ಬೆಳಗಾವಿ: ಡಿಜಿಟಲ್ ಯುಗದಲ್ಲಿ ತಂತ್ರಜ್ಞಾನ ಬಳಕೆಯ ಮಧ್ಯೆಯೇ ಮಾನವೀಯ ಮೌಲ್ಯಗಳು, ಸಾಮಾಜಿಕ ಸಂಬಂಧಗಳು ಮತ್ತು ಕುಟುಂಬದ ಒಡನಾಟವನ್ನು ಉಳಿಸಿಕೊಳ್ಳುವ ದಿಕ್ಕಿನಲ್ಲಿ ಬೆಳಗಾವಿ ಜಿಲ್ಲೆಯ ಹಲಗಾ ಗ್ರಾಮಪಂಚಾಯತಿ ಕೈಗೊಂಡಿರುವ ‘ಡಿಜಿಟಲ್ ಡಿಟಾಕ್ಸ್’ ಪ್ರಯತ್ನ ಮಾದರಿಯಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಶ್ಲಾಘಿಸಿದ್ದಾರೆ.
ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಸಚಿವರು, ಆಧುನಿಕತೆ ಮತ್ತು ಡಿಜಿಟಲೀಕರಣ ಬೆಳೆದಂತೆ ಜನರ ಜೀವನಶೈಲಿ ಹಾಗೂ ಸಾಮಾಜಿಕ ಬದುಕಿನಲ್ಲಿ ವ್ಯಾಪಕ ಬದಲಾವಣೆಗಳು ಆಗುತ್ತಿರುವುದನ್ನು ಉಲ್ಲೇಖಿಸಿದ್ದಾರೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಡಿಜಿಟಲೀಕರಣ ಮತ್ತು ಸಾಮಾಜಿಕ ಮೌಲ್ಯಗಳು ಜೊತೆಯಾಗಿ ಸಾಗಬೇಕಾದ ಅವಶ್ಯಕತೆ ಇದೆ. ಇವೆರಡರಲ್ಲಿ ಯಾವುದನ್ನಾದರೂ ಕಡೆಗಣಿಸಿದರೆ, ಭವಿಷ್ಯ ರೂಪಿಸುವ ಹಾದಿಯೇ ಮಸುಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಚಿತ್ರದುರ್ಗ ಬಸ್ ದುರಂತ: ಪಿಎಂ, ಸಿಎಂ ಸಂತಾಪ
ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆ – ದೊಡ್ಡ ಸವಾಲು: ಇತ್ತೀಚಿನ ದಿನಗಳಲ್ಲಿ ಹದಿಹರೆಯದ ಮಕ್ಕಳು ಮತ್ತು ಯುವಜನರು ಮಿತಿಮೀರಿದಂತೆ ಸಾಮಾಜಿಕ ಜಾಲತಾಣಗಳು ಹಾಗೂ ಗ್ಯಾಜೆಟ್‌ಗಳಿಗೆ ಅಂಟಿಕೊಂಡಿರುವುದು ಗಂಭೀರ ಸಮಸ್ಯೆಯಾಗಿದೆ. ಬಾಹ್ಯ ಜಗತ್ತಿನ ಅರಿವು ಇಲ್ಲದಂತೆ ಡಿಜಿಟಲ್ ಲೋಕದಲ್ಲೇ ಮುಳುಗುವುದರಿಂದ ಮಕ್ಕಳಲ್ಲಿ ಓದುವ ಆಸಕ್ತಿ ಕಡಿಮೆಯಾಗುತ್ತಿದೆ. ಅಲ್ಲದೆ, ಯುವಜನರು ಮಾತ್ರವಲ್ಲದೆ ಹಿರಿಯರೂ ಸಾಮಾಜಿಕ ಒಡನಾಟಗಳಿಂದ ದೂರವಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಸಚಿವರು ಹೇಳಿದ್ದಾರೆ.
ಸಂಜೆ 7ಕ್ಕೆ ಸೈರನ್ – ಓದು ಮತ್ತು ಒಡನಾಟಕ್ಕೆ ಸಮಯ: ಈ ಸಮಸ್ಯೆಗೆ ಪರಿಹಾರವಾಗಿ ಹಲಗಾ ಗ್ರಾಮಪಂಚಾಯತಿ ಕೈಗೊಂಡಿರುವ ಕ್ರಮ ನಿಜಕ್ಕೂ ಶ್ಲಾಘನೀಯವಾಗಿದೆ. ಈ ಗ್ರಾಮಪಂಚಾಯತಿಯಲ್ಲಿ ಪ್ರತಿ ದಿನ ಸಂಜೆ 7 ಗಂಟೆಗೆ ಸೈರನ್ ಮೊಳಗಿಸಲಾಗುತ್ತದೆ. ಸೈರನ್ ನಂತರ ಮಕ್ಕಳಿಗೆ ಪಠ್ಯ ಪುಸ್ತಕಗಳ ಅಧ್ಯಯನ ಕಡ್ಡಾಯ ಮಾಡಲಾಗಿದೆ.
ಇದನ್ನೂ ಓದಿ: ಮಂಗನ ಕಾಯಿಲೆ ನಿಯಂತ್ರಣಕ್ಕೆ ಶಿರಸಿಯಲ್ಲಿ ಶೀಘ್ರವೇ ಹೊಸ ಪ್ರಯೋಗಾಲಯ
ಈ ವೇಳೆ ಪೋಷಕರು ಕೂಡ ಟೆಲಿವಿಷನ್‌ಗಳನ್ನು ಬಂದ್ ಮಾಡಿ ಮಕ್ಕಳ ಓದು, ಸಾಮಾಜಿಕ ಚಟುವಟಿಕೆಗಳು, ಸಾಂಸ್ಕೃತಿಕ ಸಂವಾದಗಳಲ್ಲಿ ಭಾಗಿಯಾಗುತ್ತಾರೆ. ಇದರಿಂದ ಕುಟುಂಬದೊಳಗಿನ ಸಂವಹನ ಹೆಚ್ಚಾಗುವುದರ ಜೊತೆಗೆ, ಮಕ್ಕಳ ಶೈಕ್ಷಣಿಕ ಬೆಳವಣಿಗೆಗೂ ಸಹಕಾರಿಯಾಗುತ್ತಿದೆ.
ಮೊಬೈಲ್–ಟಿವಿಗೆ ವಿರಾಮ, ಬಾಂಧವ್ಯಕ್ಕೆ ಬಲ: ಈ ಕ್ರಮವು ಮೊಬೈಲ್ ಫೋನ್ ಮತ್ತು ಟಿವಿ ಬಳಕೆಗೆ ನಿಯಂತ್ರಣ ತರುವುದರ ಜೊತೆಗೆ, ಜನರ ನಡುವೆ ಪರಸ್ಪರ ಬಾಂಧವ್ಯ, ಸಾಮಾಜಿಕ ಸಂಪರ್ಕ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಬಲಪಡಿಸಲು ಸಹಕಾರಿಯಾಗಿದೆ. ತಂತ್ರಜ್ಞಾನವನ್ನು ಸಂಪೂರ್ಣ ತಿರಸ್ಕರಿಸದೇ, ಅದರ ಅತಿಯಾದ ಬಳಕೆಯನ್ನು ನಿಯಂತ್ರಿಸುವ ಮೂಲಕ ಸಮಾಜವನ್ನು ಸಮತೋಲನದ ದಾರಿಯಲ್ಲಿ ಕೊಂಡೊಯ್ಯುವ ಪ್ರಯತ್ನ ಇದಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ.
ಸಾಮಾಜಿಕ ಜವಾಬ್ದಾರಿಯ ನೆನಪು: ತಂತ್ರಜ್ಞಾನದ ಲಾಭಗಳನ್ನು ಸದುಪಯೋಗಪಡಿಸಿಕೊಳ್ಳುವ ಜೊತೆಗೆ ನಮ್ಮ ಸಾಮಾಜಿಕ ಜವಾಬ್ದಾರಿಗಳನ್ನು ಮರೆಯಬಾರದು ಎಂಬ ಸಂದೇಶವನ್ನು ಹಲಗಾ ಗ್ರಾಮಪಂಚಾಯತಿ ಸಮಾಜಕ್ಕೆ ನೀಡುತ್ತಿದೆ. ಈ ವಿನೂತನ ಪ್ರಯತ್ನ ಇತರ ಗ್ರಾಮ ಪಂಚಾಯಿತಿಗಳಿಗೆ ಕೂಡ ಮಾದರಿಯಾಗಬೇಕು ಎಂದು ಸಚಿವರು ಆಶಿಸಿದ್ದಾರೆ.























