ಕೊಪ್ಪಳ: ಸ್ವಂತ ಖರ್ಚಿನಲ್ಲಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳನ್ನು ಮುಖ್ಯಶಿಕ್ಷಕ ವಿಮಾನ ಪ್ರಯಾಣಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ.
ತಾಲೂಕಿನ ಬಹದ್ದೂರಬಂಡಿ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕ, ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷ ಬೀರಪ್ಪ ಅಂಡಗಿ ಶಾಲೆಯ 24 ವಿದ್ಯಾರ್ಥಿಗಳನ್ನು ಸ್ವಂತ ಖರ್ಚಿನಲ್ಲಿ ವಿಮಾನ ಪ್ರಯಾಣ ಮಾಡಿಸಲು ಮುಂದಾಗಿದ್ದಾರೆ.
ವಿದ್ಯಾರ್ಥಿಗಳನ್ನು ಪಾರದರ್ಶಕವಾಗಿ ಪರೀಕ್ಷೆಯ ಮೂಲಕ ಆಯ್ಕೆ ಮಾಡಿದ್ದಾರೆ. ಬೇರೆ ಶಾಲೆಯ ಶಿಕ್ಷಕರನ್ನು ನೇಮಕ ಮಾಡಿ, ಅವರೇ ಪ್ರಶ್ನೆ ಪತ್ರಿಕೆ ತಯಾರಿಸಿದ್ದರು. 2025ರ ಎಪ್ರಿಲ್ 14ರಂದು ಪರೀಕ್ಷೆ ನಡೆಸಿ, ಫಲಿತಾಂಶವನ್ನೂ ಕೂಡಾ ನೀಡಿದ್ದಾರೆ. ಒಟ್ಟು 220 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು, 5ರಿಂದ 8ನೇ ತರಗತಿಯ ವಿದ್ಯಾರ್ಥಿಗಳನ್ನು ತರಗತಿವಾರು ಆರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ.
ಈ ಮೊದಲು ಜಿಂದಾಲ್‌ನಿಂದ ಹೈದರಾಬಾದ್‌ಗೆ ಮಕ್ಕಳನ್ನು ಕರೆದುಕೊಂಡು ಹೋಗುವುದಾಗಿ ಬೀರಪ್ಪ ಘೋಷಿಸಿದ್ದರು. ಆದರೆ, ಹೈದರಾಬಾದಿಗೆ ವಿಮಾನ ಲಭ್ಯವಿಲ್ಲದ ಕಾರಣ ಜಿಂದಾಲ್ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಲೋಹದ ಹಕ್ಕಿಯಲ್ಲಿ ಹೊರಡಲು ನಿರ್ಧರಿಸಿದ್ದಾರೆ. ಊಟ ಹಾಗೂ ವಸತಿ ಸೌಲಭ್ಯ ಸಹ ಬೀರಪ್ಪ ಭರಿಸುತ್ತಿರುವುದು ಗಮನಾರ್ಹ.
ನಾಲ್ಕು ಲಕ್ಷ ರೂ. ವೆಚ್ಚ, ಡಿ. 26ಕ್ಕೆ ಪ್ರಯಾಣ: 24 ವಿದ್ಯಾರ್ಥಿಗಳ ವಿಮಾನ ಪ್ರಯಾಣ ವೆಚ್ಚ, ಊಟ ಹಾಗೂ ವಸತಿ ಸೇರಿದಂತೆ ಒಟ್ಟು ನಾಲ್ಕು ಲಕ್ಷ ರೂ. ಖರ್ಚಾಗಲಿದೆ. ಡಿ. 26ರಂದು ಜಿಂದಾಲ್ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸುತ್ತಿದ್ದಾರೆ. ಈ ಮೂಲಕ ಸರ್ಕಾರಿ ಶಾಲೆಯ ಬಗ್ಗೆ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದ್ದಾರೆ. ವಿಮಾನ ಪ್ರಯಾಣಕ್ಕಿಂತ ಮೊದಲು ವಿಮಾನ ನಿಲ್ದಾಣದಲ್ಲಿ ವಿದ್ಯಾರ್ಥಿಗಳಿಗೆ ವಿಮಾನದ ವಿವರವಾದ ಮಾಹಿತಿ ನೀಡಲು ಯೋಜನೆ ರೂಪಿಸಿದ್ದಾರೆ. ಇಂತಹ ವಿನೂತನ ಕಾರ್ಯಕ್ರಮಗಳನ್ನು ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಹಾಕಿಕೊಳ್ಳಬೇಕಿದೆ ಎನ್ನುತ್ತಾರೆ ಸಾರ್ವಜನಿಕರು.























