ಮೈಸೂರು: ಸಿಎಂ ಬದಲಾವಣೆ ಕುರಿತು ಚರ್ಚೆಗಳು ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನಲ್ಲಿ ಅಹಿಂದ ಮುಖಂಡರು ಮೈ ಕೆಡವಿ ನಿಂತಿದ್ದಾರೆ. ಗಣರಾಜ್ಯೋತ್ಸವ ಮುನ್ನ ದಿನ ಜನವರಿ 25ಕ್ಕೆ ಮೈಸೂರು ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಅಹಿಂದ ಸಮಾವೇಶ ಮೂಲಕ ಮತ್ತೊಮ್ಮೆ ಶಕ್ತಿ ಪ್ರದರ್ಶಿಸಿ ಎಐಸಿಸಿ ವರಿಷ್ಠರ ಗಮನ ಸೆಳೆಯಲು ಸಿದ್ಧತೆ ನಡೆಸಿದ್ದಾರೆ.
ಖಾಸಗಿ ಹೋಟೆಲ್‌ನಲ್ಲಿ ಬುಧವಾರ ಹಿಂದುಳಿದ ಜಾಗೃತ ವೇದಿಕೆ ವತಿಯಿಂದ ಆಯೋಜಿಸಿದ್ದ ಅಹಿಂದ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಬಹುತೇಕರು, ಸಿದ್ದರಾಮಯ್ಯ ಅವರ ಮೇಲೆ ಯಾವುದೇ ಆರೋಪ ಇಲ್ಲ ಹಾಗೂ ಹಗರಣ ನಡೆದಿಲ್ಲ. ಒಂದು ವೇಳೆ ಬದಲಾಯಿಸಿದರೆ ದೇವರಾಜ ಅರಸು ಅವರನ್ನು ಸಿಎಂ ಸ್ಥಾನದಿಂದ ಬದಲಾಯಿಸಿದಾಗ ಆದ ಗತಿಯೇ ಕಾಂಗ್ರೆಸ್‌ಗೆ ಬರಲಿದೆ ಎಂದು ಎಚ್ಚರಿಕೆ ನೀಡಿದರು.
ವೇದಿಕೆ ಅಧ್ಯಕ್ಷ ಕೆ.ಎಸ್. ಶಿವರಾಂ ಮಾತನಾಡಿ, ಪದೇ ಪದೇ ಸಿಎಂ ಸಿದ್ದರಾಮಯ್ಯ ಬದಲಾವಣೆ ಚರ್ಚೆಯಾಗುತ್ತಿದೆ. ಇದು ಸರಿ ಅಲ್ಲ. ಅಹಿಂದ ವರ್ಗಗಳನ್ನು ಕೆಣಕಬೇಡಿ ಎಂದರು. ಸಿದ್ದರಾಮಯ್ಯ ಅದೃಷ್ಟವಂತ ಮುಖ್ಯಮಂತ್ರಿ ಅಲ್ಲ ಅವರೊಬ್ಬ ಬದ್ಧತೆ ಇರುವ, ಸಿದ್ಧಾಂತ ಇರುವ ನಾಯಕ. ಅಹಿಂದ ಸಮುದಾಯಗಳಿಗಾಗಿ ಸಿದ್ದರಾಮಯ್ಯನವರು ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸು ನಂತರ ಸಿದ್ದರಾಮಯ್ಯ ಅವರೇ ಅಹಿಂದ ವರ್ಗದ ಧ್ವನಿಯಾಗಿದ್ದಾರೆ. ಉಳಿದ ಎರಡೂ ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಅವರೇ ಮುಂದುವರೆಯಲಿ ಎಂಬುದು ನಮ್ಮ ಉದ್ದೇಶ, ಸಾಮಾಜಿಕ ಶೈಕ್ಷಣಿಕ ಆರ್ಥಿಕ ವರದಿ ಜಾರಿಯಾಗಬೇಕು. ಇದು ಸಿದ್ದರಾಮಯ್ಯ ಅವರಿಂದ ಮಾತ್ರ ಸಾಧ್ಯ ಎಂದು ಹೇಳಿದರು.
ಕೋಮುವಾದಿಗಳಿಗೆ ಸಿದ್ದರಾಮಯ್ಯ ತಡೆಗೋಡೆಯಾಗಿದ್ದಾರೆ. ಹೀಗಾಗಿ ಅವರ ವಿರುದ್ಧ ಕೋಮುವಾದಿಗಳು, ಮೇಲ್ವರ್ಗದವರು ಷಡ್ಯಂತ್ರ ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರು ಅಹಿಂದ ಸಮುದಾಯಗಳ ಅಸ್ಮಿತೆ, ಯಾವುದೇ ಕಾರಣಕ್ಕೂ ಅವರನ್ನು ನಾವು ಬಿಟ್ಟುಕೊಡುವುದಿಲ್ಲ, ರಾಜ್ಯದಲ್ಲಿ 23 ಮುಖ್ಯಮಂತ್ರಿ ಆಗಿದ್ದರೂ ಅಹಿಂದ ವರ್ಗಕ್ಕೆ ನ್ಯಾಯ ಸಿಕ್ಕಿಲ್ಲ, ಮುಂದಿನ ನಮ್ಮ ಪೀಳಿಗೆಯ ಅಳಿವು ಉಳಿವಿನ ವಿಚಾರ ಸಿದ್ದರಾಮಯ್ಯ ಅವರ ಮುಂದಿದೆ. ಹೀಗಾಗಿ ಜನವರಿ 25ರಂದು ವಸ್ತು ಪ್ರದರ್ಶನದ ಆವರಣದಲ್ಲಿ ಬೃಹತ್ ಸಮಾವೇಶ ಆಯೋಜನೆ ಮಾಡಲಾಗಿದೆ. ಸಮುದಾಯದ ಆಶೋತ್ತರಗಳು ಏನು, ಕಷ್ಟ ಸುಖಗಳೇನು, ಅಹಿಂದ ವರ್ಗಕ್ಕೆ ಏನೆಲ್ಲಾ ಆಗಬೇಕು ಎನ್ನುವ ವಿಚಾರಗಳು ಚರ್ಚೆ ಮಾಡಲಾಗುತ್ತದೆ. 15 ರಿಂದ 20 ಸಾವಿರ ಜನ ಸೇರಿಸುವ ನಿಟ್ಟಿನಲ್ಲಿ ಯಾವ ರೀತಿ ರೂಪುರೇಷೆ ತಯಾರಿಸಲಾಗುವುದು ಎಂದು ಮಾಹಿತಿ ನೀಡಿದರು.
ಕೆಲವು ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಲಘುವಾಗಿ ಮಾತನಾಡುತ್ತಿದ್ದಾರೆ. ಒಂದು ಸಮುದಾಯದ ಮತಗಳಿಂದ ಮಾತ್ರ ಜನಪ್ರತಿನಿಧಿಯಾಗಲು ಸಾಧ್ಯವಿಲ್ಲ, ಅಹಿಂದ ಮತಗಳ ಬೆಂಬಲವಿಲ್ಲದೆ ಜನ ನಾಯಕನಾಗಲು ಸಾಧ್ಯವಿಲ್ಲ. ಈ ಸಮಾವೇಶ ಯಾರು ವಿರುದ್ಧವೂ ಅಲ್ಲ, ಶಕ್ತಿಪ್ರದರ್ಶನವೂ ಅಲ್ಲ, ಆದರೆ ಅಹಿಂದ ವರ್ಗಕ್ಕೆ ಸಿದ್ದರಾಮಯ್ಯ ಅವರ ಅವಶ್ಯಕತೆ ಯಾಕಿದೆ ಅನ್ನೋದನ್ನ ತಿಳಿ ಹೇಳಬೇಕಾದ ಕಾರಣದಿಂದ ಈ ಎಲ್ಲಾ ವಿಚಾರಗಳು ಚರ್ಚೆ ಮಾಡುವ ಉದ್ದೇಶದಿಂದ ಈ ಸಮಾವೇಶ ಆಯೋಜನೆ ಮಾಡಲಾಗಿದೆ ಎಂದು ಶಿವರಾಂ ಹೇಳಿದರು.
ಮುಖಂಡರಾದ ಜನಾರ್ದನ್ ಜೆನ್ನಿ ಮಾತನಾಡಿ, ಅಹಿಂದ ವರ್ಗ ಸಮ ಸಮಾಜದ ಕನಸು ಕಾಣಲೇಬಾರದಾ? ಅಹಿಂದ ವರ್ಗದ ಆಶೋತ್ತರಗಳು ಈಡೇರಲೇಬಾರದಾ? ಸ್ವಾತಂತ್ರ‍್ಯ ಬಂದು ಇಷ್ಟು ವರ್ಷಗಳ ಆದರೂ ಕೂಡಾ ಅಹಿಂದ ವರ್ಗಕ್ಕೆ ನ್ಯಾಯ ಸಿಕ್ಕಿಲ್ಲ, ಭಾರತ ದೇಶದ ಚರಿತ್ರೆ ಹಾಗೂ ಸಂವಿಧಾನವನ್ನು ತಿರುಚಲಾಗುತ್ತಿದೆ. ಸಂವಿಧಾನ ಬದಲಾವಣೆ ಮಾಡುವುದಾಗಿ ಹೇಳಲಾಗುತ್ತಿದೆ.
ಸಿದ್ದರಾಮಯ್ಯ ಅವರ ವ್ಯಕ್ತಿತ್ವ, ಈ ನೆಲದ ಬಡಜನರ ಕಷ್ಟ ಸುಖಗಳನ್ನು ತಿಳಿದಿರುವ ಒಬ್ಬ ಜನನಾಯಕ, ಅಂತಹ ನಾಯಕತ್ವ ಇಂದಿನ ಪರಿಸ್ಥಿತಿಗೆ ಅವಶ್ಯಕ. ಸಂಸ್ಕೃತಿ ಮಾನವೀಯತೆ ಉಳಿಯಬೇಕಾದರೆ ಸಿದ್ದರಾಮಯ್ಯ ಬೇಕು ಅವರ ಬೆಂಬಲಕ್ಕೆ ನಿಲ್ಲುವುದಾಗಿ ಹೇಳಿದರು.






















