ಜಿಲ್ಲಾಧಿಕಾರಿ ಉದ್ಘಾಟನೆ, ಮೂಕ ಮಕ್ಕಳು–ಮಹಿಳಾ ಪೌರಕಾರ್ಮಿಕರಿಗೆ ಮೊದಲ ಅವಕಾಶ
ದಾಂಡೇಲಿ: ಕರಾವಳಿ ಉತ್ಸವದ ಅಂಗವಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಮೊದಲ ಬಾರಿಗೆ ಹೆಲಿ ಟೂರಿಜಂ (Heli Tourism) ಪರಿಚಯಿಸಲಾಗಿದ್ದು, ಪ್ರವಾಸೋದ್ಯಮಕ್ಕೆ ಹೊಸ ಆಯಾಮ ನೀಡಿದೆ. ತುಂಬೆ ಏವಿಯೇಷನ್ ಸಂಸ್ಥೆಯ ಹೆಲಿಕಾಪ್ಟರ್ ಹಾರಾಟಕ್ಕೆ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಅವರು ಅಧಿಕೃತವಾಗಿ ಚಾಲನೆ ನೀಡುವ ಮೂಲಕ ಈ ವಿಶಿಷ್ಟ ಯೋಜನೆಯನ್ನು ಉದ್ಘಾಟಿಸಿದರು.
ಈ ಸಂದರ್ಭ ಶಾಸಕ ಸತೀಶ್ ಸೈಲ್, ಜಿಲ್ಲಾ ಪಂಚಾಯತ್ ಸಿಇಒ ದಿಲೀಷ್, ಪ್ರವಾಸೋದ್ಯಮ ಅಧಿಕಾರಿ ಮಂಗಳ ಗೌರಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಕರಾವಳಿ ಉತ್ಸವದ ವೇದಿಕೆಯಲ್ಲಿ ಆರಂಭವಾದ ಹೆಲಿಕಾಪ್ಟರ್ ಹಾರಾಟವು ಪ್ರವಾಸಿಗರು ಹಾಗೂ ಸಾರ್ವಜನಿಕರಲ್ಲಿ ವಿಶೇಷ ಆಕರ್ಷಣೆಯಾಗಿ ಮೂಡಿಬಂದಿದೆ.
ಇದನ್ನೂ ಓದಿ: ಮಂಕಿ ಪಟ್ಟಣ ಪಂಚಾಯತ್ ಬಿಜೆಪಿ ಪಾಲು
ವಿಶೇಷರಿಗೆ ಮೊದಲ ಆದ್ಯತೆ: ಸಾಮಾಜಿಕ ಕಾಳಜಿಯ ಭಾಗವಾಗಿ, ಕರಾವಳಿ ಉತ್ಸವದ ಅಂಗವಾಗಿ ಹೆಲಿಕಾಪ್ಟರ್ ತಿರುಗಾಟಕ್ಕೆ ಮೊದಲ ಅವಕಾಶವನ್ನು ಮೂಕ ಮಕ್ಕಳು ಹಾಗೂ ಮಹಿಳಾ ಪೌರಕಾರ್ಮಿಕರಿಗೆ ಕಲ್ಪಿಸಲಾಯಿತು. ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಅವರು ಸ್ವತಃ ಮಹಿಳಾ ಪೌರಕಾರ್ಮಿಕರೊಂದಿಗೆ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಿ, ಕಾರವಾರ ಪ್ರದೇಶದ ಏರಿಯಲ್ ವ್ಯೂ ಸವಿದರು. ಈ ಸಂದರ್ಭ ಮಹಿಳಾ ಪೌರಕಾರ್ಮಿಕರು ಅಪಾರ ಸಂತಸ ವ್ಯಕ್ತಪಡಿಸಿದರು.
ಇನ್ನು ಅಶಾ ನಿಕೇತನದ 35 ಜನ ಮೂಕ ಮಕ್ಕಳು ಹೆಲಿಕಾಪ್ಟರ್‌ನಲ್ಲಿ ಆಕಾಶಯಾನ ಮಾಡಿ, ಕರಾವಳಿ ಪ್ರದೇಶವನ್ನು ಮೇಲಿನಿಂದ ವೀಕ್ಷಿಸುವ ಅಪೂರ್ವ ಅನುಭವ ಪಡೆದು ಖುಷಿಪಟ್ಟರು. ಮಕ್ಕಳ ಮುಖದಲ್ಲಿ ಕಂಡ ಸಂತೋಷ ಉತ್ಸವಕ್ಕೆ ಇನ್ನಷ್ಟು ಮೆರುಗು ತಂದಿತು.
ಪ್ರವಾಸೋದ್ಯಮಕ್ಕೆ ಹೊಸ ಉತ್ಸಾಹ: ಹೆಲಿ ಟೂರಿಜಂ ಪರಿಚಯದಿಂದ ಕರಾವಳಿ ಹಾಗೂ ದಾಂಡೇಲಿ–ಕಾರವಾರ ಪ್ರವಾಸೋದ್ಯಮಕ್ಕೆ ಹೊಸ ಉತ್ತೇಜನ ದೊರೆಯಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ. ಕಾರವಾರ ಉತ್ಸವಕ್ಕೆ ಆಗಮಿಸಿರುವ ಪ್ರವಾಸಿಗರು ಈ ಹೆಲಿಕಾಪ್ಟರ್ ಹಾರಾಟದ ಅನುಭವವನ್ನು ಪಡೆದುಕೊಳ್ಳುವಂತೆ ತುಂಬೆ ಏವಿಯೇಷನ್ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ದಾಕ್ಷಾಯಿಣಿ ಶೆಟ್ಟಿ ಅವರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ನ್ಯೂಜಿಲೆಂಡ್ ವರ, ಚಳ್ಳಕೆರೆ ವಧು: ದಾವಣಗೆರೆಯಲ್ಲಿ ಅಪರೂಪದ ಹಿಂದೂ ಸಂಪ್ರದಾಯದ ಮದುವೆ
ಹೆಲಿಕಾಪ್ಟರ್ ಹಾರಾಟದ ಮೂಲಕ ಸಮುದ್ರ ತೀರ, ಅರಣ್ಯ ಪ್ರದೇಶ, ನದಿಗಳ ಸೌಂದರ್ಯವನ್ನು ಮೇಲಿನಿಂದ ವೀಕ್ಷಿಸುವ ಅವಕಾಶ ಲಭ್ಯವಾಗಿದ್ದು, ಮುಂದಿನ ದಿನಗಳಲ್ಲಿ ಈ ಸೇವೆಗೆ ಹೆಚ್ಚಿನ ಪ್ರತಿಕ್ರಿಯೆ ಸಿಗಲಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.























