Home ನಮ್ಮ ಜಿಲ್ಲೆ ದಾವಣಗೆರೆ ಇಂಥ ಆರ್ಥಿಕ ತಜ್ಞರನ್ನು ಪ್ರಪಂಚದಲ್ಲಿ ನೋಡಿಲ್ಲ: CM ವಿರುದ್ಧ HDK ವ್ಯಂಗ್ಯ

ಇಂಥ ಆರ್ಥಿಕ ತಜ್ಞರನ್ನು ಪ್ರಪಂಚದಲ್ಲಿ ನೋಡಿಲ್ಲ: CM ವಿರುದ್ಧ HDK ವ್ಯಂಗ್ಯ

0
2

ದಾವಣಗೆರೆ: ಅಬಕಾರಿ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ತೆರಿಗೆ ಹೆಚ್ಚಳ ಮಾಡುವ ಮೂಲಕ ರಾಜ್ಯದ ಜನರ ಮೇಲೆ ನಿರಂತರ ಆರ್ಥಿಕ ಭಾರ ಹೇರಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದರು.

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ದೇಶದ ಆರ್ಥಿಕ ಅಭಿವೃದ್ಧಿಗಾಗಿ ಯಾವ ಕ್ಷೇತ್ರದ ಮೇಲೆ ಎಷ್ಟು ತೆರಿಗೆ ವಿಧಿಸಬೇಕು ಎಂಬುದರ ಬಗ್ಗೆ ಗಂಭೀರವಾಗಿ ಯೋಜನೆ ರೂಪಿಸುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ಮಾತ್ರ ಬಜೆಟ್ ಮೇಲೂ ಬಜೆಟ್ ಹಾಕಿ, ತೆರಿಗೆ ಹೆಚ್ಚಿಸುವುದನ್ನೇ ಆರ್ಥಿಕ ಸಾಧನೆಯಂತೆ ಪ್ರದರ್ಶಿಸಲಾಗುತ್ತಿದೆ. ಪ್ರಪಂಚದಲ್ಲಿಯೇ ಇಂಥ ಆರ್ಥಿಕ ತಜ್ಞರನ್ನು ಹುಡುಕಲು ಸಾಧ್ಯವಿಲ್ಲ” ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ: ಮಂಗನ ಕಾಯಿಲೆ ನಿಯಂತ್ರಣಕ್ಕೆ ಶಿರಸಿಯಲ್ಲಿ ಶೀಘ್ರವೇ ಹೊಸ ಪ್ರಯೋಗಾಲಯ

ರಾಜ್ಯದಲ್ಲಿ ಈಗಾಗಲೇ 16–17 ಬಾರಿ ಬಜೆಟ್‌ಗಳನ್ನು ಮಂಡಿಸಿದಂತಾಗಿದೆ ಎಂದು ಟೀಕಿಸಿದ ಅವರು, ಅಬಕಾರಿ ಪರವಾನಿಗೆ ದರವನ್ನು ₹1.95 ಕೋಟಿ ತನಕ ಹೆಚ್ಚಿಸಿರುವುದು ಜನವಿರೋಧಿ ಕ್ರಮವಾಗಿದೆ ಎಂದು ಹೇಳಿದರು. “ಜನರಿಗೆ ನೆರವಾಗಬೇಕಾದ ಸರ್ಕಾರ, ಜನರ ಜೇಬಿಗೆ ಕೈ ಹಾಕುತ್ತಿದೆ. ಇದು ಅಭಿವೃದ್ಧಿಯ ಮಾದರಿಯೇ?” ಎಂದು ಪ್ರಶ್ನಿಸಿದರು.

ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವ ನೆಪದಲ್ಲಿ ಎಲ್ಲ ತೆರಿಗೆಗಳು ಹಾಗೂ ಪರವಾನಿಗೆ ದರಗಳನ್ನು ಹೆಚ್ಚಿಸಿ ಜನರ ಮೇಲೆ ಹೊರೆ ಹಾಕಲಾಗುತ್ತಿದೆ ಎಂದು ಆರೋಪಿಸಿದ ಕುಮಾರಸ್ವಾಮಿ, “ಜನ ಸರ್ಕಾರ ನಡೆಸಿ ಅಂತ ಅಧಿಕಾರ ಕೊಟ್ಟಿದ್ದಾರೆ. ಆದರೆ ಇವರು ಜನರ ಸಮಸ್ಯೆಗಳ ಬಗ್ಗೆ ಚಿಂತಿಸದೆ ಕುರ್ಚಿಗಾಗಿ ಕಚ್ಚಾಡುತ್ತಿದ್ದಾರೆ. ಹೀಗೆ ಎಷ್ಟು ದಿನ ಸರ್ಕಾರ ನಡೆಯುತ್ತದೆ ನೋಡಬೇಕಿದೆ” ಎಂದು ಹೇಳಿದರು.

ಇದನ್ನೂ ಓದಿ: ‘ಡಿಜಿಟಲ್ ಡಿಟಾಕ್ಸ್’ಗೆ ಹಲಗಾ ಗ್ರಾಮಪಂಚಾಯತಿಯ ಮಾದರಿ ಹೆಜ್ಜೆ

ಇದು ಸಂಪೂರ್ಣವಾಗಿ ಲೂಟಿ ಸರ್ಕಾರ ಎಂದು ಕಿಡಿಕಾರಿದ ಅವರು, “ಒಬ್ಬ ಮುಖ್ಯಮಂತ್ರಿ ಮತ್ತು ಅವರೇ ಆರ್ಥಿಕ ಸಚಿವರೂ ಆಗಿರುವ ಸಿದ್ದರಾಮಯ್ಯ ಅವರ ಗಮನಕ್ಕೆ ಬಾರದೇ ಯಾವುದೇ ಹಣ ಬಿಡುಗಡೆ ಆಗಲು ಸಾಧ್ಯವೇ ಇಲ್ಲ. ಆದರೆ ಗೃಹಲಕ್ಷ್ಮೀ ಯೋಜನೆಯ ₹5,000 ಕೋಟಿ ಹಣದ ಮಾಹಿತಿ ಕೊರತೆ ಇದೆ ಎಂದು ಹೇಳುವ ಮುಖ್ಯಮಂತ್ರಿ ಆರ್ಥಿಕ ಇಲಾಖೆಯನ್ನು ಯಾವ ರೀತಿ ನಿರ್ವಹಿಸುತ್ತಿದ್ದಾರೆ?” ಎಂದು ತೀವ್ರವಾಗಿ ಪ್ರಶ್ನಿಸಿದರು.

ಇಡೀ ರಾಜ್ಯವನ್ನೇ ಲೂಟಿ ಮಾಡುವ ಸ್ಥಿತಿಯಲ್ಲಿ ಈ ಸರ್ಕಾರ ಎಸ್‌ಇಪಿ, ಎಸ್‌ಟಿಪಿ, ಗೃಹಲಕ್ಷ್ಮೀ ಸೇರಿದಂತೆ ವಿವಿಧ ಜನಪರ ಯೋಜನೆಗಳಿಗೆ ಬೇಕಾದ ಹಣವನ್ನು ಎಲ್ಲಿ ಒದಗಿಸುತ್ತದೆ ಎಂಬುದರ ಬಗ್ಗೆ ಸಂಶಯವಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ಸರ್ಕಾರದ ಆರ್ಥಿಕ ನೀತಿಗಳು ರಾಜ್ಯದ ಭವಿಷ್ಯಕ್ಕೆ ಅಪಾಯಕಾರಿಯಾಗಿದೆ ಎಂದು ಕುಮಾರಸ್ವಾಮಿ ಎಚ್ಚರಿಸಿದರು.