ದಾವಣಗೆರೆ: ಸ್ಲೀಪರ್ ಕೋಚ್ ಬಸ್‌ಗಳೇ ಹೆಚ್ಚು ಅಪಘಾತಕ್ಕೆ ಒಳಗಾಗುವುದರಿಂದ ಸುರಕ್ಷಿತ ಕ್ರಮಗಳ ಅಳವಡಿಕೆ ಜಾರಿಗೆ ತರಲು ಬಸ್‌ಗಳ ಮಾಲೀಕರಿಗೆ ರಾಜ್ಯ ಸರ್ಕಾರ ಸೂಚನೆ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದರು.
ದಾವಣಗೆರೆಯಲ್ಲಿ ಚಿತ್ರದುರ್ಗದ ಹಿರಿಯೂರು ಬಳಿ ನಡೆದ ಬಸ್ ಅಪಘಾತದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಹಿರಿಯೂರು ಬಳಿ ನಡೆದಿರುವ ಬಸ್ ದುರಂತ ನಿಜಕ್ಕೂ ಅತ್ಯಂತ ದುಃಖಕರ ವಿಷಯ. ಆ ಕುಟುಂಬಗಳಿಗೆ ಭಗವಂತ ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.
ರಾತ್ರಿ ಸಮಯದಲ್ಲಿ ವಾಹನ ಅಪಘಾತಗಳು ಹೆಚ್ಚಾಗುತ್ತವೆ. ಸ್ಲೀಪರ್ ಕೋಚ್ ಬಸ್‌ಗಳ ಮಾಲೀಕರೊಂದಿಗೆ ಸರ್ಕಾರ ಚರ್ಚೆ ನಡೆಸಿ, ಕೆಲವು ಸುರಕ್ಷತಾ ನಿಯಮಗಳನ್ನು ಜಾರಿಮಾಡಬೇಕು. ಆ ಮೂಲಕ ಪ್ರಯಾಣಿಕರ ಪ್ರಾಣ ರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ಕೊಡುವುದು ದೊಡ್ಡ ವಿಷಯವಲ್ಲ, ಆದರೆ, ಹೋದ ಜೀವ ಹಿಂಪಡೆಯಲು ಆಗಲ್ಲ. ಆದ್ದರಿಂದ ಸರ್ಕಾರ ಕೆಲವೊಂದು ನಿಯಮಾವಳಿ ಜಾರಿಗೆ ತರಲು ಸೂಚನೆ ನೀಡಬೇಕು ಎಂದರು.









