸ್‌ನ ಕಿಟಕಿಯಿಂದ ಹೊರಗೆ ಹಾರಿ ಜೀವ ಉಳಿಸಿಕೊಂಡಿದ್ದಾರೆ.
ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿರುವ ಹೇಮರಾಜ್ ಕುಟುಂಬ ಗೋಕರ್ಣಕ್ಕೆ ಪ್ರವಾಸಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಬಸ್ ಚಾಲಕನ ಹಿಂಬದಿಯ ಸೀಟ್‌ನಲ್ಲಿ ಮಲಗಿದ್ದ ವೇಳೆ ಏಕಾಏಕಿ ಬಸ್‌ನಲ್ಲಿ ಏನೋ ಬಿದ್ದಂತ ಅನುಭವವಾಗಿದೆ ಎಂದು ಹೇಮರಾಜ್ ದಂಪತಿ ಘಟನೆಯನ್ನು ವಿವರಿಸಿದ್ದಾರೆ. ತಕ್ಷಣ ಎದ್ದು ನೋಡಿದಾಗ ಬಸ್‌ನ ಹಿಂಭಾಗದಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಪ್ರಯಾಣಿಕರು ಕಿರುಚಾಡುತ್ತಾ ಜೀವ ಉಳಿಸಿಕೊಳ್ಳಲು ಹೊರಬರಲು ಯತ್ನಿಸುತ್ತಿದ್ದ ದೃಶ್ಯ ಕಂಡುಬಂದಿದೆ.
ಬಸ್‌ನೊಳಗೆ ಕೆಲವೇ ಕ್ಷಣಗಳಲ್ಲಿ ದಟ್ಟವಾದ ಹೊಗೆ ತುಂಬಿಕೊಂಡಿದ್ದು, ಸುಟ್ಟ ವಾಸನೆಯಿಂದ ಉಸಿರಾಡಲು ಸಹ ಕಷ್ಟವಾಗುತ್ತಿತ್ತು ಎಂದು ಅವರು ತಿಳಿಸಿದ್ದಾರೆ. ಬೆಂಕಿ ವೇಗವಾಗಿ ಹರಡುತ್ತಿದ್ದುದನ್ನು ಗಮನಿಸಿದ ಹೇಮರಾಜ್, ತಕ್ಷಣ ಬಸ್ಸಿನ ಕಿಟಕಿಯನ್ನು ಒಡೆದು ಮೊದಲು ತಮ್ಮ 8 ವರ್ಷದ ಮಗುವನ್ನು ಸುರಕ್ಷಿತವಾಗಿ ಕೆಳಗಿಳಿಸಿದರು. ಬಳಿಕ ದಂಪತಿಯೂ ಕಿಟಕಿಯಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ.
ಬಸ್‌ನಿಂದ ಹೊರಬಂದ ಕೆಲವೇ ಕ್ಷಣಗಳಲ್ಲಿ ಬಸ್‌ನಲ್ಲಿ ಭಾರೀ ಸ್ಫೋಟ ಸಂಭವಿಸಿದ್ದು, ಇದರಿಂದ ಅಪಾಯದ ಗಂಭೀರತೆ ಮತ್ತಷ್ಟು ಹೆಚ್ಚಿತು. ಸಮಯಕ್ಕೆ ಸರಿಯಾಗಿ ನಿರ್ಧಾರ ಕೈಗೊಂಡಿದ್ದರಿಂದಲೇ ತಮ್ಮ ಕುಟುಂಬ ಜೀವ ಉಳಿಸಿಕೊಂಡಿದೆ ಎಂದು ಹೇಮರಾಜ್ ದಂಪತಿ ಭಾವುಕರಾಗಿ ತಿಳಿಸಿದ್ದಾರೆ.
ಘಟನೆಯ ನಂತರ ದಂಪತಿ ಮತ್ತು ಮಗು ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿರುವ ತಮ್ಮ ನಿವಾಸಕ್ಕೆ ಮರಳಿದ್ದು, ಸದ್ಯ ವಿಶ್ರಾಂತಿ ಪಡೆಯುತ್ತಿದ್ದಾರೆ. ಈ ಅಪಘಾತವು ಸಾರ್ವಜನಿಕ ಸಾರಿಗೆಯ ಸುರಕ್ಷತೆ, ತುರ್ತು ಪರಿಸ್ಥಿತಿಗಳಲ್ಲಿ ಪ್ರಯಾಣಿಕರು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮತ್ತೊಮ್ಮೆ ಪ್ರಶ್ನೆಗಳನ್ನು ಎಬ್ಬಿಸಿದೆ.























