ಮಂತ್ರಾಲಯ: ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ನಿರ್ದೇಶಕ ರಿಷಭ್ ಶೆಟ್ಟಿ ಅವರು ಬುಧವಾರ ತಮ್ಮ ಕುಟುಂಬದೊಂದಿಗೆ ಆಂಧ್ರಪ್ರದೇಶದ ಪ್ರಸಿದ್ಧ ಶ್ರೀಕ್ಷೇತ್ರ ಮಂತ್ರಾಲಯಕ್ಕೆ ಭೇಟಿ ನೀಡಿ ಶ್ರೀ ರಾಘವೇಂದ್ರ ಸ್ವಾಮಿಗಳವರ ಮೂಲ ಬೃಂದಾವನದ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಭಕ್ತಿಭಾವದಿಂದ ದರ್ಶನ ಪಡೆದ ರಿಷಭ್ ಶೆಟ್ಟಿ ಅವರು ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗ್ರಹವನ್ನು ಪಡೆದು, ತಮ್ಮ ಮುಂದಿನ ವೈಯಕ್ತಿಕ ಹಾಗೂ ಸಿನಿ ಜೀವನದ ಯಶಸ್ಸಿಗಾಗಿ ಪ್ರಾರ್ಥಿಸಿದರು. ದರ್ಶನದ ಬಳಿಕ ಅವರು ಶ್ರೀಮಠಕ್ಕೆ ಭೇಟಿ ನೀಡಿ, ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರನ್ನು ಭೇಟಿ ಮಾಡಿದರು.
ಇದನ್ನೂ ಓದಿ: ನನ್ನ ಆ ಮಾತು ಯಾರಿಗೆ ಅರ್ಥ ಆಗಬೇಕೋ ಅವರಿಗೆ ಆಗಿದೆ: ಕಿಚ್ಚ ಸುದೀಪ್
ಈ ಸಂದರ್ಭದಲ್ಲಿ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ನಿರ್ದೇಶಕ ರಿಷಭ್ ಶೆಟ್ಟಿ ಹಾಗೂ ಅವರ ಕುಟುಂಬಕ್ಕೆ ಶೇಷವಸ್ತ್ರ, ಸ್ಮರಣಿಕೆ ಮತ್ತು ಫಲ–ಮಂತ್ರಾಕ್ಷತೆಯನ್ನು ನೀಡಿ ಆಶೀರ್ವದಿಸಿದರು. ರಿಷಭ್ ಶೆಟ್ಟಿ ಅವರ ಕಲಾ ಸೇವೆ ಇನ್ನಷ್ಟು ಜನಮನ ಸೆಳೆಯಲಿ, ಧಾರ್ಮಿಕತೆ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯ ಯಶಸ್ವಿಯಾಗಲಿ ಎಂದು ಆಶೀರ್ವಚನ ನೀಡಿದರು.
ರಿಷಭ್ ಶೆಟ್ಟಿ ಅವರು ಇತ್ತೀಚಿನ ವರ್ಷಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಹಾಗೂ ಮೌಲ್ಯಾಧಾರಿತ ಚಿತ್ರಗಳ ಮೂಲಕ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಅವರ ಮಂತ್ರಾಲಯ ದರ್ಶನದ ಸುದ್ದಿ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ದೇವಸ್ಥಾನ ಆವರಣದಲ್ಲಿ ರಿಷಭ್ ಶೆಟ್ಟಿ ಅವರನ್ನು ಕಂಡ ಭಕ್ತರು ಹಾಗೂ ಅಭಿಮಾನಿಗಳು ಫೋಟೋ ಮತ್ತು ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.























