ಅಂಕಣ ಬರಹ: ಸಾಮಾಜಿಕ ಬಹಿಷ್ಕಾರ… ಬಿತ್ತು ಕ್ರಾಂತಿಕಾರಕ ಪ್ರಹಾರ!

0
2

ಗುರುವಾರ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಮೋಹನ ಹೆಗಡೆ ಅವರ ಅಂಕಣ

ಖಂಡಿತವಾಗಿಯೂ ಇದು ಕ್ರಾಂತಿಕಾರಕ ನಿರ್ಧಾರ. ರಾಜ್ಯದಲ್ಲಿ `ಸಾಮಾಜಿಕ ಮತ್ತು ಸಾರ್ವಜನಿಕ ನಿಷೇಧ’ ಕಾಯ್ದೆಯನ್ನು ಬೆಳಗಾವಿ ಅಧಿವೇಶನದಲ್ಲಿ ಮಂಡಿಸಿ, ಸರ್ವಾನುಮತದ ಒಪ್ಪಿಗೆ ಪಡೆದಿರುವ ಮತ್ತು ಅದನ್ನು ಜಾರಿಗೊಳಿಸುವ ದಿಟ್ಟತನ ತೋರುತ್ತೇವೆ ಎಂದು ಇಚ್ಛಾಶಕ್ತಿ ಪ್ರದರ್ಶಿಸುವುದು ಇದೆಯಲ್ಲ ಅದು ಸಣ್ಣ ವಿಷಯವಲ್ಲ. ಇತ್ತೀಚಿನ ವರ್ಷಗಳಲ್ಲಿ ರಾಜ್ಯ ಸರ್ಕಾರ ಸರ್ವಸಮ್ಮತಿಯಿಂದ ತಂದ ಕಾಯ್ದೆ ಹಾಗೂ ಕ್ರಮ ಇದು.

ಆದರೆ ಹಿಂದಿನ ಸರ್ಕಾರಗಳು ಈ ರೀತಿಯ ಯೋಚನೆ- ಯೋಜನೆಯನ್ನೇ ಹಾಕಲಿಲ್ಲ. ಹಾಗಂತ ಸಾಮಾಜಿಕ ಬಹಿಷ್ಕಾರದಂತಹ ದರಿದ್ರ ಮತ್ತು ಕ್ರೂರ ಪದ್ಧತಿಯನ್ನು ಅಳಸಿ ಹಾಕಿ ಎನ್ನುವ ಕೂಗು ಸರ್ವತ್ರವಾಗಿ ಹಲವಾರು ವರ್ಷಗಳಿಂದ ಇದೆ. ಪ್ರಜ್ಞಾವಂತ ಸಮಾಜದ ಎಲ್ಲರಿಂದ ಒತ್ತಡ ಇದ್ದೇ ಇತ್ತು.

ಇದಕ್ಕೆ ಬದ್ಧತೆ ಬಂದದ್ದು ಈಗ. ಇದು ಅನುಷ್ಠಾನಗೊಂಡರೆ 1978ರಲ್ಲಿ ದೇವರಾಜ ಅರಸು ಜಾರಿಗೆ ತಂದ `ಉಳುವವನೇ ಭೂ ಒಡೆಯ’ ಕ್ರಾಂತಿಕಾರಕ ದಿಟ್ಟ ಹೆಜ್ಜೆಯಂತೆಯೇ ಆಗಲಿದೆ. ಸಾಮಾಜಿಕ, ಸಾಂಸ್ಥಿಕ, ಸಾರ್ವಜನಿಕ ಬದುಕಿನಲ್ಲಿ ಕಟ್ಟಕಡೆಯ ವ್ಯಕ್ತಿಗೂ ಬದುಕು ಸ್ಥೈರ್ಯ- ಧೈರ್ಯ ನೀಡಲಿದೆ.

ಉಳುವವನೇ ಭೂ ಒಡೆಯ ಎಂಬ ಕಾಯ್ದೆ ತಂದು ಇಡೀ ದೇಶದಲ್ಲಿಯೇ ಐತಿಹಾಸಿಕ ಸಂಚಲನ ಮೂಡಿಸಿದ ಹಾಗೂ ರಚನಾತ್ಮಕ ಸುಧಾರಣಾ ಕ್ರಮಕ್ಕೆ ಮುನ್ನುಡಿ ಬರೆದವರು ದೇವರಾಜ ಅರಸು. ಅಂದಿನ ಪರಿಸ್ಥಿತಿಯಲ್ಲಿ ಸಮ ಸಮಾಜದ ನಿರ್ಮಾಣ, ಗೇಣಿ ಪದ್ಧತಿ ನಿರ್ಮೂಲನೆ ಎಲ್ಲವನ್ನೂ ಕೂಡ ಸಾಧಿಸಿಬಿಟ್ಟರು. ಇನ್ನೂ ಹತ್ತಾರು ತೊಡಕುಗಳು ಆ ಕಾಯ್ದೆಯಲ್ಲಿವೆ. ಆದರೂ ಅದರ ಫಲ ಸಿಹಿಯಾಗಿಯೇ ಇದೆ.

ಅರಸು ನಂತರ ಸಮಾಜಮುಖಿ ಯೋಚನೆ ಘನೀಭೂತವಾಗಿ ಹಾಗೂ ನಿರ್ಣಾಯಕವಾಗಿ ಕಾಣುವಂತಾಗಿರುವ ಪ್ರಮುಖ ಕಾಯ್ದೆ ಇದೆಂದರೆ ತಪ್ಪಾಗದು. ಸಾಮಾಜಿಕ ಬಹಿಷ್ಕಾರ ಎಂಬುದು ಜಾತಿ ವ್ಯವಸ್ಥೆಯ ಭಾಗ. ಅಷ್ಟೇ ಅಲ್ಲದೇ, ಹಳ್ಳಿಗಳಲ್ಲಿ, ನಗರಗಳಲ್ಲಿ ಇಂದಿಗೂ ಮುಗುಂ ಆಗಿ, ಕೆಲವೆಡೆ ಬಹಿರಂಗವಾಗಿ ಜೀವಂತ ಇರುವ ಅನಿಷ್ಟ. 2024ರ ಡಿಸೆಂಬರ್‌ನಲ್ಲಿ ಮುಖ್ಯಮಂತ್ರಿ ಹುಟ್ಟೂರು ಸಿದ್ದರಾಮಯ್ಯನ ಹುಂಡಿಯ ಬಳಿಯೇ ಇರುವ ಶ್ರೀನಿವಾಸಪುರದಲ್ಲಿ ದಲಿತ ಕುಟುಂಬಕ್ಕೆ ಅದೇ ಊರಿನ ಮುಖಂಡರಾದ ಚಿಕ್ಕಣ್ಣಯ್ಯ, ಮಹದೇವಯ್ಯ ಅವರು ಪಂಚಾಯ್ತಿಯಿಂದ ಬಹಿಷ್ಕಾರ ಹಾಕಿದ ಆರೋಪ ಬಂತು. ಬಹಿಷ್ಕೃತ ಕುಟುಂಬಕ್ಕೆ ಹದಿನೈದು ಸಾವಿರ ರೂಪಾಯಿ ದಂಡ ಪಾವತಿಸಲು ನಿರಾಕರಿಸಿರುವುದಕ್ಕೆ ಈ ಬಹಿಷ್ಕಾರ ಎಂದು ಸಾರಲಾಯಿತು. ಗ್ರಾಮದ ಹಿರಿಯರು ಸೇರಿ ನಡೆಸಿದ ಬಹಿಷ್ಕಾರ ಪ್ರಕ್ರಿಯೆ ಮುಖ್ಯಮಂತ್ರಿಗಳನ್ನೇ ಆಗ ಮುಜುಗರಕ್ಕೆ ಒಳಪಡಿಸಿತ್ತು. ಈ ಕುಟುಂಬಗಳಿಗೆ ದೈನಂದಿನ ವಸ್ತುಗಳನ್ನು ಮಾರದಂತೆ, ಮಕ್ಕಳಿಗೆ ನೋಟ್ ಪುಸ್ತಕ ಇತ್ಯಾದಿ ಕೊಡದಂತೆ ಕಟ್ಟಪ್ಪಣೆ ಗ್ರಾಮಸ್ಥರಿಗೆ ವಹಿಸಲಾಗಿತ್ತು!

ಕೆಲ ತಿಂಗಳ ಹಿಂದೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಕ್ಷೇತ್ರದಲ್ಲಿ, ಅವರದ್ದೇ ಸಮಾಜದ ತಾಯಿ ಮತ್ತು ಮಗಳು ಸಾಮಾಜಿಕ ಬಹಿಷ್ಕಾರಕ್ಕೆ ಗುರಿಯಾಗಿದ್ದರು. ಆ ಕುಟುಂಬದ ಮೊದಲ ಮಗ ಕೊಲೆ ಪ್ರಕರಣದಲ್ಲಿ ಅಪರಾಧಿ ಎಂದು ನ್ಯಾಯಾಲಯ ತೀರ್ಪು ನೀಡಿದ ನಂತರ ತಾಯಿ- ಮಗಳಿಗೆ ಬಹಿಷ್ಕಾರ ಹಾಕಲಾಗಿತ್ತು.

ಸುಮಾರು 60 ಕುಟುಂಬಗಳು ನಮ್ಮನ್ನು ಬಹಿಷ್ಕರಿಸಿವೆ. ನಮಗೆ ಕೆಲಸ, ಸಹಕಾರ, ನೀರು, ವಿದ್ಯುತ್ ಎಲ್ಲವನ್ನೂ ಕಡಿತಗೊಳಿಸಲಾಗಿದೆ ಎಂದು ಮಹಿಳೆ ಮತ್ತು ಮಗಳು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು. ಮೊನ್ನೆ ಮೊನ್ನೆ ಕಲಘಟಗಿ ತಾಲ್ಲೂಕಿನ ಕುಟುಂಬವೊಂದಕ್ಕೆ ಇದೇ ರೀತಿಯ ಸಾಮಾಜಿಕ ಬಹಿಷ್ಕಾರವನ್ನು ವಿಧಿಸಲಾಗಿತ್ತು. ಇವು ಬೆಳಕಿಗೆ ಬಂದ ಘಟನೆಗಳಷ್ಟೇ. ಒಳಗೊಳಗೇ ನಡೆದವು ಇನ್ನೆಷ್ಟೋ!?

ಸಂಪ್ರದಾಯಗಳು, ಜಾತಿ ಮತ್ತು ಧರ್ಮದ ಹೆಸರಿನಲ್ಲಿ ದೌರ್ಜನ್ಯ ಸ್ವರೂಪವೇ ಸಾಮಾಜಿಕ ಬಹಿಷ್ಕಾರ. ದುರಂತ ಎಂದರೆ, ಇದಕ್ಕೆ ಸಮುದಾಯ ಪಂಚಾಯ್ತಿಗಳು, ಸ್ಥಳೀಯ ಧಾರ್ಮಿಕ ಪ್ರಮುಖರು ಬೆಂಬಲ ನೀಡುವುದು, ಪ್ರಭುತ್ವ ಮೆರೆಯುವ ಹುನ್ನಾರದಿಂದಲೇ. ನಿಮ್ನರು, ಅಸಹಾಯಕರ ಮೇಲೆ ದಬ್ಬಾಳಿಕೆಯ ತಂತ್ರಗಾರಿಕೆಯನ್ನು ಬಲಾಢ್ಯರು ಅನುಸರಿಸುತ್ತಿರುವುದು ಹಾಗೂ ಬಲಾಢ್ಯರಿಂದಲೇ ಸಾಮಾಜಿಕ ಬಹಿಷ್ಕಾರ ಜೀವಂತ ಇರುವುದು ಸ್ಪಷ್ಟ.

ಇಡೀ ಕಲ್ಯಾಣ ಕರ್ನಾಟಕ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಇಂತಹ ಸಾಮಾಜಿಕ ಬಹಿಷ್ಕಾರಗಳು ತುಸು ಹೆಚ್ಚಿದ್ದರೂ, ಚಾಮರಾಜನಗರ, ಮೈಸೂರು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಂತಹ ಬುದ್ಧಿವಂತರು, ಸುಧಾರಿತ ಸಮಾಜ ಇರುವ ಜಿಲ್ಲೆಗಳಲ್ಲೂ ಇದು ಸಾಕಷ್ಟು ಬೇರೂರಿದೆ.

ವಿಧಾನ ಸಭೆಯಲ್ಲಿ ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ಮಸೂದೆ ಮಂಡಿಸಿದಾಗ, ಪ್ರತಿಪಕ್ಷ ನಾಯಕರೇ ವ್ಯಕ್ತಿ ಆಧಾರಿತವಾಗಿ ಟೀಕಿಸುವ ಪ್ರವೃತ್ತಿ ಎಲ್ಲೆಡೆ ಇದೆ; ಸೇವೆ- ವ್ಯಾಪಾರ ಹಾಗೂ ವಹಿವಾಟು ನಿಷೇಧಿಸುವುದು ಕಾನೂನು ಪ್ರಕಾರ ಅಪರಾಧ; ಆದರೂ ಈ ಅನಿಷ್ಟ ನಡೆಯುತ್ತಲೇ ಇದೆ. ಆದ್ದರಿಂದ ಇರುವ ಕಾನೂನಿನ ಜೊತೆಗೆ ಇಂಥದ್ದೊಂದು ಪ್ರತ್ಯೇಕ ಕಾಯ್ದೆಯ ಅವಶ್ಯಕತೆಯೂ ಇತ್ತು ಎಂದು ಸ್ವಾಗತಿಸಿದರು!

ವಾಸ್ತವವಾಗಿ ಗ್ರಾಮ ಮಟ್ಟದಲ್ಲಿ ಈ ಬಹಿಷ್ಕಾರ ಒಬ್ಬರಿಗೆ ಮಾತ್ರ ಸೀಮಿತವಾಗಿಲ್ಲ ಇನ್ನೂ ಹಲವು ವರ್ಗಗಳ ಜನರಿಗೆ ದೇವಾಲಯ ಪ್ರವೇಶ ನಿಷೇಧ, ಕ್ಷೌರದ ಅಂಗಡಿಗೆ ನಿಷೇಧ, ಶಿಕ್ಷಣ ದೊರೆಯದೇ ಇರುವುದು, ಅಂಗಡಿಗಳಿಂದ ದೂರ ಇಡುವುದು ಎಲ್ಲವೂ ನಡೆದಿತ್ತು. ಇಂಥ ಅಮಾಯಕರಿಗೆ ರಕ್ಷಣೆ ನೀಡುವ ಶಾಸನ ಬೇಕಿತ್ತು.

ಕರ್ನಾಟಕದ ಈ ಕಾಯ್ದೆಯನ್ನು ಕೇಂದ್ರ ಸರ್ಕಾರ ಯಥಾವತ್ತಾಗಿ ಅಳವಡಿಸಿಕೊಳ್ಳಬೇಕು. ಏಕೆಂದರೆ ಉತ್ತರಾಖಂಡ, ರಾಜಸ್ಥಾನ, ಮಧ್ಯಪ್ರದೇಶ ಮೊದಲಾದ ಉತ್ತರದ ರಾಜ್ಯಗಳಲ್ಲಿ ಸಾಮಾಜಿಕ ಬಹಿಷ್ಕಾರ ಅತ್ಯಂತ ದಟ್ಟವಾಗಿದೆ. ರಾಜಸ್ಥಾನದಂತಹ ರಾಜ್ಯದಲ್ಲಿ `ಕಾಫ್ ಪಂಚಾಯತ್’ ಹೆಸರಿನ ವ್ಯವಸ್ಥೆಯೊಂದು ಹಳ್ಳಿಗಳಲ್ಲಿ ಕೆಳ ವರ್ಗದ ಹಾಗೂ ಅಸಹಾಯಕ ಬಡವರನ್ನು ಬಹಿಷ್ಕಾರ ಹಾಕಿ ಹುರಿದು ಮುಕ್ಕುತ್ತಿದೆ. ಇದು ಸರ್ಕಾರ ಸೇರಿದಂತೆ ಎಲ್ಲರಿಗೂ ತಿಳಿದಿರುವ ಬಹಿರಂಗ ವಾಸ್ತವ. ಹೀಗಿದ್ದಾಗ ಕರ್ನಾಟಕಕ್ಕೆ ಅಷ್ಟೇ ಅಲ್ಲ. ಇಡೀ ದೇಶಕ್ಕೆ ಇಂತಹ ಶಾಸನ ಅಗತ್ಯವಿದೆ.

ಇಲ್ಲಿನ ಕಾಯ್ದೆಯಲ್ಲಿ ಬಹಿಷ್ಕಾರ ವಿಧಿಸುವ ಪಂಚಾಯ್ತಿಗಳು, ಸ್ಥಳೀಯ ಗುಂಪುಗಳು, ಸಮುದಾಯದ ಪ್ರಮುಖರನ್ನು ಜೈಲು ಶಿಕ್ಷೆಗೆ ಗುರಿಪಡಿಸುವ ಮತ್ತು ಅಪರಾಧಿಯನ್ನಾಗಿಸುವ ಕಠಿಣ ಅಂಶಗಳಿವೆ. ಜೊತೆಗೆ ಒಂದು ಲಕ್ಷ ರೂಪಾಯಿಗಳವರೆಗೆ ದಂಡ ವಿಧಿಸಲಾಗುತ್ತದೆ.

ಕರ್ನಾಟಕದ ಈ ಕಾಯ್ದೆಯ ಹಲ್ಲುಗಳು ಬಿಗಿಯಾಗಿವೆ. ಯಾರಿಗಾದರೂ ಸಾಮಾಜಿಕ ಬಹಿಷ್ಕಾರ ಹಾಕಿದರೆ ನೇರವಾಗಿ ಜೈಲೇ ಗತಿಯಾಗಲಿದೆ; ಮಿಗಿಲಾಗಿ ಒಂದು ವೇಳೆ ಯಾರೂ ದೂರು ನೀಡದೇ ಇದ್ದರೂ, ಪೊಲೀಸರೇ ಸ್ವಯಂ ಪ್ರೇರಿತರಾಗಿ (ಸು ಮೊಟೊ) ದೂರು ದಾಖಲಿಸಿಕೊಳ್ಳಲಿದ್ದಾರೆ!

ಅಂತರ್ಜಾತೀಯ ವಿವಾಹಗಳ ಹಿನ್ನೆಲೆಯಲ್ಲಿ ಮರ್ಯಾದಾ ಹತ್ಯೆಯ ಪ್ರಕರಣಗಳು, ಬಾಲಕಿಯರ ಅತ್ಯಾಚಾರ, ಅಪಹರಣ ಇತ್ಯಾದಿಗಳು ಇತ್ತೀಚಿನ ದಿನಗಳಲ್ಲಿ ಮತ್ತೆ ಕ್ರೌರ್ಯ ಮೆರೆಯುತ್ತಿರುವಾಗ
ಒಂದು ಬೆಳಕಿಂಡಿ ಹೊರಬಂದಂತಾಗಿದೆ. ಸಾಮಾಜಿಕ ಬಹಿಷ್ಕಾರ ಅಷ್ಟೇ ಅಲ್ಲ. ಮರ್ಯಾದಾ ಹತ್ಯೆ ಮತ್ತು ವರ್ಗ ಸಂಘರ್ಷಕ್ಕೆ ಕಡಿವಾಣ ಹಾಕಲು ರಾಜ್ಯ ಇನ್ನಷ್ಟು ಯೋಚಿಸುವ ಅಗತ್ಯ ಈಗ ಹೆಚ್ಚಿದೆ.

Previous articleಇಬ್ಬರು ಹೆಣ್ಣುಮಕ್ಕಳನ್ನು ಕಾಲುವೆಗೆ ತಳ್ಳಿದ ತಂದೆ