ದಾವಣಗೆರೆ: ತಾಳೆ ಎಣ್ಣೆ ತೋಟದಲ್ಲಿ ಆಕಸ್ಮಿಕವಾಗಿ ಅಗ್ನಿ ಅವಘಡ ಸಂಭವಿಸಿ ರೈತನೊಬ್ಬ ಬೆಂಕಿಗೆ ಆಹುತಿಯಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಕುರುವ ಗ್ರಾಮದಲ್ಲಿ ಬುಧವಾರ ನಡೆದಿದೆ.
ಗ್ರಾಮದ ಈಶ್ವರಪ್ಪ (80) ಬೆಂಕಿಗೆ ಆಹುತಿಯಾಗಿರುವ ರೈತ. 2.20 ಎಕರೆ ಜಮೀನಿನ ತೋಟದಲ್ಲಿ ತಾಳೆ ಬೆಳೆದಿದ್ದರು. ಎಂದಿನಂತೆ ತೋಟಕ್ಕೆ ಬೆಳಗ್ಗೆ ರೈತ ಈಶ್ವರಪ್ಪ ತೆರಳಿದ್ದರು. ಆಕಸ್ಮಿಕವಾಗಿ ತಗುಲಿದ ಬೆಂಕಿಯ ಕೆನ್ನಾಲಿಗೆಗೆ ರೈತ ಸುಟ್ಟು ಕರಕಲಾಗಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಮುಖ್ಯಮಂತ್ರಿ ಬದಲಾಯಿಸಿದರೆ ಕಾಂಗ್ರೆಸ್‌ಗೆ ತಕ್ಕಪಾಠ
ಬೆಂಕಿಯ ಜ್ವಾಲೆಗೆ 2 ಎಕರೆಯಷ್ಟು ತಾಳೆ ಬೆಳೆ ಸುಟ್ಟು ಕರಕಲಾಗಿದೆ. ಸುದ್ದಿ ತಿಳಿದ ತಕ್ಷಣವೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ತಹಶೀಲ್ದಾರ್ ಎಂ.ಪಿ. ಕವಿರಾಜ್, ಕಂದಾಯ ಅಧಿಕಾರಿ ಸಂತೋಷ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ರೈತನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ನ್ಯಾಮತಿ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ಇರಿಸಲಾಗಿದೆ.























