ಅಂದುಕೊಂಡಿದ್ದನ್ನು ಶಾಮನೂರು ಶಿವಶಂಕರಪ್ಪ ಮಾಡಿ ಹೋಗಿದ್ದಾರೆ

0
1

ಬೆಂಗಳೂರು: ಮಾಜಿ ಸಚಿವ ದಿ. ಶಾಮನೂರು ಶಿವಶಂಕರಪ್ಪ ಅವರ ಅನುಪಸ್ಥಿತಿಯಲ್ಲಿ ಭವಿಷ್ಯದಲ್ಲಿ ವೀರಶೈವ ಲಿಂಗಾಯತ ಸಮಾಜದ ಸಾಮಾಜಿಕ ರಾಜಕೀಯ ಸವಾಲುಗಳನ್ನು ನಿಭಾಯಿಸಲು ಮಹಾಸಭೆ ಅಡಿಯಲ್ಲಿ ಎಲ್ಲರೂ ಸೇರಿ ಕೆಲಸ ಮಾಡಿದಾಗ ಮಾತ್ರ ಶಾಮನೂರು ಶಿವಶಂಕರಪ್ಪ ಅವರಿಗೆ ನಿಜವಾದ ಶ್ರದ್ಧಾಂಜಲಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಇತ್ತೀಚೆಗೆ ನಿಧನ ಹೊಂದಿದ ಅಖಿಲ ಭಾರತ ವೀರಶೈವ ಮಹಾಸಭೆ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರಿಗೆ ಬೆಂಗಳೂರಿನ ತರಳಬಾಳು ಮಠದಲ್ಲಿ ಏರ್ಪಡಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರತಿಯೊಬ್ಬ ಮನುಷ್ಯನಿಗೆ ಜೀವನದ ಉತ್ಸಾಹ ಉಳಿಸಿಕೊಂಡು ಹೊಗುವುದು ಕಷ್ಟ ಆದರೆ ಶಾಮನೂರು ಶಿವಶಂಕರಪ್ಪ ಎಂದು ಉತ್ಸಾಹ ಕಳೆದುಕೊಂಡಿರಲಿಲ್ಲ. ಅವರು ಬದುಕನ್ನು ಬಹಳ ಪ್ರೀತಿಸಿದರು. ನಾವು ಕಳೆದು ಹೋದ ಮೇಲೆ ಬಹಳ ಚಿಂತೆ ಮಾಡುತ್ತೇವೆ. ಅವರು ತಾವು ಅಂದುಕೊಂಡಿದ್ದನ್ನು ಮಾಡಿ ಹೋಗಿದ್ದಾರೆ ಎಂದರು.

ಒಬ್ಬ ಮನುಷ್ಯನಿಗೆ ಎರಡು ವಿಚಾರ ಬಹಳ ಕಷ್ಟ, ಹುಟ್ಟಿದಾಗ ಮಕ್ಕಳ ಮುಖ ಬಹಳ ಮುಗ್ಧವಾಗಿರುತ್ತವೆ. ದೊಡ್ಡವರಾದ ಮೇಲೆ ಮಗ್ಧತೆ ಇರುವುದಿಲ್ಲ. ಯಾಕೆಂದರೆ ಮನಸ್ಸು ಶುದ್ಧ ಇರುವುದಿಲ್ಲ. ಶಾಮನೂರು ಶಿವಶಂಕರಪ್ಪ ಅವರ ಮುಖದಲ್ಲಿ ಮಗುವಿನ ಮುಗ್ಧತೆ ಇತ್ತು. ಅವರು ಶ್ರೀಮಂತಿಕೆಯನ್ನು ಎಲ್ಲೂ ತೋರಿಸಿಕೊಡಲಿಲ್ಲ ಎಂದರು.

ಆತ್ಮಸಾಕ್ಷಿಯಂತೆ ನಡೆದುಕೊಳ್ಳುವುದು ಕಷ್ಟ ಅವರು ಇದ್ದದ್ದು ಇದ್ದಂಗೆ ನುಡಿಯುತ್ತಿದ್ದರು. ನಮಗೆ ಅಂದುಕೊಂಡಂಗೆ ಬದುಕುವುದು ಕಷ್ಟ, ಇನ್ನೊಬ್ಬರ ಸಲುವಾಗಿ ಬದುಕುತ್ತೇವೆ ಶಾಮನೂರು ತಮ್ಮ ಇಚ್ಚೆಯಂತೆ ಬದುಕಿದರು. ಶ್ರೀಮಂತ ಇದ್ದರೂ ಶ್ರೀಮಂತಿಕೆ ತೋರಿಸಲಿಲ್ಲ. ಎಲ್ಲ ಕ್ಷೇತ್ರದಲ್ಲಿ ಸಾಧನೆ ಮಾಡಿದರೂ ಹೇಳಿಕೊಳ್ಳುತ್ತಿರಲಿಲ್ಲ ಎಂದು ಹೇಳಿದರು.

ಶಾಮನೂರು ಶಿವಶಂಕರಪ್ಪ ಅವರಿಗೆ ವಯಸ್ಸಿಗೆ ಮೀರಿದ ಸ್ನೇಹಿತರಿದ್ದರು. ಸಮಯ ಪ್ರಜ್ಞೆ ಅವರಿಗೆ ಇತ್ತು ಹಣಕಾಸಿನ ಪ್ರಜ್ಞೆ ಅವರಲ್ಲಿ ಇತ್ತು. ಅವರು ಮಾಡಿರುವ ದಾನಗಳು ಸಾರ್ಥಕತೆ ಕೂಡಿದ್ದವು. ಹಾಸ್ಟೆಲ್, ಶಿಕ್ಷಣ ಸಂಸ್ಥೆ ದೇವಸ್ಥಾನಕ್ಕೆ ದಾನ ಕೊಟ್ಡಿದ್ದಾರೆ. ಸಮಾಜ ಕಟ್ಟುವಲ್ಲಿ ಬಹಳ ಶ್ರಮ ವಹಿಸಿದ್ದರು. ಮುಖ್ಯಮಂತ್ರಿಯನ್ನೇ ಬಿಡಲಿಲ್ಲ ಅವರು ಸಮಾಜದ ಸಲುವಾಗಿ ನಿಷ್ಠುರವಾಗಿದ್ದರು ಎಂದರು.

ಸಮಾಜ ಒಬ್ಬ ಮಾರ್ಗದರ್ಶಕನನ್ನು ಕಳೆದುಕೊಂಡಿದೆ. ಶಾಮನೂರು ಶಿವಶಂಕರಪ್ಪ ಅವರು ಇಲ್ಲದಿರುವಾಗ ಮಹಾಸಭೆಯನ್ನು ಉಳಿಸಿಕೊಂಡು ಹೋಗುವುದು ಈಶ್ವರ ಖಂಡ್ರೆಯವರ ಮೇಲೆ ದೊಡ್ಡ ಜವಾಬ್ದಾರಿ ಇದೆ. ಅದನ್ನು ನಿಭಾಯಿಸುತ್ತಾರೆ ಎನ್ನುವ ವಿಶ್ವಾಸ ಇದೆ ಎಂದರು.

ಬಹಳ ದೊಡ್ಡ ಸಮಾಜ, ಬಹಳ ಬುದ್ಧಿವಂತರು, ಇದ್ದಾಗ ನಿಭಾಯಿಸುವುದು ಕಷ್ಟ. ವೀರಶೈವ ಮಹಾಸಭೆಯ ನೇತೃತ್ವದಲ್ಲಿ ಎಲ್ಲರೂ ಸೇರಿ ಕೆಲಸ ಮಾಡಬೇಕು. ಮಹಾಸಭೆ ಕಟ್ಟಲು ಎಲ್ಲರೂ ಸಮಯ ಕೊಡಬೇಕು. ಆ ಮಹಾಸಭೆ ಭವಿಷ್ಯ ಉಜ್ವಲವಾದಾಗ ಮಾತ್ರ ಶಾಮನೂರು ಶಿವಶಂಕರಪ್ಪ ಅವರಿಗೆ ನಿಜವಾದ ಶ್ರದ್ಧಾಂಜಲಿ ಸಲ್ಲಿಸಿದಂತಾಗುತ್ತದೆ ಎಂದರು.

Previous articleಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತ್ ಚುನಾವಣೆ: ಬಿಜೆಪಿ ಭರ್ಜರಿ ಜಯ