ಭಟ್ಕಳ: ಕ್ರಿಸ್‌ಮಸ್ ರಜೆ ಹಿನ್ನೆಲೆಯಲ್ಲಿ ಗೆಳತಿಯರೊಂದಿಗೆ ಗೋಕರ್ಣ ಪ್ರವಾಸಕ್ಕೆ ತೆರಳಿದ್ದ ಭಟ್ಕಳ ಮೂಲದ ಶಿರಾಲಿಯ ನಿವಾಸಿ ಬೆಂಗಳೂರಿಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ರಶ್ಮಿ ಮಹಾಲೆ ಅವರು ಭೀಕರ ಬಸ್ ದುರಂತದ ಬಳಿಕ ನಾಪತ್ತೆಯಾಗಿದ್ದಾರೆ.
ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ರಶ್ಮಿ, ಪ್ರವಾಸಕ್ಕಾಗಿ ಪಟ್ಟು ಹಿಡಿದು ರಜೆ ಪಡೆದು ಹೊರಟಿದ್ದರು ಎನ್ನಲಾಗಿದೆ. ನಾಲ್ಕು ದಿನಗಳ ಪ್ರವಾಸದ ಹಿನ್ನೆಲೆಯಲ್ಲಿ ರಶ್ಮಿ ಸೋಮವಾರದವರೆಗೆ ರಜೆ ನೀಡುವಂತೆ ತಮ್ಮ ಕಂಪನಿಯ ಮ್ಯಾನೇಜರ್ ಬಳಿ ಕೇಳಿದ್ದರು. ಮೊದಲು ರಜೆ ನೀಡಲು ನಿರಾಕರಿಸಿದ್ದ ಮ್ಯಾನೇಜರ್ ಬಳಿಕ ರಶ್ಮಿಯವರ ಒತ್ತಾಯದ ಮೇರೆಗೆ ರಜೆ ಮಂಜೂರು ಮಾಡಿದ್ದರು ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಹೊತ್ತಿ ಉರಿದ ಬಸ್, 18 ಮಂದಿ ಸಜೀವ ದಹನ
ಅದರಂತೆ ಬುಧವಾರ ಸಂಜೆ ತನ್ನ ಕಂಪನಿಯ ಕೆಲಸದ ಅವಧಿಯ ನಂತರ ತನ್ನ ಇಬ್ಬರು ಸ್ನೇಹಿತೆಯರೊಂದಿಗೆ ಗೋಕರ್ಣದತ್ತ ಪ್ರಯಾಣ ಬೆಳೆಸಿದ್ದರು. ಇದರಲ್ಲಿ ಇಬ್ಬರು ಯುವತಿಯರಾದ ಗಗನ ಮತ್ತು ರಕ್ಷಿತಾ ಗ್ರೇಟ್ ಎಸ್ಕೇಪ್ ಆಗಿದ್ದಾರೆನ್ನಲಾಗಿದ್ದು ಅವರೊಂದಿಗಿದ್ದ ರಶ್ಮಿ ಮಹಾಲೆ ಅವರು ಸಂಪರ್ಕಕ್ಕೇ ಸಿಗುತ್ತಿಲ್ಲ ಎನ್ನಲಾಗಿದೆ.
ರಶ್ಮಿ ಮೊಬೈಲ್ ಕೂಡಾ ಸ್ವಿಚ್ ಆಫ್ ಆಗಿದ್ದು, ಕುಟುಂಬ ತೀವ್ರ ಆತಂಕದಲ್ಲಿದೆ. ಅತ್ಯಂತ ಸಂತಸದಿಂದ ತನ್ನ ಗೆಳತಿಯರಿಗೆ ಗೋಕರ್ಣ, ಮುರ್ಡೇಶ್ವರದ ದರ್ಶನ ಮಾಡಿಸಿ ತಮ್ಮ ಮನೆಗೆ ಕರೆದುಕೊಂಡು ಬರಬೇಕು ಎನ್ನುವ ಆಸೆಯನ್ನಿಟ್ಟುಕೊಂಡು ಹೊರಟಿದ್ದ ರಶ್ಮಿಯವರೇ ಬಸ್ ದುರಂತದಿಂದಾಗಿ ಸಂಪರ್ಕಕ್ಕೆ ಸಿಗುತ್ತಿಲ್ಲ ಎನ್ನುವುದು ಅವರ ಕುಟುಂಬಕ್ಕಾದಷ್ಟೇ ದುಃಖ ಅವರೊಂದಿಗೆ ಬಂದ ಇಬ್ಬರು ಯುವತಿಯರದ್ದಾಗಿದೆ. ವಿಷಯ ತಿಳಿದ ತಕ್ಷಣ ಕುಟುಂಬಸ್ಥರು ಚಿತ್ರದುರ್ಗಕ್ಕೆ ಹೋಗಿದ್ದು ಇನ್ನಷ್ಟೇ ಸಂಪೂರ್ಣ ಮಾಹಿತಿ ದೊರೆಯಬೇಕಾಗಿದೆ.























