ದಾವಣಗೆರೆ: ನ್ಯೂಜಿಲೆಂಡ್ ವರ ಮತ್ತು ಕರ್ನಾಟಕದ ಚಳ್ಳಕೆರೆ ವಧುವಿನ ಅಪರೂಪದ ಮದುವೆ ದಾವಣಗೆರೆಯಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಹಿಂದೂ ವಿಧಿವಿಧಾನಗಳೊಂದಿಗೆ ಅದ್ಧೂರಿಯಾಗಿ ನೆರವೇರಿತು. ನ್ಯೂಜಿಲೆಂಡ್‌ನಲ್ಲಿ ವಾಸವಿರುವ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ಪಿ. ನಾಗರಾಜ್ ಹಾಗೂ ರಾಣಿ ನಾಗರಾಜ್ ದಂಪತಿಯ ಪುತ್ರಿ ಪೂಜಾ ನಾಗರಾಜ್ ಮತ್ತು ನ್ಯೂಜಿಲೆಂಡ್ ಮೂಲದ ಯುವಕ ಕ್ಯಾಂಪ್‌ಬೆಲ್ ವಿಟ್‌ವರ್ಥ್ ಅವರ ವಿವಾಹ ಸಮಾರಂಭವು ಎಲ್ಲರ ಗಮನ ಸೆಳೆಯಿತು.
ದಾವಣಗೆರೆಯ ಖಾಸಗಿ ರೆಸಾರ್ಟ್‌ನಲ್ಲಿ ನಡೆದ ಈ ವಿವಾಹ ಸಮಾರಂಭದಲ್ಲಿ ಸಂಪೂರ್ಣವಾಗಿ ಹಿಂದೂ ಸಂಪ್ರದಾಯಗಳನ್ನು ಪಾಲಿಸಲಾಗಿದ್ದು, ಅರಿಶಿನ ಶಾಸ್ತ್ರ, ಮದುವೆ ಶಾಸ್ತ್ರ, ಸಪ್ತಪದಿ ಸೇರಿದಂತೆ ಎಲ್ಲ ವಿಧಿವಿಧಾನಗಳು ಶಾಸ್ತ್ರೋಕ್ತವಾಗಿ ನೆರವೇರಿದವು. ನ್ಯೂಜಿಲೆಂಡ್‌ನಿಂದ ಆಗಮಿಸಿದ್ದ ವರನ ಸಂಬಂಧಿಕರು ಹಾಗೂ ವಧುವಿನ ಕುಟುಂಬದವರು ಈ ಸಂಭ್ರಮದ ಕ್ಷಣಗಳಿಗೆ ಸಾಕ್ಷಿಯಾದರು.
ಇದನ್ನೂ ಓದಿ: ನನ್ನ ಆ ಮಾತು ಯಾರಿಗೆ ಅರ್ಥ ಆಗಬೇಕೋ ಅವರಿಗೆ ಆಗಿದೆ: ಕಿಚ್ಚ ಸುದೀಪ್
ವಿಶೇಷವೆಂದರೆ, ನ್ಯೂಜಿಲೆಂಡ್‌ನ ಸಂಸ್ಕೃತಿಯಲ್ಲಿ ಬೆಳೆದಿದ್ದರೂ ಕೂಡ ಕ್ಯಾಂಪ್‌ಬೆಲ್ ವಿಟ್‌ವರ್ಥ್ ಅವರು ಭಾರತೀಯ ಸಂಪ್ರದಾಯಗಳ ಬಗ್ಗೆ ಅಪಾರ ಗೌರವ ತೋರಿ, ಹಿಂದೂ ಪದ್ಧತಿಯಂತೆ ಪೂಜಾ ನಾಗರಾಜ್ ಅವರೊಂದಿಗೆ ಸಪ್ತಪದಿ ತುಳಿದರು. ಭಾರತೀಯ ಸಂಸ್ಕೃತಿ, ಆಚರಣೆಗಳು ಹಾಗೂ ಕುಟುಂಬ ಮೌಲ್ಯಗಳನ್ನು ಹೃದಯಂಗಮ ಮಾಡಿಕೊಂಡು ಮದುವೆಯಾದ ಈ ಜೋಡಿ ಎಲ್ಲರ ಮನ ಗೆದ್ದಿತು.
ವಿವಾಹ ಸಮಾರಂಭದಲ್ಲಿ ಭಾರತೀಯ ಸಂಸ್ಕೃತಿಯ ಸೊಗಡು, ಸಂಪ್ರದಾಯಗಳ ವೈಭವ ಹಾಗೂ ಕುಟುಂಬದ ಆತ್ಮೀಯತೆ ಸ್ಪಷ್ಟವಾಗಿ ಕಾಣಿಸಿಕೊಂಡಿತು. ವಧು–ವರರು ಖುಷಿ ಖುಷಿಯಾಗಿ ಭಾರತೀಯ ಸಂಪ್ರದಾಯದಂತೆ ವಿವಾಹವಾಗಿ ಹೊಸ ಜೀವನಕ್ಕೆ ಕಾಲಿಟ್ಟರು. ಈ ಮದುವೆ ಸಂಸ್ಕೃತಿಗಳ ಸಂಗಮವಾಗಿ ದಾವಣಗೆರೆಯಲ್ಲಿ ವಿಶಿಷ್ಟ ಉದಾಹರಣೆಯಾಗಿ ಉಳಿಯಿತು.























